ನಿಲ್ಲದ ಬಸ್ಸಿಗೆ ಕಲ್ಲು ಹೊಡೆದ ವಿದ್ಯಾರ್ಥಿಗಳು
ಮೈಸೂರು: ನಿಗದಿತ ಜಾಗದಲ್ಲಿ ನಿಲ್ಲದೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಲ್ಲು ತೂರಿ ಗಾಜು ಪುಡಿ ಮಾಡಿರುವ ಘಟನೆ ಜಯಪುರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೈಸೂರು ತಾಲೂಕು ಜಯಪುರದಿಂದ ನಿತ್ಯ ನೂರಾರು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯ ನಿಮಿತ್ತ ಮೈಸೂರಿಗೆ ಬರುತ್ತಾರೆ. ಹೀಗಾಗಿ ಹಲವರು ಬಸ್ ಪಾಸ್ ಮಾಡಿಸಿಕೊಂಡಿದ್ದಾರೆ. ನಿಗದಿತ ಜಾಗದಲ್ಲಿ ಚಾಲಕರು ಬಸ್ ನಿಲ್ಲಿಸದೆ ಮುಂದೆ ಹೋಗುತ್ತಿದ್ದರು. ಕೆಲವು ಬಸ್ಸುಗಳು ಮಾತ್ರ ನಿಗದಿತ ಜಾಗದಲ್ಲಿ ನಿಲ್ಲುತ್ತಿದ್ದವು. ಪ್ರತಿನಿತ್ಯ ಬಸ್ಗಳನ್ನು ನಿಲ್ಲಿಸದೇ ಹೋಗುತ್ತಿದ್ದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದರು. ಎಚ್.ಡಿ. ಕೋಟೆ ಡಿಪೋಗೆ ಸೇರಿದ ಬಸ್ಸು, ಕೋಟೆಯಿಂದ ಮೈಸೂರಿಗೆ ಬರುತ್ತಿತ್ತು. ನಿಗದಿತ ಸ್ಥಳದಲ್ಲಿ ಚಾಲಕ ಬಸ್ ನಿಲ್ಲಿಸದೆ ಮುಂದೆ ಹೋಗುತ್ತಿದ್ದರಿಂದ ಕುಪಿತಗೊಂಡ ಕೆಲವು ಪ್ರಯಾಣಿಕರು ಕಲ್ಲು ತೂರಿದ್ದು, ಹಿಂಭಾಗದ ಗಾಜು ಪುಡಿಯಾಗಿದೆ.