'ತಂತ್ರಜ್ಞಾನದಿಂದ ವೈಯಕ್ತಿಕ ಭದ್ರತೆಗೆ ಆತಂಕ'
ಕ.ಪ್ರ.ವಾರ್ತೆ ಮೈಸೂರು ಆ. 22
ಆಧುನಿಕ ತಂತ್ರಜ್ಞಾನ ವೈಯಕ್ತಿಕ ಭದ್ರತೆಗೆ ಆತಂಕ ಸೃಷ್ಟಿಸುತ್ತಿವೆ ಎಂದು ಬೆಂಗಳೂರಿನ ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿಯ ವಿಶ್ರಾಂತ ನಿರ್ದೇಶಕ ಡಾ.ಎ.ಆರ್. ಉಪಾಧ್ಯ ಅಭಿಪ್ರಾಯಪಟ್ಟರು.
ನಗರದ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಇನ್‌ಫರ್ಮೇಷನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಮತ್ತು ಇನ್ಸ್‌ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಆಚರಣೆ ಆಂಗವಾಗಿ ಗುರುವಾರ ಆಯೋಜಿಸಿದ್ದ ಟೆಕ್ವಿಪ್ ಪ್ರಾಯೋಜಿತ ಎರಡನೆ ಅಡ್ವಾನ್ಸಸ್ ಇನ್ ಕಂಪ್ಯೂಟಿಂಗ್, ಕಮ್ಯುನಿಕೇಷನ್ ಆ್ಯಂಡ್ ಇನ್‌ಫರ್ಮೇಟಿಕ್ಸ್ (ಐಸಿಎಸಿಸಿಐ) ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಂವಹನ ತಂತ್ರಜ್ಞಾನ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಸಾಧಿಸಲಾಗಿದೆ. ಆದರೆ, ಆಧುನಿಕ ತಂತ್ರಜ್ಞಾನ ವೈಯಕ್ತಿಕ ಭದ್ರತೆಗೆ ಆತಂಕ ಸೃಷ್ಟಿಸುತ್ತಿವೆ. ಜಾಗತೀಕರಣದ ಪ್ರಭಾವದಿಂದ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಇಷ್ಟೊಂದು ಅಗಾಧವಾಗಿ ಬೆಳವಣಿಗೆ ಕಾಣಲು ಸಾಧ್ಯವಾಗಿದೆ. ಪರಿಣಾಮವಾಗಿ ಇಡೀ ವಿಶ್ವವೆ ಒಂದು ಜಾಗತಿಕ ಹಳ್ಳಿಯಾದಂತೆ ಆಗಿದೆ. 60ರ ದಶಕದಲ್ಲಿ ಇದ್ದಂಥ ತಂತ್ರಜ್ಞಾನಕ್ಕೆ ಹೋಲಿಸಿದರೆ, ಈಗಿನ ತಂತ್ರಜ್ಞಾನದ ಪ್ರಗತಿ ವಿಸ್ಮಯಕಾರಿ ಆಗಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ನಮ್ಮ ಅವಶ್ಯಕತೆ ಅದೆ ಮಟ್ಟದಲ್ಲಿ ಬೆಳೆಯುತ್ತಿದೆ. ಹಾಗಾಗಿ ತಂತ್ರಜ್ಞಾನ ನಿಂತ ನೀರಲ್ಲ. ಅದು ಯಾರನ್ನೂ ಕಾಯವುದು ಇಲ್ಲ. ಅಭಿವೃದ್ಧಿ ಮತ್ತು ವಿಸ್ತರಣೆಯೆ ತಂತ್ರಜ್ಞಾನದ ಜೀವಾಳ. ನಾವು ಆಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವುದನ್ನು ಕಲಿಯಬೇಕಷ್ಟೆ ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ಕೆರೂರ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಸಿಇ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ. ಸಂಗಮೇಶ್ವರ ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು. ಐಸಿಎಸಿಸಿಐನ ಅಧ್ಯಕ್ಷ ಹಾಗೂ ತ್ರಿವೇಂಡ್ರಂ ಐಐಐಟಿ-ಕೆಯ ಡಾ. ಸಾಬು ಎಂ. ತಂಪಿ ಅವರು ನಾಲ್ಕು ದಿನಗಳ ಈ ಸಮ್ಮೇಳನದ ಕುರಿತು ಪರಿಚಯ ಭಾಷಣ ಮಾಡಿದರು. ಮೆಕ್ಸಿಕೋದ ಮೆಕ್ಸಿಕನ್ ಅಕಾಡೆಮಿ ಆಫ್ ಸೈನ್ಸ್‌ನ ಡಾ. ಅಲೆಕ್ಸಾಂಡರ್ ಜೆಬುಕ್, ಎಸ್‌ಜೆಸಿಇ ಉಪ ಪ್ರಾಂಶುಪಾಲ ಸೈಯದ್ ಶಕೀಬ್ ಉರ್ ರಹಮಾನ್, ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ವಿ.ಎನ್. ಮಂಜುನಾಥ್ ಆರಾಧ್ಯ, ಡಾ.ಎಸ್.ಕೆ. ನಿರಂಜನ್ ಇದ್ದರು.