ಸಣ್ಣ ಕಥೆಗಾರ ಪ್ರೊ. ಸುಧಾಕರ ನಿಧನ
ಮೈಸೂರು: ನಾಡಿನ ಹೆಸರಾಂತ ಸಣ್ಣಕಥೆಗಾರ ಪ್ರೊ. ಸುಧಾಕರ (81) ಅವರು ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜನಪದ ಸಾಹಿತ್ಯದಲ್ಲಿ ಸಾಕಷ್ಟು ಕೃತಿ ರಚಿಸಿದ್ದ ಅವರು ವಿಶೇಷವಾಗಿ ಕನಕದಾಸರ ಮೇಲೆ ವಿಮರ್ಶಾತ್ಮಕ ಗ್ರಂಥ ರಚಿಸಿದ್ದು, ಹಳೆಗನಢಿಡದ ಸಂಶೋಧನೆ ನಡೆಸಿದ್ದಾರೆ. 25ಕ್ಕೂ ಹೆಚ್ಚಿನ ಕಥಾ ಸಂಗ್ರಹಗಳನ್ನು ಕನ್ನಡ ಛಸಾರಸ್ವತ ಲೋಕಕ್ಕೆ ನೀಡಿದ್ದಾರೆ. ರಾಜೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸುಧಾಕರ, ಅನೇಕ ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿದ್ದರು. ಮೃತರ ಅಂತ್ಯಕ್ರಿಯೆಯು ಮಾಗಡಿ ತಾಲೂಕಿನ ಎಣ್ಣೆಗೆರೆ ಸ್ವಗ್ರಾಮದಲ್ಲಿ ನೆರವೇರಿತು.
ಹೂತಿದ್ದ ಸ್ವಾಮೀಜಿ ಶವ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ
ಬಿಜಾಪುರ: ಕಳೆದ ಜೂನ್ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೀಡಾದ ಬಿಜಾಪುರ ತಾಲೂಕಿನ ಗೂಗದಡ್ಡಿ ಗ್ರಾಮದ ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಯ ಹೂತಿದ್ದ ಶವವನ್ನು ಶನಿವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಜೂ.27ರಂದು ಗೂಗದಡ್ಡಿಯ ಶಿವಾನಂದ ಸ್ವಾಮೀಜಿ ಅವರು ಮಠದ ಆವರಣದ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಗ್ರಾಮಸ್ಥರು ಈ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸದೆ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ಬಗ್ಗೆ ಅನಾಮಧೇಯ ವ್ಯಕ್ತಿಯೊಬ್ಬ ಬೆಳಗಾವಿ ಐಜಿಪಿ ಕಚೇರಿಗೆ ಮೂಖ ಅರ್ಜಿ ಸಲ್ಲಿಸಿ ಗೂಗದಡ್ಡಿ ಶ್ರೀಗಳ ಆತ್ಮಹತ್ಯೆ ಶಂಕಾಸ್ಪದವಾಗಿದೆ. ಆದ್ದರಿಂದ ಶ್ರೀಗಳ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಐಜಿಪಿ ಬಿಜಾಪುರದ ಉಪ ವಿಭಾಗಾಧಿಕಾರಿಗಳಿಗೆ ಶವದ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿದ್ದರು.
ಬೊಯಿಕೇರಿಯಲ್ಲಿ ಕಾಡಾನೆಗಳ ದಾಂಧಲೆ: ಅಪಾರ ಬೆಳೆ ಹಾನಿ
ಮಡಿಕೇರಿ: ಇಲ್ಲಿಗೆ ಸಮೀಪದ ಬೊಯಿಕೇರಿಯಲ್ಲಿ ಕಾಡಾನೆಗಳ ಹಿಂಡೊಂದರ ದಾಂಧಲೆ ಹೆಚ್ಚಾಗಿದ್ದು, ಮಾಜಿ ಸಂಸದ ಎಫ್.ಎಂ. ಖಾನ್ ಅವರ ಸುಂದರ ಪುಷ್ಪೋದ್ಯಾನವನ್ನೂ ಹಾಳುಗೆಡವಲು ಒಂಟಿ ಸಲಗವೊಂದು ಯತ್ನಿಸಿದೆ. ಕಾಡಾನೆ ದಾಳಿಯಿಂದಾಗಿ ಗ್ರಾಮೀಣ ಭಾಗದ ಜನರು ತತ್ತರಿಸಿದ್ದಾರೆ. ಬೊಯಿಕೇರಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಕಾಫಿ, ಬಾಳೆ ತೋಟಗಳಿಗೆ ದಾಳಿಯಿಟ್ಟು ಸಾಕಷ್ಟು ಹಾನಿ ಮಾಡುತ್ತಿವೆ. ಕಾಡಾನೆಗಳು ಪುಟ್ಟ ಮರಿಯೊಂದಿಗೆ ತೋಟಗಳಲ್ಲಿ ಹೆಜ್ಜೆ ಹಾಕುತ್ತಿದ್ದು, ಇದರಿಂದಾಗಿ ಈ ವ್ಯಾಪ್ತಿಯ ಹತ್ತಾರು ತೋಟಗಳಲ್ಲಿ ಬೆಳೆದಿದ್ದ ಕಾಫಿ, ಬಾಳೆ ಫಸಲು ಸಂಪೂರ್ಣ ಹಾನಿಗೀಡಾಗಿದೆ.
ಸ್ಪಂದಿಸದ ಅರಣ್ಯ ಇಲಾಖೆ: ಕಾಡಾನೆ ದಾಂಧಲೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಸ್ಪಂದನ ದೊರಕಿಲ್ಲ ಎಂದು ಎಫ್.ಎಂ. ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆನೆಗಳ ಹಿಂಡು ಸರಾಗವಾಗಿ ಸಂಚರಿಸಲು ಸೂಕ್ತವಾದ ಎಲಿಫೆಂಟ್ ಕಾರಿಡಾರ್ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ. ಕಾಡಾನೆಗಳು ಬೊಯಿಕೇರಿ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದು, ಯಾವುದೇ ಕ್ಷಣದಲ್ಲಿಯೂ ಜೀವಾಪಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಖಾನ್ ಆತಂಕ ವ್ಯಕ್ತಪಡಿಸಿದರು.
ಡಿಸಿಐಬಿ ಪೊಲೀಸರ ಕಾರ್ಯಾಚರಣೆ: ಅಂತಾರಾಜ್ಯ ಬೈಕ್ ಕಳ್ಳರ ಬಂಧನ
ಮಂಗಳೂರು: ದ.ಕ. ಜಿಲ್ಲೆಯ ವಿಟ್ಲ, ಉಳ್ಳಾಲ ಹಾಗೂ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಎಂಬಲ್ಲಿ ಮೋಟಾರ್ ಸೈಕಲ್ ಕಳವು ಮಾಡಿದ ಕುಖ್ಯಾತ ಅಂತಾರಾಜ್ಯ ಬೈಕ್ ಕಳ್ಳರ ತಂಡವನ್ನು ದ.ಕ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಎಂಬಲ್ಲಿ ಬಂಧಿಸಿದ್ದು, ಅವರಿಂದ 4 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ದ.ಕ. ಜಿಲ್ಲೆಯಾದ್ಯಾಂತ ಮನೆ ಕಳ್ಳತನ, ವಾಹನ ಕಳ್ಳತನ, ಅಂಗಡಿಗಳ ಶಟರ್ ತುಂಡರಿಸಿ ಕಳ್ಳತನ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕರು, ಸಿಬ್ಬಂದಿ ಮತ್ತು ಅಪರಾಧ ಪತ್ತೆ ತಂಡಗಳಿಗೆ ನಿಗಾ ವಹಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನದಲ್ಲಿ ಖಚಿತ ವರ್ತಮಾನದಂತೆ ವಿಟ್ಲ, ಸಾಲೆತ್ತೂರು ಎಂಬಲ್ಲಿ ನಾಲ್ವರು ಬೈಕ್ ಕಳ್ಳರ ತಂಡವನ್ನು ಡಿಸಿಐಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಟ್ಲ ಪಡ್ನೂರು ಗ್ರಾಮದ ಅಬ್ದುಲ್ ಬಶೀರ್(21), ಮಹಮ್ಮದ್ ಮನ್ಸೂರ್ ಯಾನೆ ಮಂಚು (21), ಮಹಮ್ಮದ್ ನಾಸೀರ್ ಯಾನೆ ಆಸೀರ್ (23), ಕೇಪು ಗ್ರಾಮದ ಕೆ.ಇಬ್ರಾಹಿಂ ಯಾನೆ ಅನ್ಸು (22) ಬಂಧಿತರು.