ಡಾ. ನರೇಂದ್ರ ಹತ್ಯೆ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 24
ಮಹಾರಾಷ್ಟ್ರ- ಪುಣೆಯ ವಿಚಾರವಾದಿ ಡಾ. ನರೇಂದ್ರ ದಭೋಲ್ಕರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಖಂಡಿಸಿ ಪಿಯುಸಿಎಲ್ ಮತ್ತು ಮುಕ್ತ ಚಿಂತಕರ ವೇದಿಕೆ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿತು.
ಡಾ. ನರೇಂದ್ರ ಅವರ ಹತ್ಯೆ ವ್ಯವಸ್ಥಿತವಾಗಿದ್ದು, ಹತ್ಯೆ ಸ್ಥಳಕ್ಕೆ ಪಕ್ಕದಲ್ಲೇ ಪೊಲೀಸ್ ನಾಕಾಂಬದಿ ಇದ್ದರೂ ಆರೋಪಿಗಳು ಪರಾರಿಯಾಗಿದ್ದಾರೆ. ಡಾ. ನರೇಂದ್ರ ಅವರು ಎಂಬಿಬಿಎಸ್ ಪದವಿ ಪಡೆದ ಬಳಿಕ ಮಹಾರಾಷ್ಟ್ರಾದ್ಯಂತ ಮೂಢನಂಬಿಕೆ, ಕಂದಾಚಾರ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರು. ಜನರಲ್ಲಿ ವೈಜ್ಞಾನಿಕ ಜೀವನ ವಿಧಾನ ಪಾಲಿಸಬೇಕು ಎಂದು ಪ್ರೇರೇಪಿಸುತ್ತಿದ್ದರು ಎಂದು ಅವರು ತಿಳಿಸಿದರು.
ಇವರ ಹೋರಾಟಗಳನ್ನು ಅನೇಕ ಬಾರಿ ಪಟ್ಟಭದ್ರ ಸಂಘಟನೆಗಳು ವಿರೋಧಿಸುತ್ತಿದ್ದವು. ಡಾ. ನರೇಂದ್ರ ಅವರ ಅಗಲಿಕೆ ದೇಶದ ವಿಚಾರವಾದಿ ಚಳವಳಿಗೆ ದೊಡ್ಡ ಪೆಟ್ಟಾಗಿದೆ. ಈಗಿನ ಸಮಾಜದಲ್ಲಿ ಅವೈಜ್ಞಾನಿಕತೆ, ಮೂಢನಂಬಿಕೆಗಳ ವಿರುದ್ಧ ಮೇಲೆ ಹೇಳಿದ ಆಶಯಗಳ ಮಸೂದೆ ಕರ್ನಾಟಕದಲ್ಲೂ ಜಾರಿ ಆಗಬೇಕು ಎಂದು ಆಗ್ರಹಿಸಿದರು.
ಎಲ್ಲ ಮಾಧ್ಯಮಗಳು ಮೂಢನಂಬಿಕೆ, ಅಂಧಶ್ರದ್ಧೆ ಮತ್ತು ಅವೈಜ್ಞಾನಿಕತೆ ಪ್ರಚುರಪಡಿಸುವ ಪ್ರಬಲ ಸಾಧನಗಳಾಗಿವೆ. ಇವುಗಳ ಮೇಲೆ ಹತೋಟಿ ಸಾಧಿಸಿ ವೈಜ್ಞಾನಿಕ ಮನೋಭಾವವನ್ನು ಎತ್ತಿ ಹಿಡಿಯಲು ಪ್ರಭುತ್ವ ಮತ್ತು ನಾಗರಿಕರು ಯತ್ನಿಸಬೇಕು ಎಂದು ಒತ್ತಾಯಿಸಿದರು. ಪಿಯುಸಿಎಲ್ನ ಮುಖಂಡ ಡಾ. ವಿ.ಲಕ್ಷ್ಮಿನಾರಾಯಣ, ನಿವೃತ್ತ ಪ್ರಾಧ್ಯಾಪಕರಾದ ಡಾ. ರತಿರಾವ್, ವಿ.ಎನ್. ಲಕ್ಷ್ಮಿನಾರಾಯಣ, ಪ್ರೊ. ಶಬ್ಬೀರ್ ಮುಸ್ತಫಾ, ಪ್ರೊ. ಲತಾ ಕೆ. ಬಿದ್ದಪ್ಪ, ಪ್ರೊ. ಪಿ.ಎನ್.ಶ್ರೀದೇವಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಮೈಸೂರು ವಿವಿ ಪ್ರಾಧ್ಯಾಪಕ ಡಾ. ಪಂಡಿತಾರಾಧ್ಯ, ಮುಖಂಡರಾದ ಕೆ. ಮುದ್ದುಕೃಷ್ಣ, ಬಾದಲ್ ನಂಜುಂಡಸ್ವಾಮಿ, ಕೆ.ಎಸ್.ಶಿವರಾಮು, ಮರಿದೇವ ಬುದ್ಧ, ಕೃಷ್ಣೇಗೌಡ ಇದ್ದರು.