ರೈತರು ಮೌಲ್ಯವರ್ಧಿತ ಉತ್ಪನ್ನ ಉತ್ಪಾದಿಸಲಿ: ಕೆಂಚೇಗೌಡ ಆಶಯ
ಕ.ಪ್ರ.ವಾರ್ತೆ ಹುಣಸೂರು ಆ. 27
ಬೀಜ ನಿಧಿಯಾಗಿ ರೈತ ಆಸಕ್ತ ಗುಂಪುಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ರೈತರು, ರೈತ ಮಹಿಳಾ ಗುಂಪುಗಳು ಅನುದಾನ ಉಪಯೋಗಿಸಿಕೊಂಡು, ಮೌಲ್ಯವರ್ಧಿತ ಉತ್ಪನ್ನ ಉತ್ಪಾದಿಸಿ, ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗುವಂತೆ ಸಹಾಯಕ ಕೃಷಿ ನಿರ್ದೇಶಕ ಕೆ. ಕೆಂಚೇಗೌಡ ಕರೆ ನೀಡಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ 'ಆತ್ಮ' ಯೋಜನೆ 2013- 14ನೇ ಸಾಲಿನ ಜಿಲ್ಲೆಯೊಳಗಿನ ರೈತರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 'ಆತ್ಮ' ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ವಿಸ್ತರಣಾ ಸುಧಾರಣಾ ಯೋಜನೆಯಡಿಯಲ್ಲಿ ರೈತರಿಗೆ ತರಬೇತಿ, ಅಧ್ಯಯನ ಪ್ರವಾಸ ನೀಡಲಾಗುತ್ತಿದೆ. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎನ್. ಸೋಮಯ್ಯ ತೋಟಗಾರಿಕಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ರೇಷ್ಮೆ ಸಹಾಯಕ ನಿರ್ದೇಶಕ ಎನ್. ನಾಗರಾಜು ಮಾತನಾಡಿ, ಹೊಗೆಸೊಪ್ಪು ಬೆಳೆಗೆ ಪರ್ಯಾಯವಾಗಿ ರೇಷ್ಮೆ ಬೆಳೆಯುವುದರಿಂದ ರೈತರು ತಮ್ಮ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬಹುದೆಂದು ತಿಳಿಸಿದರು.
'ಆತ್ಮ' ಯೋಜನೆ ತಾ. ತಾಂತ್ರಿಕ ವ್ಯವಸ್ಥಾಪಕ ಡಾ. ಎಂ. ವಿ. ಗೋವಿಂದರಾಜು ಮಾತನಾಡಿ, ಉತ್ತಮ ಕೃಷಿ ಅಭ್ಯಾಸಗಳ ಮೂಲಕ ಮಣ್ಣು ಮತ್ತು ನೀರನ್ನು ಸಂರಕ್ಷಿಸುವುದು, ಚೆಕ್ ಡ್ಯಾಮ್ ಮತ್ತು ಹೊಂಡ ನಿರ್ಮಿಸುವ ಮೂಲಕ ಬೆಳೆಗಳಿಗೆ ನೀರನ್ನು ಪೂರೈಕೆ ಮಾಡುವುದರ ಜೊತೆಗೆ ಮೀನುಗಾರಿಕೆ ಕೂಡ ಮಾಡಬಹುದು. ಇದರಿಂದ ಅಧಿಕ ಆದಾಯ ಗಳಿಸಬಹುದೆಂದು ಹೇಳಿದರು. ಕೃಷಿ ತಜ್ಞ ಎಚ್.ಎಂ. ಹೊಂಬಯ್ಯ, ಹುಣಸೂರು ತಾಲೂಕಿನ ಪ್ರಮುಖ ಬೇಸಾಯ ಕ್ರಮಗಳ ಬಗ್ಗೆ ಮಾತನಾಡಿ, ಬೇಸಿಗೆಯಲ್ಲಿ ಆಳ ಉಳುಮೆ ಮಾಡುವುದು, ಪೀಡೆ ನಿರೋಧಕ ತಳಿ ಬಳಸುವುದು ಹಾಗೂ ಬೆಳೆ ಆವರ್ತನೆ, ಅಂತರ ಬೆಳೆ, ಬಲೆ ಬೆಳೆ ಪದ್ಧತಿ ಅಳವಡಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದೆಂದು ತಿಳಿಸಿದರು. 'ಆತ್ಮ' ಯೋಜನೆಯ ಉಪಯೋಜನಾ ನಿರ್ದೇಶಕ ಬಿ.ಎಸ್. ಅಂದಾನಿಗೌಡ ಮಾತನಾಡಿ, 'ಆತ್ಮ' ಯೋಜನೆಯ ಕಾರ್ಯಕ್ರಮಗಳು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಹಾಯವಾಗುವುದರಿಂದ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎನ್. ಸೋಮಯ್ಯ, ರೇಷ್ಮೆ ವಿಸ್ತರಣಾಧಿಕಾರಿ ಕೆ.ಟಿ. ರಾಜೇಂದ್ರ ಭಾಗವಹಿಸಿದ್ದರು. ಗುಂಡ್ಲುಪೇಟೆಯ ರೇಷ್ಮೆ ವಿಸ್ತರಣಾಧಿಕಾರಿಗಳಾದ ಚಿಕ್ಕಪಾಪಣ್ಣ, ಉಮೇಶ್ ಮತ್ತು ಮೀನುಗಾರಿಕೆ ಸಹಾಯಕ ನಿರ್ದೇಶಕ ಯೋಗೇಶ್ ಇದ್ದರು.