ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಮಾ ಏಜೆಂಟರ ಸಂಘಟನೆ ಅಸ್ಥಿರಗೊಳಿಸಲು ಕೇಂದ್ರ ಹುನ್ನಾರ

Srinivasa Murthy VN
Updated On : 4 Aug 2013, 12:32 pm

ಕ.ಪ್ರ.ವಾರ್ತೆ ಹುಣಸೂರು ಆ. 3
ಎಲ್‌ಐಸಿಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಏಜೆಂಟರು ವಿಮಾ ಪಾಲಿಸಿದಾರರೊಂದಿಗೆ ದೇಶಪ್ರೇಮ ಹೋರಾಟ ಮಾಡಬೇಕಿದೆ. ಸಂಘಟನೆಯ ಹಲವಾರು ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಿದಲ್ಲಿ ಮಾತ್ರ ಸಂಸ್ಥೆ ಹಾಗೂ ಏಜೆಂಟರು ಉಳಿಯಲು ಸಾಧ್ಯ ಎಂದು ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಅಖಿಲ ಭಾರತ ಕಾರ್ಯದರ್ಶಿ ಕಾಂ. ಎಲ್. ಮಂಜುನಾಥ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘಟನೆಯ ತಾಲೂಕು ಶಾಖೆಯ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಜೀವ ವಿಮಾ ನಿಗಮದ ಅಡಿಪಾಯವಾಗಿರುವ ವಿಮಾ ಏಜೆಂಟರ ಸದೃಢ ಸಂಘಟನೆ ಅಸ್ಥಿರಗೊಳಿಸಲು ಕೇಂದ್ರ ಸರ್ಕಾರವು ವಿವಿಧ ಕಾಯ್ದೆ ಜಾರಿಗೆ ತರುವ ಹುನ್ನಾರ ನಡೆಸಿದೆ ಹಾಗೂ 1956ರಲ್ಲಿ ಪ್ರಾರಂಭಗೊಂಡ ಎಲ್‌ಐಸಿಯು ದೇಶದಲ್ಲಿ ವಿಮಾ ವ್ಯವಹಾರ ನಡೆಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ದೇಶದ ಮಹತ್ವಾಕಾಂಕ್ಷೆಯ ಪಂಚವಾರ್ಷಿಕ ಯೋಜನೆಗಳಿಗೆ ವಿಮಾ ಸಂಸ್ಥೆ 5.25 ಲಕ್ಷ ಕೋಟಿ ಆರ್ಥಿಕ ಸಹಾಯವನ್ನು ಸರ್ಕಾರಕ್ಕೆ ನೀಡಿದೆ. ಆದರೆ, ದೇಶದ ಅವಿಭಾಜ್ಯ ಅಂಗವಾಗಿರುವ ಎಲ್‌ಐಸಿಯನ್ನು ಮೂಲೆಗುಂಪು ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಶಾಖೆಯ ವ್ಯವಸ್ಥಾಪಕ ಸುರೇಂದ್ರ ಮಾತನಾಡಿ, ಹೋರಾಟವೆಂದರೆ ಕೇವಲ ಕೆಂಪು ಬಾವುಟ ಹಿಡಿದು ರಸ್ತೆಗಿಳಿಯುವುದಲ್ಲ. ಬದಲಾಗಿ ಹೋರಾಟ ನಮ್ಮ ಆರ್ಥಿಕ, ಸಾಮಾಜಿಕ ಹಾಗೂ ವೈಯಕ್ತಿಕ ವ್ಯಕ್ತಿತ್ವವನ್ನು ವಿಕಸನಗೊಳಿಸುವಂತಾಗಬೇಕು. ಈ ನಿಟ್ಟಿನಲ್ಲಿ ಏಜೆಂಟರ ಸಂಘಟನೆ ತಮ್ಮ ಬೇಡಿಕೆಗಳಿಗಾಗಿ ಸಂಘಟನಾತ್ಮಕ ಹೋರಾಟ ನಡೆಸಲಿ ಎಂದು ಹೇಳಿದರು.
ಸಭೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕಾಂ. ಕೆ. ಬಸವರಾಜು, ಸಂಘಟನೆಯ ತಾಲೂಕು ಅಧ್ಯಕ್ಷ ಸಿ. ಶಿವಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ರಮೇಶ್ ಮಾತನಾಡಿದರು.
ಉಪಶಾಖಾಧಿಕಾರಿ ಶ್ರೀಕಾಂತ್, ಎಐಐಇಎ ಅಧ್ಯಕ್ಷ ಚಾಮರಾಜ್, ಮೈಸೂರು ವಿಭಾಗೀಯ ಸಂಚಾಲಕ ಸಿ. ಪ್ರದೀಪ್, ಖಜಾಂಚಿ ತಿಪ್ಪೇಸ್ವಾಮಿ, ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಜಯಣ್ಣ, ಸುರೇಶ್, ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಸವರಾಜು ವಿ. ಕಲ್ಕುಣಿಕೆ ಸೇರಿದಂತೆ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement