ರಘು ಆಚಾರ್ ಗೆಲವು: ಅಭಿನಂದನೆ
ಮೈಸೂರು: ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ ರಘು ಆಚಾರ್ ಅವರನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಪದವೀದರರ ವೇದಿಕೆ ಅಭಿನಂದಿಸಿದೆ. ರಘು ಆಚಾರ್ ಅವರ ಗೆಲವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರು ಮತ್ತು ಮತದಾರರಿಗೆ ವೇದಿಕೆ ಅಧ್ಯಕ್ಷ ರಾಜಶೇಖರ್ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವೇದಿಕೆ ಕಾರ್ಯದರ್ಶಿ ಎಚ್.ಎಸ್. ನಂಜುಂಡಸ್ವಾಮಿ ತಿಳಿಸಿದ್ದಾರೆ.
ಇಂದು ಬಿಜೆಪಿ ಪ್ರತಿಭಟನೆ
ಮೈಸೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ಹಿಂಪಡೆದುದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಆ. 28ರ ಬೆಳಗ್ಗೆ 11ಕ್ಕೆ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್ ತಿಳಿಸಿದ್ದಾರೆ.
ಪುಸ್ತಕ ಓದು ವಿಮರ್ಶೆ
ಮೈಸೂರು: ಚಿಂತನ ಚಿತ್ತಾರ ಸಂಸ್ಥೆಯು ಆ. 29ರ ಸಂಜೆ 5ಕ್ಕೆ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಡಾ.ಯು.ಆರ್. ಅನಂತಮೂರ್ತಿ ಅವರ ಸುರಗಿ ಕೃತಿಯ ಪುಸ್ತಕ ಓದು ವಿಮರ್ಶೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಆರ್. ರಾಮಚಂದ್ರ ಪುಸ್ತಕ ಕುರಿತು ಮಾತನಾಡುವರು. ಸಿ.ವಿ. ಸರಿತಾ ಪ್ರತಿಕ್ರಿಯೆ ನೀಡುವರು. ಡಾ.ನ. ರತ್ನ ಅತಿಥಿಯಾಗಿ ಭಾಗವಹಿಸುವರು.
ವೀಣಾ ವಾದನ ಕಛೇರಿ
ಮೈಸೂರು: ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಆ. 29ರ ಸಂಜೆ 6ಕ್ಕೆ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ವೀಣಾ ವಾದನ ಕಛೇರಿ ಏರ್ಪಡಿಸಿದ್ದು, ಜಯಂತಿ ಕುಮರೇಶ್ ನಡೆಸಿಕೊಡುವರು.
ವ್ಯಕ್ತಿ ನಾಪತ್ತೆ
ಮೈಸೂರು: ಗಾರೆ ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ತಾಲೂಕಿನ ಕೆ.ಹೆಮ್ಮನಹಳ್ಳಿ ಗ್ರಾಮದ ನಿವಾಸಿ ದೇವರಾಜು (35) ನಾಪತ್ತೆಯಾದವರು. 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ ಇರುವ ಇವರು ಕನ್ನಡ ಮಾತನಾಡುತ್ತಾರೆ. ಕಳೆದ ಆ. 23ರಂದು ಕೂಲಿ ಕೆಲಸಕ್ಕೆ ಮೈಸೂರಿಗೆ ಬಂದ ಇವರು ನಾಪತ್ತೆಯಾಗಿದ್ದಾರೆ. ಇವರ ಸುಳಿವು ದೊರೆತಲ್ಲಿ ಜಯಪುರ ಪೊಲೀಸ್ ಠಾಣೆ ದೂ. 2595781 ಸಂಪರ್ಕಿಸಬಹುದು.