ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಲೆಗೆ ಬಿದ್ದು ಅಕ್ಕ- ತಂಗಿ ದುರ್ಮರಣ

Srinivasa Murthy VN
Updated On : 22 Aug 2013, 10:32 am

ಕ.ಪ್ರ.ವಾರ್ತೆ ನಂಜನಗೂಡು ಆ. 22
ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋದ ನವವಿವಾಹಿತೆಯ ತಂಗಿಯ ಪ್ರಾಣ ಉಳಿಸಲು ಹೋದ ಅಕ್ಕ ಸಹ ನೀರುಪಾಲಾಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಕಿರುಗುಂದ ಗ್ರಾಮದ ತಗಡೂರು ರಾಮಚಂದ್ರರಾವ್ ನಾಲೆಯಲ್ಲಿ ಗುರುವಾರ ಜರುಗಿದೆ. ತಾಲೂಕಿನ ಕಿರುಗುಂದ ಗ್ರಾಮದ ಪಿ. ಲಕ್ಷ್ಮಿ(18) ಹಾಗೂ ಆಕೆಯ ಅಕ್ಕ ಜಯಲಕ್ಷ್ಮಿ (20) ಮೃತಪಟ್ಟ ದುರ್ದೈವಿಗಳು. ಇವರಿಬ್ಬರ ಶವ ಗುರುವಾರ ಮಧ್ಯಾಹ್ನ 12ರ ಸಮಯದಲ್ಲಿ ಟಿ. ನರಸೀಪುರ ತಾಲೂಕಿನ ಸುಜ್ಜಲೂರು ಗ್ರಾಮದ ಕವರ್ ಡೆಕ್‌ನಲ್ಲಿ ಪತ್ತೆಯಾಗಿದೆ. ಅಕ್ಕ- ತಂಗಿಯರ ಸಾವಿನಿಂದಾಗಿ ಕುಟುಂಬದ ರೋದನ ಮುಗಿಲು ಮುಟ್ಟಿದೆ.
ಘಟನೆಯ ವಿವರ: ಕೆಲವು ತಿಂಗಳ ಹಿಂದೆಯಷ್ಟೇ ಲಕ್ಷ್ಮಿಗೆ ಅದೇ ಗ್ರಾಮದ ಕೂಲಿ ಕೆಲಸ ಮಾಡುತ್ತಿದ್ದ ಗಿರೀಶನ ಜತೆ ಮದುವೆ ಮಾಡಿ ಕೊಡಲಾಗಿತ್ತು. ಬುಧವಾರ ಬೆಳಗ್ಗೆ ಅಕ್ಕ- ತಂಗಿಯರಿಬ್ಬರೂ ಚರ್ಚೆಯಲ್ಲಿ ತೊಡಗಿದ್ದಾಗ ತಂಗಿ ಪಿ. ಲಕ್ಷ್ಮಿ ತಾಳ್ಮೆ ಕಳೆದುಕೊಂಡು ರಾಮಚಂದ್ರರಾವ್ ನಾಲೆಯ ಕಡೆಗೆ ಓಡಿ ಹೋದಾಗ ಗಾಬರಿಗೊಂಡ ಅಕ್ಕ ಜಯಲಕ್ಷ್ಮಿ ತಂಗಿಯನ್ನು ಹಿಂಬಾಲಿಸಿದಳು. ಏಕಾಏಕಿ ತುಂಬಿ ಹರಿಯುತ್ತಿರುವ ನಾಲೆಗೆ ಹಾರಿದ್ದನ್ನು ನೋಡಿದ ಅಕ್ಕ, ಆಕೆ ಪ್ರಾಣ ಉಳಿಸಲು ಮುಂದಾಗಿ ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪರಿಣಾಮ ಇಬ್ಬರೂ ನೀರು ಪಾಲಾದರೆಂದು ಪೊಲೀಸರು ತಿಳಿಸಿದ್ದಾರೆ. ನಾಲೆಗೆ ಬಿದ್ದ ಸುದ್ದಿ ತಿಳಿದ ಮೃತರ ತಂದೆ ಪಿ. ಪ್ರಭುಸ್ವಾಮಿ ಬದನವಾಳು ಠಾಣೆಗೆ ದೂರು ನೀಡಿದರು. ಶವಗಳನ್ನು ನಾಲೆಯಿಂದ ಹೊರತೆಗೆದು ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಸ್ಥಳಕ್ಕೆ ಡಿವೈಎಸ್ಪಿ ಎಸ್.ಜೆ. ವಿಜಯಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಎಸ್. ರಘು, ಎಸ್‌ಐ ಪ್ರಕಾಶ್ ಭೇಟಿ ನೀಡಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ರೈಲಿಗೆ ಸಿಕ್ಕಿ ಮಹಿಳೆ ಸಾವು
ಮೈಸೂರು:
ಹಳಿ ದಾಟುವ ವೇಳೆ ರೈಲಿಗೆ ಸಿಕ್ಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಅಶೋಕಪುರಂ- ಕಡಕೊಳ ರೈಲು ನಿಲ್ದಾಣಗಳ ನಡುವಿನ ರಮಾಬಾಯಿನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ರಮಾಬಾಯಿನಗರ ನಿವಾಸಿ ಪಾಪಶೆಟ್ಟಿ ಎಂಬವರ ಪತ್ನಿ ಕಾಮಾಕ್ಷಮ್ಮ (55) ಮೃತಪಟ್ಟವರು. ಇವರಿಗೆ ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ಶವ ಪರೀಕ್ಷೆ ಬಳಿಕ ಮೃತದೇಹವನ್ನು ಪುತ್ರಿ ಗೀತಾ ಅವರಿಗೆ ಪೊಲೀಸರು ಒಪ್ಪಿಸಿದ್ದಾರೆ. ಈ ಸಂಬಂಧ ಮೈಸೂರು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿದ್ದ ವ್ಯಕ್ತಿ ಸಾವು
ಮೈಸೂರು:
ಅಸ್ತಮಾದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಔಷಧಿ ಎಂದು ತಿಳಿದು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಇಲವಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ತಾಲೂಕು ಮೈದನಹಳ್ಳಿ ನಿವಾಸಿ ಪುಟ್ಟಸೋಮಾಚಾರಿ (70) ಮೃತಪಟ್ಟವರು. ಇವರು ಅಸ್ತಮಾದಿಂದ ಬಳಲುತ್ತಿದ್ದು, ಔಷಧಿ ಸೇವಿಸಿದ್ದರು. ಮಂಗಳವಾರ ರಾತ್ರಿ ಔಷಧಿ ಎಂದು ತಿಳಿದು ವಿಷ ಸೇವಿಸಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಈ ಸಂಬಂಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರು:
ಎಚ್.ಡಿ. ಕೋಟೆ ರಸ್ತೆಯಲ್ಲಿರುವ ನಾಚನಹಳ್ಳಿಪಾಳ್ಯ 1ನೇ ಮುಖ್ಯರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಶನಿವಾರ ಪತ್ತೆಯಾಗಿದೆ. ಚಹರೆ- 45 ವರ್ಷ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಎಡ ಎದೆಯ ಮೇಲೆ ಕಪ್ಪು ಕಾರೆ ಹರಳಿದೆ. ಮಾಸಲು ನೀಲಿ ಬಣ್ಣದ ಟೀ- ಶರ್ಟ್, ಸಿಮೆಂಟ್ ಬಣ್ಣದ ಸ್ವೆಟರ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 2418322, 522 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಎಸ್‌ಐ ಕ್ಯಾತೇಗೌಡ ಕೋರಿದ್ದಾರೆ.

ಮಹಿಳೆ ನಾಪತ್ತೆ
ಮೈಸೂರು:
ರಾಜೀವ ನಗರ ನಿವಾಸಿ ಇಲಿಯಾಸ್ ಪಾಷ ಎಂಬವರ ಪತ್ನಿ ಮುನೀರಾ (30) ಮಂಗಳವಾರದಿಂದ ನಾಪತ್ತೆಯಾಗಿದ್ದಾರೆ. ಇಲಿಯಾಜ್ ಮತ್ತು ಮುನೀರಾಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಈ ದಂಪತಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಹಿರಿಯರು ಸಮಾಧಾನಪಡಿಸುತ್ತಿದ್ದರು. ಕಾಣೆಯಾಗಿರುವ ಮಗಳನ್ನು ಪತ್ತೆ ಮಾಡಿಕೊಡುವಂತೆ ಮುನೀರಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.ಚಹರೆ- 5.2 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಉರ್ದು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ  ಸಿಕ್ಕಲ್ಲಿ ದೂ. 0821- 2418309, 509 ಸಂಪರ್ಕಿಸಲು ಉದಯಗಿರಿ ಠಾಣೆ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement