ಮಾತಿನಂತೆ ಬದುಕು ಆದಲ್ಲಿ ನೈತಿಕ ಧೈರ್ಯ ಸಿದ್ಧಿ: ನಾಗರತ್ನ
ಕ.ಪ್ರ.ವಾರ್ತೆ ಮೈಸೂರು ಆ. 24
ನಮ್ಮ ಮಾತು- ಬದುಕು ಒಂದೇ ಆದಲ್ಲಿ ನೈತಿಕ ಧೈರ್ಯ ತನ್ನಿಂತಾನೆ ಲಭಿಸುತ್ತೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕಿ, ಕನಕ ಪ್ರಶಸ್ತಿ ಪುರಸ್ಕೃತೆ ಡಾ. ಟಿ.ಎನ್.ನಾಗರತ್ನ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಸಂಘ ಹಾಗೂ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕನಕ ಸಂಸ್ಕೃತಿ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಸಂತಕವಿ ಕನಕದಾಸ ಅವರ ನಡೆ- ನುಡಿ ಒಂದೇ ಆಗಿತ್ತು. ತನಗೆ ಸರಿ ಕಾಣದ್ದನ್ನು ನೇರವಾಗಿ ವಿರೋಧಿಸುವ ದಾಷ್ಟ್ಯ ಬೆಳೆಸಿಕೊಂಡಿದ್ದರು. ಅವರು ಕವಿಯೂ ಹೌದು, ಕವಿದಾಸರೂ ಹೌದು. ತಮ್ಮ ಅನುಭವ ಎಲ್ಲವನ್ನು ಕೃತಿಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಅವರ ಕೃತಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಇಂದಿನ ಮಾಧ್ಯಮಗಳು ಮೌಢ್ಯ, ಕಂದಾಚಾರಗಳನ್ನು ಭಿತ್ತರಿಸುತ್ತಿವೆ. ಸಂತರು ಯಾವುದನ್ನು ವಿರೋಧಿಸಿದರೋ ಅವೆಲ್ಲವನ್ನು ಮಾಧ್ಯಮಗಳು ಮಾಡುತ್ತಿವೆ. ಬೆಳಗ್ಗೆ ಎದ್ದು ದೃಶ್ಯ ಮಾಧ್ಯಮ ನೋಡಿದರೆ ವಾಸ್ತು, ಭವಿಷ್ಯದ್ದೆ ಕಾರ್ಯಕ್ರಮ ಪ್ರಸಾರವಾಗುತ್ತಿರುತ್ತವೆ. ಹಾಗೆ ಹೆಣ್ಣಿನ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಚಾಮರಾಜನಗರದ ಲಂಬಾಣಿಗಳು ಮೊದಲ ಮಗು ಹೆಣ್ಣಾಗಿ, 2ನೇ ಮಗುವೂ ಹೆಣ್ಣಾದರೆ ಆ ಮಗುವಿಗೆ ಎಕ್ಕದ ಹಾಲು ಹಾಕಿ ಸಾಯಿಸುತ್ತಾರೆ. ಇಂತಹ ಮೌಢ್ಯವನ್ನು ತೊಡೆಯಲು ನಾವೆಲ್ಲ ಮುಂದಾಗಬೇಕಿದೆ ಎಂದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಮಾತನಾಡಿ, 16ನೇ ಶತಮಾನದಲ್ಲಿ ಬದುಕಿದ್ದ ಸಂತಕವಿ ಕನಕದಾಸರ ಜೀವನ, ಕೃತಿ, ಆದರ್ಶಗಳನ್ನು ಇಂದಿನ 21ನೇ ಶತಮಾನಕ್ಕೆ ಅನ್ವಯಿಸಿ ಇಂದಿನ ಸ್ವಾರ್ಥಪರ ಮನಸ್ಥಿತಿಗೆ ಉತ್ತರ ಕಂಡುಕೊಳ್ಳುವ ಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ನಮ್ಮ ಕೇಂದ್ರದಿಂದ ಎಲ್ಲ ಜಿಲ್ಲೆಗಳಲ್ಲಿ ಗಮಕ, ಸಂಗೀತ, ಸಂವಾದದ ಮೂಲಕ ವಿದ್ಯಾರ್ಥಿಗಳ ಒಳಗಣ್ಣನ್ನು ತೆರೆಸಲಾಗುತ್ತಿದೆ. ಹೊಸ ದೃಷ್ಟಿಕೋನ ಬೆಳೆಸಲು ಸಂಶೋಧನೆ ನಡೆಸುವುದು, ಚಿತ್ರಸಂಪುಟ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬಳ್ಳಾರಿಯ ವೀರಣ್ಣ ಅವರಿಂದ ಗೊಂಬೆಯಾಟ ಆಡಿಸಲು ನಿರ್ಧರಿಸಲಾಗಿದೆ. ಸಂಕೀರ್ತನೆಗಳನ್ನು ಸಿಡಿ ರೂಪದಲ್ಲಿ ತರಲಾಗುವುದು ಎಂದರು. ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಂ.ವರದರಾಜು ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಮುಕ್ತ ವಿವಿ ಸಹ ಪ್ರಾಧ್ಯಾಪಕಿ ಡಾ. ಕವಿತಾ ರೈ ಇದ್ದರು.