ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಕ್ಷ್ಮಣತೀರ್ಥ ಪ್ರವಾಹ: ಅಪಾರ ನಷ್ಟ

Srinivasa Murthy VN
Updated On : 4 Aug 2013, 12:33 pm

ಕ.ಪ್ರ.ವಾರ್ತೆ ಮೈಸೂರು ಆ. 3
ಜಿಲ್ಲೆಯಲ್ಲಿ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರಿಗೆ ನಿಯಮಾನುಸಾರ ನೀಡಬೇಕಾದ ಪರಿಹಾರವನ್ನು ಮೂರು ದಿನಗಳ ಒಳಗಾಗಿ ವಿತರಿಸಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾಪ್ರಸಾದ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ, ಪ್ರವಾಹ ಹಾಗೂ ಮಳೆ- ಬೆಳೆ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಇತ್ತೀಚಿನ ಅತಿವೃಷ್ಟಿಯಿಂದ 4 ಪಕ್ಕಾ ಮನೆಗಳು ಪೂರ್ಣ ಹಾನಿಗೀಡಾಗಿದ್ದು, 3.35 ಲಕ್ಷ ಹಾನಿ ಅಂದಾಜಿಸಲಾಗಿದೆ. 494 ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದ್ದು, 68.54 ಲಕ್ಷ ಹಾನಿ ಅಂದಾಜಿಸಿದ್ದು, ಒಟ್ಟಾರೆ ಹಾನಿ ಪ್ರಮಾಣ 71.89 ಲಕ್ಷಗಳಾಗಿವೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಮಾಹಿತಿ ನೀಡಿದರು.
ಸಾರ್ವಜನಿಕ ಆಸ್ತಿಗೆ ಸಂಬಂಧಿಸಿ ಮಳೆಯಿಂದಾಗಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಂದು ಕೆರೆ ಹಾನಿಗೀಡಾಗಿದ್ದು, 6.50 ಲಕ್ಷ ಹಾನಿ ಅಂದಾಜು ಮಾಡಲಾಗಿದೆ. ವಿದ್ಯುತ್ ಸಲಕರಣೆಗಳಿಗೆ ಹೆಚ್ಚಿನ ಹಾನಿಯಾಗಿದ್ದು, 167 ಪ್ರಕರಣಗಳಲ್ಲಿ ಒಟ್ಟಾರೆ 18.75 ಲಕ್ಷ ಹಾನಿಯಾಗಿದೆ.
9 ಕಿಮೀ ರಸ್ತೆ ಹಾಳಾಗಿದ್ದು, 30 ಲಕ್ಷ ಹಾನಿಯಾಗಿದೆ. 17 ಸೇತುವೆ ಹಾನಿಗೀಡಾಗಿದ್ದು, 9.50 ಲಕ್ಷ ನಷ್ಟ ಸಂಭವಿಸಿದೆ. 73 ಖಾಸಗಿ ಕಟ್ಟಡಗಳ ಹಾನಿ ಪ್ರಮಾಣ 35.50 ಲಕ್ಷ, ನೀರು ಪೂರೈಕೆಯ ವ್ಯವಸ್ಥೆಯ 26 ಪ್ರಕರಣಗಳಲ್ಲಿ 6.60 ಲಕ್ಷ ಎಲೆಕ್ಟ್ರಿಕಲ್ ಹಾನಿ 14 ಲಕ್ಷ ಹೀಗೆ ಒಟ್ಟಾರೆ 96.50 ಲಕ್ಷ ಹಾನಿ ಏಪ್ರಿಲ್ ಒಂದರಿಂದ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಏಪ್ರಿಲ್‌ನಿಂದ ಹುಣಸೂರು ತಾಲೂಕಿನಲ್ಲಿ ಒಬ್ಬರು ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಬ್ಬರು ಮಳೆ ಸಂಬಂಧ ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರ ಸಂಬಂಧಿಕರಿಗೆ ತಲಾ 1.5 ಲಕ್ಷ ಪರಿಹಾರ ವಿತರಿಸಲಾಗಿದೆ. 10 ಜಾನುವಾರುಗಳು ಮೃತಪಟ್ಟಿದ್ದು 5.56 ಲಕ್ಷ ಹಾನಿ ಅಂದಾಜಿಸಿದ್ದು, ಈಗಾಗಲೇ ಕೆಲವು ಪ್ರಕರಣಗಳಲ್ಲಿ ಪರಿಹಾರ ವಿತರಿಸಿದೆ. 145 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರದ ಹಾನಿ ಅಂದಾಜು 46 ಲಕ್ಷ, 185 ಹೆಕ್ಟೇರ್ ಕೃಷಿ ಕ್ಷೇತ್ರದ ಅಂದಾಜು ಹಾನಿ 7.67 ಲಕ್ಷ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಾನುವಾರುಗಳ ಸಾವಿನ ಸಂಬಂಧ ನಾಲ್ಕು ಪ್ರಕರಣಗಳಲ್ಲಿ 64 ಸಾವಿರ, ಮನೆಗಳ ಹಾನಿ ಸಂಬಂಧ 1.8 ಲಕ್ಷ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಒಟ್ಟಾರೆ 5.83 ಲಕ್ಷ ಪರಿಹಾರ ವಿತರಿಸಿದೆ ಎಂದು ತಿಳಿಸಿದರು.
ಈ ವರ್ಷದ ಜನವರಿಯಿಂದ ಆ. 2 ರವರೆಗೆ ಜಿಲ್ಲೆಯ ವಾಡಿಕೆ ಮಳೆ 404 ಮಿಮೀ ಇದ್ದು, 457 ಮಿಮೀ ಮಳೆಯಾಗಿದೆ. ಕಳೆದ ಎರಡು ತಿಂಗಳಿಂದ ವಾಡಿಕೆ ಮಳೆಯಲ್ಲಿ ಯಾವುದೆ ಕೊರತೆಯಾಗಿಲ್ಲ. ಜೂನ್ ತಿಂಗಳಲ್ಲಿ 84 ಮಿಮೀ ಬದಲಾಗಿ 114 ಮಿಮೀ, ಜುಲೈ ತಿಂಗಳಲ್ಲಿ 109 ಮಿಮೀ ಬದಲಾಗಿ 157 ಮಿಮೀ ಮಳೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು. ಮುಂಗಾರು ಹಂಗಾಮಿನ ಗುರಿಯಲ್ಲಿ ಶೇ. 58ರಷ್ಟು ಬಿತ್ತನೆ ಪೂರ್ಣಗೊಂಡಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಯಾವುದೆ ಕೊರತೆ ಇಲ್ಲ ಎಂದು ವಿವರಿಸಿದರು.
ನೂತನ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ ಹಾಗೂ ಕ್ಷೀರಭಾಗ್ಯ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಲು ಅಮಿತಾಪ್ರಸಾದ್ ಸೂಚಿಸಿದರು. ಮೊದಲ ಆರು ತಿಂಗಳು ಯೋಜನೆ ಅನುಷ್ಠಾನದಲ್ಲಿ ಎಚ್ಚರಿಕೆ ವಹಿಸಿದಲ್ಲಿ ವ್ಯವಸ್ಥೆ ಒಂದು ಹಂತಕ್ಕೆ ಬರುತ್ತದೆ ಎಂದು ಹೇಳಿದರು.
ಡೆಂಘೀ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದರೂ, ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ವಿಶೇಷ ಗಮನಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್, ಜಿಪಂ ಸಿಇಒ ಪಿ.ಎ. ಗೋಪಾಲ್, ಹುಣಸೂರು ಹಾಗೂ ಮೈಸೂರು ಉಪವಿಭಾಗಾಧಿಕಾರಿಗಳು, ಎಲ್ಲ ತಹಸೀಲ್ದಾರರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement