ರಾಜ್ಕುಮಾರ್ ಜಿಲ್ಲಾ ಬಿಜೆಪಿ ವಕ್ತಾರ
ಮೈಸೂರು: ಬಿಜೆಪಿಯ ಜಿಲ್ಲಾ ವಕ್ತಾರರಾಗಿ ಎನ್. ರಾಜ್ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ನೇಮಕ
ಮೈಸೂರು: ಬಿಜೆಪಿಯ ನಗರ ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವೇಶ್ವರನಗರದ ವೀವರ್ಸ್ ಕಾಲೋನಿಯ ನಿವಾಸಿ ವಿ. ಸೋಮಸುಂದರ್ ಅವರನ್ನು ನೇಮಕ ಮಾಡಲಾಗಿದೆ.
ನಿಲ್ಲದ ಮರಳು ಲಾರಿ ಮುಷ್ಕರ
ಮೈಸೂರು: ಮರಳು ಸಾಗಾಣಿಕೆಗೆ ರಹದಾರಿ, ಲಾರಿ ಬಾಡಿಗೆ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದವರು ಹಮ್ಮಿಕೊಂಡಿರುವ ಲಾರಿ ಮುಷ್ಕರವು ಗುರುವಾರ ಸಹ ಮುಂದುವರಿಯಿತು. ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ರೇವಣ್ಣ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಈ ಮುಷ್ಕರ ನಡೆಯುತ್ತಿದೆ.
3ನೇ ದಿನವೂ ಕಲಾಪ ಬಹಿಷ್ಕಾರ
ಮೈಸೂರು: ಶಿರಸ್ತೇದಾರ ಎ.ಎಂ. ನಾಗೇಂದ್ರ ಪ್ರಸಾದ್ ಅವರನ್ನು ಸ್ವಸ್ಥಾನಕ್ಕೆ ವಾಪಸ್ ಕಳುಹಿಸಲು ಒತ್ತಾಯಿಸಿ ಮೈಸೂರು ವಕೀಲರ ಸಂಘದವರು 3ನೇ ದಿನವಾದ ಗುರುವಾರ ಸಹ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದ್ದಾರೆ. ಗುರುವಾರ ಸರ್ವ ಸದಸ್ಯರ ಸಭೆ ಆ. 24 ರವರೆಗೆ ಬಹಿಷ್ಕಾರ ಮುಂದುವರಿಸಲು ಹಾಗೂ ನ್ಯಾಯಾಂಗ ಇಲಾಖೆಯ ಸಂಬಂಧಪಟ್ಟವರಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಸಿ. ಬಸವರಾಜು ತಿಳಿಸಿದ್ದಾರೆ.
ಕಾರ್ಮಿಕರಿಗೆ ಸವಲತ್ತು ನೀಡಿ
ಮೈಸೂರು: ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಯಾವ ಸವಲತ್ತು ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಭಾರತಮಾತಾ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜಿ. ಸಿದ್ದರಾಜು ಆರೋಪಿಸಿದರು. ಬಿಸಿಲು ಮಳೆ ಎನ್ನದೆ ದುಡಿಯುತ್ತಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ. ಕಾರ್ಮಿಕ ಇಲಾಖೆಯಿಂದ ಸಿಗುವ ಇಎಸ್ಐ, ವೃದ್ಧಾಪ್ಯ ವೇತನ, ಬಿಪಿಎಲ್ ಕಾರ್ಡ್ ನೀಡದಿರುವ ಸಮಸ್ಯೆಯಿಂದ ಕಾರ್ಮಿಕರು ಬೇಯುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಆ. 26 ರಂದು ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮರಳಿನ ಸಮಸ್ಯೆ: ಕಟ್ಟಡ ನಿರ್ಮಾಣಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಮರಳಿನ ಸಮಸ್ಯೆ ಇತ್ತೀಚೆಗೆ ಉಲ್ಬಣಗೊಂಡಿದೆ. ಹೊಸ ಮರಳು ನೀತಿಯಿಂದಾಗಿ ಮರಳೇ ಸಿಗುತ್ತಿಲ್ಲ. ಇದರ ನೇರ ಪರಿಣಾಮ ಕಟ್ಟಡ ಕಾರ್ಮಿಕರ ಮೇಲೆ ಬೀಳುತ್ತಿದೆ ಎಂದರು. ಪದಾಧಿಕಾರಿಗಳಾದ ಅಕ್ರಂ, ಸಾಬ್ಜಾನ್, ಸತೀಶ್, ಸಿದ್ದರಾಜು, ಮಹದೇವ್ ಇದ್ದರು.
ಅಖಿಲ ಭಾರತ ಶ್ವಾನ ಪ್ರದರ್ಶನ
ಮೈಸೂರು: ಮೈಸೂರು ಕೆನೆಲ್ ಕ್ಲಬ್ ವತಿಯಿಂದ ಆ. 25 ರಂದು ಮೈಸೂರಿನ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ 102 ಮತ್ತು 103ನೇ ಅಖಿಲ ಭಾರತ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9ಕ್ಕೆ ಜಿಲ್ಲಾಧಿಕಾರಿ ಸಿ. ಶಿಖಾ, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ ಸಲೀಂ ಉದ್ಘಾಟಿಸುವರು ಎಂದು ಮೈಸೂರು ಕೆನೆಲ್ ಕ್ಲಬ್ ಅಧ್ಯಕ್ಷ ಮಂಜುನಾಥ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.