ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸೃಜನಾತ್ಮಕ ಚಟುವಟಿಕೆಗೆ ಕಲೆ ಸಹಕಾರಿ

Srinivasa Murthy VN
Updated On : 24 Aug 2013, 11:43 am

ಕ.ಪ್ರ.ವಾರ್ತೆ ಮೈಸೂರು ಆ. 24
ಸೃಜನಾತ್ಮಕ ಚಟುವಟಿಕೆಗಳಿಗೆ ಎಲ್ಲ ಕಲೆಗಳು ಸಹಕಾರಿ ಎಂದು ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.
ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಆಯೋಜಿಸಿರುವ 6ನೇ ರಾಷ್ಟ್ರ ಮಟ್ಟದ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.  ಕಲೆ ವಿಜ್ಞಾನ ಇದ್ದಂತೆ. ದೃಶ್ಯಕಲೆಯಾಗಲಿ ಅಥವಾ ಪ್ರದರ್ಶಕ ಕಲೆಯಾಗಲಿ ಸೃಜನಾತ್ಮಕ ಚಟುವಟಿಕೆಗೆ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಸ್ಫೂರ್ತಿದಾಯಕವಾಗಿದೆ. ಸ್ಥೈರ್ಯ ಹಾಗೂ ಕ್ರಿಯಾತ್ಮಕತೆ ಮೂಡಿಸುವಲ್ಲಿ ಕಲಾ ಕೌಶಲ ಅವಶ್ಯಕ ಎಂದರು.
ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವ ಕಲೆಗಳು ನಾಯಕತ್ವ ಗುಣವನ್ನು ರೂಪಿಸಲು ಸಹಕಾರಿಯಾಗಿವೆ. ಆದ್ದರಿಂದ ವಿವೇಕಾನಂದ ನಾಯಕತ್ವ ತರಬೇತಿ ಸಂಸ್ಥೆಯು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ದೇಶದ ನಾನಾ ಭಾಗದ ಕಲಾವಿದರು ಭಾಗವಹಿಸಿದ್ದು ಉಂಟು. ಕಲಾವಿದರಿಗೆ ನಾಯಕತ್ವ ಗುಣ ಇದ್ದರೆ ಹೆಚ್ಚಿನ ಸಾಧನೆ ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವಾದ ಮುಖ್ಯಸ್ಥ ವಿ.ಎ. ದೇಶಪಾಂಡೆ, ಸಂಸ್ಥೆ 2007ರಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಆರಂಭಿಸಿತು. ಆದರೆ 2009 ಎಚ್1ಎನ್1 ಭೀತಿಯಿಂದ ಕಾರ್ಯಾಗಾರ ನಡೆಸಲಿಲ್ಲ. ಕಳೆದ ವರ್ಷ ನಾನಾ ಭಾಗಗಳ 60 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ 25 ಮಂದಿ ಭಾಗವಹಿಸಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ, ಕಾವಾದ ಮಾಜಿ ಮುಖ್ಯಸ್ಥ ರಾಮದಾಸ್ ಅಡ್ಯಂತಾಯ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾರ್ಥಿ ರಾಹುಲ್ ನಿರೂಪಿಸಿದರು.
ಆ. 31ರವರೆಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ತಜ್ಞರಾದ ಆಹಮದಬಾದಿನ ಗ್ರಾಫಿಕ್ ಕಲಾವಿದ ವಾಲ್ಟರ್ ಡಿಸೋಜಾ, ಬೆಂಗಳೂರಿನ ಸಿಕೆಪಿ ಶಿಲ್ಪಕಲಾ ವಿಭಾಗದ ಪ್ರವಾಚಕ ನಾರಾಯಣ ಸೂತ್ರದಾರ, ಗ್ರಾಫಿಕ್ ವಿನ್ಯಾಸಗಾರ ಶ್ರೀಧರ್ ಕಾಕಡೆ ಹಾಗೂ ಛಾಯಾಗ್ರಾಹಕ ಕಿರಣ್ ಆದಿತ್ಯ ಭಾಗವಹಿಸಿದ್ದಾರೆ.    
ಕನ್ನಡ ನಿರ್ಲಕ್ಷ್ಯ ಆಯುಕ್ತರ ಆಕ್ಷೇಪ: ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬಗ್ಗೆ ತಾತ್ಸಾರ ತೋರುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಹೇಳಿದರು.
ಕಾವಾ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರೂಪಕರು ಸೇರಿದಂತೆ ಬಹುತೇಕರು ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದು ಹಾಗೂ ಗಣ್ಯರನ್ನು ಸಭೆಗೆ ಪರಿಚಯಿಸುವಾಗ ರಾಮಕೃಷ್ಣ ಅವರನ್ನು ಪ್ರಾಚ್ಯವಸ್ತು ಇಲಾಖೆಯ ಆಯುಕ್ತ ಎಂದು ಸಂಭೋದಿಸಿದ್ದರಿಂದ ಮುಖ್ಯ ಅತಿಥಿಯಾಗಿ ಮಾತನಾಡುವಾಗ ಈ ಪ್ರತಿಕ್ರಿಯೆ ನೀಡಿದರು.
ಕಾವಾದಲ್ಲಿ 240 ವಿದ್ಯಾರ್ಥಿಗಳಿದ್ದು, ಅವರೆಲ್ಲರಿಗೂ ಇಂಗ್ಲಿಷ್ ಎಷ್ಟರ ಮಟ್ಟಿಗೆ ಬರತ್ತದೋ ತಿಳಿಯದು. ಆದರೆ ಹೊರಗಿನಿಂದ ಬಂದಿರುವ 15 ಮಂದಿಗಾಗಿ ಇಡಿ ಕಾರ್ಯಕ್ರಮದಲ್ಲಿ ಕನ್ನಡ ನಿರ್ಲಕ್ಷಿಸುವುದು ಸರಿಯಲ್ಲ. ಈ ಸಂಸ್ಥೆಗೆ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿರುವಾಗ ಆ ಇಲಾಖೆಯ ಆಯುಕ್ತರನ್ನು ಬೇರೊಂದು ಇಲಾಖೆಯ ಆಯುಕ್ತರೆಂದು ಹೇಳುವುದು ಶೋಭೆಯಲ್ಲ. ಹೊರಗಿನಿಂದ ಬಂದವರಿಗೆ ಕನ್ನಡ ಭಾಷೆಯನ್ನು ಕಲಿಸುವ ಕೆಲಸ ಮಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement