ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ವಿತರಣೆ
ಕ.ಪ್ರ.ವಾರ್ತೆ ಟಿ.ನರಸೀಪುರ ಆ. 27
ಗುಂಜಾ ನರಸಿಂಹ ಸ್ವಾಮಿಯ ಬೆಳ್ಳಿ ಗರುಡೋತ್ಸವದ ಪ್ರಯುಕ್ತ ತಾಲೂಕಿನ ಕೆಂಡನಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.
ಪಟ್ಟಣದಲ್ಲಿ ವರ್ಷಕ್ಕೊಮ್ಮೆ ನಡೆಯುವ ಗುಂಜಾನರಸಿಂಹ ಸ್ವಾಮಿಯ ಬೆಳ್ಳಿ ಗರುಡೋತ್ಸದ ನಡೆಯುತ್ತದೆ. ಉತ್ಸವದ ಹಿನ್ನೆಲೆ ಕೆಲವು ದಾನಿಗಳು ಆಯ್ದ ಕೆಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ನೋಟ್‌ಪುಸ್ತಕ ವಿತರಿಸುವುದು ವಾಡಿಕೆಯಾಗಿದೆ. ಅದರಂತೆ ತಾಲೂಕಿನ ಕೆಂಡನಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಿದರು.
ಶಿಕ್ಷಣ ಸಂಯೋಜಕ ಪ್ರಕಾಶ್, ನೋಟ್‌ಪುಸ್ತಕ ದಾನಿ ವಿಷ್ಣು ಸ್ಟಿಚ್ ಮಾಲೀಕ ಮಾದೇಶ್ ಮಾತನಾಡಿದರು.
ನಾಯಕ ಸಂಘದ ಉಪಾಧ್ಯಕ್ಷ ಕೆಂಡನಕೊಪ್ಪಲು ಮಹೇಶ್, ನಾಗೇಶ್, ಸಿಆರ್‌ಪಿ ಬಿ.ಎನ್. ಶಿವರುದ್ರಸ್ವಾಮಿ, ಶಾಲೆ ಮುಖ್ಯ ಶಿಕ್ಷಕ ಟಿ.ಆರ್. ಶ್ರೀನಿವಾಸಗೌಡ, ಶಿಕ್ಷಕರಾದ ಎಂ. ಮಲ್ಲಣ್ಣ, ಉಮಾರಾಣಿ, ಜಯಶೀಲ ಇದ್ದರು.
ವಿದ್ಯುತ್ ಪ್ರಸರಣಾ ಮಾರ್ಗ ಚಾಲನೆ
ಹುಣಸೂರು: ತಾಲೂಕಿನಲ್ಲಿ ಹಾಲಿ ಇರುವ 66,11 ಕೆವಿ ಹೂಟಗಳ್ಳಿ- ಪಿರಿಯಾಪಟ್ಟಣ ಏಕ ವಿದ್ಯುತ್ ಲೈನ್‌ನಿಂದ ಗಾವಡಗೆರೆಯಲ್ಲಿ ನಿರ್ಮಿಸುತ್ತಿರುವ 66,11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ನೂತನವಾಗಿ ನಿರ್ಮಿಸಿರುವ 4.575 ಕಿಮೀ 66 ಕೆವಿ ಏಕ ವಿದ್ಯುತ್ ಪ್ರಸರಣಾ ಮಾರ್ಗದಲ್ಲಿ ಆ. 29 ರಂದು ಅಥವಾ ನಂತರ ಯಾವುದೇ ದಿನದಲ್ಲಿ ವಿದ್ಯುತ್ ಹರಿಸಲಾಗುವುದು. ಸದರಿ 66 ಕೆವಿ ಏಕ ವಿದ್ಯುತ್ ಮಾರ್ಗವು ಹುಣಸೂರು ತಾಲೂಕಿನ ಅಗ್ರಹಾರ, ಮಾರೇಗೌಡನಹಳ್ಳಿ ಹಾಗೂ ಗಾವಡಗೆರೆ ಗ್ರಾಮದ ಸರಹದ್ದಿನಲ್ಲಿ ಹಾದು ಹೋಗಿರುತ್ತದೆ. ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಲೋಹದ ಪಟ್ಟಿಯನ್ನು ತೆಗೆಯುವುದಾಗಲಿ, ಗೋಪುರಗಳನ್ನು ಹತ್ತುವುದಾಗಲಿ ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡ ನೆಡುವುದಾಗಲಿ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದವುಗಳನ್ನು ಎಳೆಯುವುದಾಗಲಿ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡಬಾರದು. ಇದು ತುಂಬಾ ಅಪಾಯಕಾರಿ ಹಾಗೂ ಪ್ರಾಣ ಹಾನಿಯಾಗುತ್ತದೆ ಎಂದು ಬೃಹತ್ ಕಾಮಗಾರಿ ವಿಭಾಗದ ಕಾರ್ಯಾನಿರ್ವಾಹಕ ಎಂಜಿನಿಯರ್ ಎಚ್ಚರಿಸಿದ್ದಾರೆ.