ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೂರಾರು ಮನವಿ
ಕ.ಪ್ರ.ವಾರ್ತೆ ಮೈಸೂರು ಆ. 3
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮಧ್ಯಾಹ್ನ ರಸ್ತೆ ಮೂಲಕ ಮೈಸೂರಿಗೆ ಆಗಮಿಸಿದ್ದು, ರಾಮಕೃಷ್ಣನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಉಳಿದುಕೊಂಡಿದ್ದಾರೆ.
ಸ್ವಲ್ಪ ಹೊತ್ತು ವಿಶ್ರಾಂತಿ ಬಳಿಕ ಮನೆಯ ಹೊರಗೆ ನೆರೆದಿದ್ದ ನೂರಾರು ಮಂದಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರಿಂದ ಮನವಿ ಸ್ವೀಕರಿಸಿದರು. ಇದೇ ವೇಳೆ ಕೆಲವು ಅಭಿಮಾನಿಗಳು ಫಲ ಪುಷ್ಪ ನೀಡಿ ಸನ್ಮಾನಿಸಿದರು.
ಬಳಿಕ ಹೃದಯಾಘಾತದಿಂದ ನಿಧನರಾದ ನಟಿ ರಮ್ಯಾ ಅವರ ಸಾಕು ತಂದೆ ನಾರಾಯಣ್ ಅವರ ಒಂಟಿಕೊಪ್ಪಲಿನಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಭಾನುವಾರ ಬೆಳಗ್ಗೆ ಅವರು ಬೆಂಗಳೂರಿಗೆ ತೆರಳುವರು.
ಕಲಾಪಕ್ಕೆ ವಕೀಲರ ಬಹಿಷ್ಕಾರ
ಮೈಸೂರು: ನ್ಯಾಯಾಲಯದ ಶಿರಸ್ತೇದಾರ ನಾಗೇಂದ್ರಪ್ರಸಾದ್ ಅವರನ್ನು ಸ್ವಸ್ಥಾನಕ್ಕೆ ಕಳುಹಿಸಲು ಆಗ್ರಹಿಸಿ ಮೈಸೂರು ವಕೀಲರ ಸಂಘದವರು ಶನಿವಾರ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದರು. ನಂಜನಗೂಡು ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಗೇಂದ್ರಪ್ರಸಾದ್ ಅವರನ್ನು 2 ತಿಂಗಳ ಮಟ್ಟಿಗೆ ಮೈಸೂರು ನ್ಯಾಯಾಲಯಕ್ಕೆ ನಿಯೋಜಿಸಲಾಗಿತ್ತು. ಆದರೆ, 8 ತಿಂಗಳಾದರೂ ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸಿಲ್ಲ. ವಕೀಲರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ವಾಪಸ್ ಕಳುಹಿಸುವರೆಗೂ ನ್ಯಾಯಾಲಯ ಕಲಾಪದಿಂದ ದೂರ ಉಳಿಯಲು ತೀರ್ಮಾನಿಸಿರುವುದಾಗಿ ವಕೀಲರ ಸಂಘದ ಅಧ್ಯಕ್ಷ ಸಿ. ಬಸವರಾಜು ತಿಳಿಸಿದ್ದಾರೆ.
ಕಾರ್ಯಕ್ರಮ ಮುಂದೂಡಿಕೆ
ಮೈಸೂರು: ಕರ್ನಾಟಕ 24 ಮನೆ ತೆಲುಗುಶೆಟ್ಟರ ಸಂಘದಿಂದ ಆ. 4 ರಂದು ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸೆ. 1ಕ್ಕೆ ಮುಂದೂಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಆರೋಗ್ಯ ಶಿಬಿರ
ಮೈಸೂರು: ಮೈಸೂರು ಆಯುಷ್ ಹೆಲ್ತ್ ಆರ್ಗನೈಸೇಷನ್, ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ, ಶಿಬಾನಿಸ್ ಸ್ಕೂಲ್ ಆಫ್ ಗೋಲ್ ವತಿಯಿಂದ ಆ. 5ರಿಂದ 30 ದಿನಗಳವರೆಗೆ ಆಕ್ಕೂಪ್ರೆಷರ್, ಸುಜೋಕ್ ಮತ್ತು ಮ್ಯಾಗ್ನೆಟಿಕ್ ಶಿಬಿರ ಏರ್ಪಡಿಸಲಾಗಿದ್ದು, ಮೊ. 9449218698 ಸಂಪರ್ಕಿಸಬಹುದು.
ಯೋಗಾಸನ ಶಿಬಿರ
ಮೈಸೂರು: ಚಾಮರಾಜ ಮೊಹಲ್ಲಾದಲ್ಲಿರುವ ವೇದವ್ಯಾಸ ಯೋಗ ಪ್ರತಿಷ್ಠಾನದಲ್ಲಿ ಆ. 5 ರಿಂದ ಸೆ. 4 ರವರೆಗೆ ಒಂದು ತಿಂಗಳ ಯೋಗಾಸನ ಶಿಬಿರ ಏರ್ಪಡಿಸಲಾಗಿದ್ದು, ಮೊ. 9448174457 ಸಂಪರ್ಕಿಸಬಹುದು.
ಸ್ವಾಗತ ಸಮಾರಂಭ
ಮೈಸೂರು: ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆ. 5ರ ಬೆಳಗ್ಗೆ 10.30ಕ್ಕೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಏರ್ಪಡಿಸಿದ್ದು, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್, ಶಾಸಕ ಗೋ. ಮಧುಸೂದನ್, ಡೈ. ಸೈಯದ್ ಶಕೀಬ್ ಉರ್ ರೆಹಮಾನ್ ಭಾಗವಹಿಸುವರು.
ಇಂದು ವಿದ್ಯುತ್ ವ್ಯತ್ಯಯ
ನಂಜನಗೂಡು: ಪಟ್ಟಣದ ವ್ಯಾಪ್ತಿಗೆ ಬರುವ ಖಾಸಗಿ ಬಸ್ ನಿಲ್ದಾಣದ ಹತ್ತಿರ ಆ. 5ರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ನ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ವಿದ್ಯುತ್ ಅಡಚಣೆಗೊಳಗಾಗುವ ಪ್ರದೇಶಗಳು- ಚಾಮಲಾಪುರದ ಬೀದಿ, ಮುಸ್ಲಿಂ ಬ್ಲಾಕ್, ರಾಜಾಜಿ ಕಾಲೋನಿ, ನರಸಣ್ಣನ ಅಗ್ರಹಾರ, ತಮ್ಮಡಗೇರಿ, ಕಾಯಂಗಡಿ ಬೀದಿ, ಶ್ರೀಕಂಠೇಶ್ವರ ದೇವಸ್ಥಾನ, ಹಳ್ಳದ ಕೇರಿ, ಬಜಾರ್ ಸ್ಟ್ರೀಟ್, ವಕ್ಕಲಗೆರೆ, ಉರ್ದು ಸ್ಕೂಲ್ ಹಿಂಭಾಗ ಮತ್ತು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು.
ಅರ್ಜಿ ಆಹ್ವಾನ
ನಂಜನಗೂಡು: ತಾಲೂಕಿನ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ 2012- 13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕ ಪಡೆದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಪ. ಜಾತಿ ವಿದ್ಯಾರ್ಥಿಗಳಿಗೆ ಕಪಿಲ ಎಜುಕೇಷನ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಹ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊ. 9886783626, 9986462703 ಸಂಪರ್ಕಿಸಬಹುದು.
ವ್ಯಕ್ತಿ ನಾಪತ್ತೆ
ಟಿ. ನರಸೀಪುರ: ತಾಲೂಕಿನ ಯಾಕನೂರು ಗ್ರಾಮದಲ್ಲಿ ಸಿದ್ದಯ್ಯ (46) ಎಂಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಚಹರೆ- ಕಪ್ಪು ಮೈಬಣ್ಣ, ದುಂಡು ಮುಖ, ಕಪ್ಪು ಬಿಳಿ ಕೂದಲು, ಸಾಧಾರಣ ಮೈಕಟ್ಟು, 5.5 ಅಡಿ ಎತ್ತರ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ, ಮೈಸೂರು ಎಸ್ಪಿ ಕಚೇರಿ ಅಥವಾ ಟಿ. ನರಸೀಪುರ ಪೊಲೀಸ್ ಠಾಣೆ ದೂ. 08227- 261227ಗೆ ತಿಳಿಸುವಂತೆ ಕೋರಲಾಗಿದೆ.
ವ್ಯಕ್ತಿ ಶವ ಪತ್ತೆ
ಟಿ. ನರಸೀಪುರ: ಪಟ್ಟಣದ ಗರ್ಗೇಶ್ವರಿ ಮುಖ್ಯ ರಸ್ತೆಯ ಸತೀಶ್ ಬ್ಯಾಟರಿ ಸರ್ವೀಸ್ ಸ್ಟೇಷನ್ ಬಳಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಚಹರೆ- 40 ರಿಂದ 45 ವರ್ಷ, ಕಪ್ಪು ಬಿಳಿ ಮಿಶ್ರಿತ ಕೂದಲು, ಸಾಧಾರಣ ಶರೀರ. ವಾರಸುದಾರರು ಇದ್ದಲ್ಲಿ ದೂ. 0887- 261227 ಸಂಪರ್ಕಿಸುವಂತೆ ಕೋರಲಾಗಿದೆ.