ಪಾಲಿಕೆ ಅಧಿಕಾರ 'ಕೈ' ತಪ್ಪಿಸಲು ಕಸರತ್ತು
-ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಆ. 22
ರಾಜ್ಯ ಸರ್ಕಾರ ಮೈಸೂರು ನಗರಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಮೀಸಲಾತಿ ಪ್ರಕಟಿಸುವುದರೊಂದಿಗೆ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳಲ್ಲಿ ಕಸರತ್ತು ಆರಂಭವಾಗಿದೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೂ, ಉಪ ಮೇಯರ್ ಸ್ಥಾನ ಪ.ಜಾತಿಗೂ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ಆರಂಭಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯದಂತೆ ನೋಡಿಕೊಳ್ಳಬೇಕು ಎಂಬ ಜಿದ್ದಿಗೆ ಇತರ ಪಕ್ಷಗಳು ಬಿದ್ದಂತಿವೆ. ಇದೀಗ ಮುಕ್ತಾಯವಾಗಿರುವ ಲೋಕಸಭೆ ಮತ್ತು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿನ ಹೊಂದಾಣಿಕೆ ಈ ಸಂದೇಹಕ್ಕೆ ಅವಕಾಶ ಮಾಡಿಕೊಟ್ಟಿದೆ.
ಪಾಲಿಕೆ ಚುನಾವಣೆ ನಡೆದು ಐದು ತಿಂಗಳಾದ ಬಳಿಕ ರಾಜ್ಯ ಸರ್ಕಾರ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಪ್ರಕಟಿಸಿದೆ. 65 ಸ್ಥಾನಗಳ ಪಾಲಿಕೆಯಲ್ಲಿ 22 ಕಾಂಗ್ರೆಸ್, 20 ಜೆಡಿಎಸ್, 12 ಬಿಜೆಪಿ, 3 ಎಸ್ಡಿಪಿಐ, 1 ಬಿಎಸ್ಆರ್, 1 ಕೆಜೆಪಿ ಮತ್ತು 6 ಮಂದಿ ಪಕ್ಷೇತರ ಸದಸ್ಯರು ಇದ್ದಾರೆ. ಅಲ್ಲದೆ, ಪಾಲಿಕೆಯಲ್ಲಿ 4 ಮಂದಿ ವಿಧಾನಸಭಾ ಸದಸ್ಯರು, 6 ಮಂದಿ ವಿಧಾನ ಪರಿಷತ್ ಸದಸ್ಯರು (ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಬೇಕಿದೆ) ಮತ್ತು ಓರ್ವ ಸಂಸದರಿಗೆ ಮತದಾನದ ಹಕ್ಕಿದೆ. ಅಲ್ಲಿಗೆ ಒಟ್ಟು 76 ಮಂದಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಆಗ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 39 ಮತ ಪಡೆದವರು ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗುತ್ತಾರೆ.
ಆಕಾಂಕ್ಷಿಗಳು: ಕಾಂಗ್ರೆಸ್ನಲ್ಲಿ ಮೇಯರ್ ಸ್ಥಾನಕ್ಕೆ ರತ್ನಮ್ಮ, ಉಮಾಮಣಿ, ಮಂಜುಳಾ ಮಾನಸ, ಭಾಗ್ಯವತಿ, ಪುಷ್ಪಲತಾ ಟಿ.ಬಿ. ಚಿಕ್ಕಣ್ಣ, ರಾಜಲಕ್ಷ್ಮೀ, ತಸ್ಲೀಂ, ಸಂಶದ್ ಬೇಗಂ, ಕಮಲ ಉದಯಕುಮಾರ್, ರಜನಿ ಇದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಭಾಗ್ಯವತಿ, ಕಮಲ ಉದಯಕುಮಾರ್ ಇದ್ದಾರೆ. ಆದರೆ, ಪುಷ್ಪಲತಾ ಟಿ.ಬಿ. ಚಿಕ್ಕಣ್ಣ ಈ ಹಿಂದೆ ಮೇಯರ್ ಆಗಿದ್ದ ಹಿನ್ನೆಲೆಯಲ್ಲಿ ಬೇರೊಬ್ಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಅಂತೆಯೆ ಉಪ ಮೇಯರ್ ಸ್ಥಾನಕ್ಕೆ ಪ.ಜಾತಿಯ ಪುರುಷೋತ್ತಮ್ ಇದ್ದರೂ ಅವರು ಈ ಹಿಂದೆ ಮೇಯರ್ ಆಗಿ ಕೆಲಸ ನಿರ್ವಹಿಸಿರುವುದರಿಂದ ಬೇರೆಯವರಿಗೆ ಅವಕಾಶ ಸಿಗಲಿದೆ.
ಒಂದು ವೇಳೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡರೆ ಕಳೆದ ಐದು ವರ್ಷಗಳ ಪಾಲಿಕೆ ಆಡಳಿತದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುರಿದು ಬೀಳಲಿದೆ. ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕೆ ಮಹದೇವಮ್ಮ, ವನಿತಾ ಪ್ರಸನ್ನ, ಪುಷ್ಪಾವತಿ, ರತ್ನ ಇದ್ದಾರೆ. ಆದರೆ ಉಪ ಮೇಯರ್ಗೆ ಪ.ಜಾತಿ ಅಭ್ಯರ್ಥಿ ಇಲ್ಲ. ಜೆಡಿಎಸ್ನಲ್ಲಿ ಉಪ ಮೇಯರ್ ಸ್ಥಾನಕ್ಕೆ ಪ. ಜಾತಿಯ ಶೈಲೇಂದ್ರ ಮತ್ತು ರಾಮು ಇದ್ದಾರೆ. ಅಂತೆಯೆ ಮೇಯರ್ ಸ್ಥಾನಕ್ಕೆ ರಾಜೇಶ್ವರಿ, ಇಂದಿರಾ ಮಹೇಶ್, ಹಸೀನಾ ತಾಜ್ ಮತ್ತು ಅನುಸೂಯ ಇದ್ದಾರೆ.
ಉಳಿದಂತೆ ಎಸ್ಡಿಪಿಐನ 3, 6 ಮಂದಿ ಪಕ್ಷೇತರ ಸದಸ್ಯರು, ಬಿಎಸ್ಆರ್ ಕಾಂಗ್ರೆಸ್ನ ಮತ್ತು ಕೆಜೆಪಿಯ ಒಬ್ಬೊಬ್ಬ ಸದಸ್ಯರು ಯಾರನ್ನು ಬೆಂಬಲಿಸುವರೋ ಎಂಬುದೂ ಗಣನೆಗೆ ಬರಲಿದೆ.
ಈ ಸಂಬಂಧ ಪಕ್ಷದ ವರಿಷ್ಠರ ಸೂಚನೆಯಂತೆ ಮುನ್ನಡೆಯುವುದಾಗಿ ಕಾಂಗ್ರೆಸ್ ನಗರ ಅಧ್ಯಕ್ಷ ಸಿ. ದಾಸೇಗೌಡ, ಬಿಜೆಪಿ ನಗರಾಧ್ಯಕ್ಷ ಮಾರುತಿರಾವ್ ಪವಾರ್, ಜೆಡಿಎಸ್ನ ಮುಖಂಡ ಸಂದೇಶ್ ಸ್ವಾಮಿ ತಿಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಪಕ್ಷದ ವರಿಷ್ಠರೊಡನೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಈ ಬಾರಿಯ ಲೋಕಸಭೆ ಮತ್ತು ವಿಧಾನ ಪರಿಷತ್ ಉಪ ಚುನಾವಣೆ ಫಲಿತಾಂಶದ ಬಳಿಕ ತೀರ್ಮಾನಿಸುವುದು ಒಳ್ಳೆಯದು ಎಂದು ಬಿಜೆಪಿ ನಗರ ಅಧ್ಯಕ್ಷ ಮಾರುತಿರಾವ್ ಪವಾರ್ ತಿಳಿಸಿದ್ದಾರೆ.
ಹೀಗಿದೆ ಅಧಿಕಾರದ ಲೆಕ್ಕಾಚಾರ
ಕಾಂಗ್ರೆಸ್ ಅಧಿಕಾರ ಹಿಡಿಯಲು ಜೆಡಿಎಸ್ ಬೆಂಬಲ ಅಥವಾ ಪಕ್ಷೇತರರ ಬೆಂಬಲ ಪಡೆಯಬೇಕು.
ಆದರೆ, ಈ ಬಾರಿಯ ಲೋಕಸಭೆ ಮತ್ತು ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ವಿರುದ್ಧ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸಹ ಜೆಡಿಎಸ್, ಕಾಂಗ್ರೆಸ್ಗೆ ಬೆಂಬಲ ನೀಡುವುದಿಲ್ಲ.
ಆದರೆ, ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡರೆ ಅಧಿಕಾರ ಹಿಡಿಯುವುದು ನಿಶ್ಚಿತ. ಜೆಡಿಎಸ್ನ 20 ಮಂದಿ ಮತ್ತು ಬಿಜೆಪಿಯ 12 ಮಂದಿ ಪಾಲಿಕೆ ಸದಸ್ಯರ ಜೊತೆಗೆ ಬಿಜೆಪಿಯ ಮೂವರು ವಿಧಾನ ಪರಿಷತ್ ಸದಸ್ಯರು, ಜೆಡಿಎಸ್ನ ಇಬ್ಬರು ವಿಧಾನ ಪರಿಷತ್ ಸದಸ್ಯರು ಮತ್ತು ಓರ್ವ ಜೆಡಿಎಸ್ ಶಾಸಕ ಮತ ಚಲಾಯಿಸುವ ಹಕ್ಕು ಹೊಂದಿರುವುದರಿಂದ ಸುಲಭವಾಗಿ ಅಧಿಕಾರ ಹಿಡಿಯಬಹುದು. ಅಲ್ಲದೆ, ಮೇಲ್ಮನೆ ಉಪ ಚುನಾವಣೆಯಲ್ಲಿ ಕೆಜೆಪಿಯ ಯು.ಎಸ್. ಶೇಖರ್ ಗೆದ್ದಲ್ಲಿ ಅವರ ಬೆಂಬಲವೂ ಸಿಗಲಿದೆ.