ಅನಧಿಕೃತ ಜಾಹೀರಾತು ಫಲಕ ತೆರವಿಗೆ ಸೂಚನೆ
ಕ.ಪ್ರ.ವಾರ್ತೆ ಮೈಸೂರು ಆ. 28
ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆ, ಕ್ರಾಸ್ ರಸ್ತೆ ಮತ್ತು ಖಾಸಗಿ ಕಟ್ಟಡಗಳ ಮೇಲೆ ಅನಧಿಕೃತ ಜಾಹೀರಾತು ಫಲಕ ಅಳವಡಿಸಿದ್ದಲ್ಲಿ ಕೂಡಲೆ ತೆರವುಗೊಳಿಸುವಂತೆ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಸೂಚಿಸಿದ್ದಾರೆ. ಪಾಲಿಕೆಯಿಂದ ಅನುಮತಿ ಪಡೆಯದೆ ಜಾಹೀರಾತು ಫಲಕ ಅಳವಡಿಸಿದ್ದಲ್ಲಿ ಅದು ಕೆಎಂಸಿ ವಿಧಿ 1976 ಸೆಕ್ಷನ್ 134 ಅನ್ನು ಉಲ್ಲಂಘಿಸಿದಂತೆ. ಆದ್ದರಿಂದ ಜಾಹೀರಾತು ಸಂಸ್ಥೆಯವರು ಕೂಡಲೆ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಪಾಲಿಕೆಯಿಂದ ತೆರವುಗೊಳಿಸಬೇಕಾಗುತ್ತದೆ. ಜತೆಗೆ ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ಸಂಸ್ಥೆಯಿವರಿಂದ ವಸೂಲು ಮಾಡುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಸೆ.1ರಂದು ನಮೋ ಬ್ರಿಗೇಡ್ ಉದ್ಘಾಟನೆ
ಮೈಸೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲಿ ಎಂಬ ಹಾರೈಕೆಯೊಂದಿಗೆ ಮೈಸೂರಿನಲ್ಲಿ ಸೆ.1 ರಂದು ನಮೋ ಬ್ರಿಗೇಡ್ ಶಾಖೆ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ನಗರದ ಹೋಟೆಲ್ ಮೆಟ್ರೋಪೋಲ್ ಹತ್ತಿರದ ಗೋವಿಂದರಾವ್ ಸ್ಮಾರಕ ಭವನದಲ್ಲಿ ಈ ಸಮಾರಂಭ ಏರ್ಪಡಿಸಲಾಗಿದ್ದು, ವಕೀಲ ಓ. ಶ್ಯಾಮ್ ಭಟ್ ಉದ್ಘಾಟಿಸುವರು.
ಆರೈಜ್ ಇಂಡಿಯಾ ಸಂಸ್ಥಾಪಕಿ ಎಲ್.ಎಸ್. ತೇಜಸ್ವಿ ಸೂರ್ಯ, ಯುವಭಾರತ ಜಿಲ್ಲಾ ಪ್ರಭಾರಿ ನಿತ್ಯಾನಂದ ಮುಖ್ಯ ಭಾಷಣ ಮಾಡುವರು. ಆಸಕ್ತರು ನಮೋ ಬ್ರಿಗೇಡ್ಗೆ ಕಾಲ್ ಮಾಡಲು 080- 67166886 ಬಳಸಿ. www.namobrigade.inಸಂಪರ್ಕಿಸಬಹುದು.
ಸಮರ್ಪಕ ನೀರು ಪೂರೈಸುವಂತೆ ಮನವಿ
ಮೈಸೂರು: ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿ ಕೆಆರ್ಎಸ್ ತುಂಬಿ ಹರಿಯುತ್ತಿದ್ದರೂ ಮೈಸೂರಿನ ಜನತೆ ಮಾತ್ರ ಅಸಮರ್ಪಕ ನೀರು ಸರಬರಾಜಿನಿಂದ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೂಟಗಳ್ಳಿ ಕರ್ನಾಟಕ ಗೃಹ ಮಂಡಳಿ ಬಡಾವಣೆಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಹುಡ್ಕೋ ಬಡಾವಣೆಯಲ್ಲಿ ಸುಮಾರು 4500 ಕುಟುಂಬಗಳು ವಾಸಿಸುತ್ತಿವೆ. ನೀರು ಸರಬರಾಜು ಅಸಮರ್ಪಕತೆಯಿಂದ ಕೂಡಿದ್ದು, ಕಳೆದ ಒಂದು ತಿಂಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಆರ್ಎಸ್ನಿಂದ ಸಮುದ್ರಕ್ಕೆ ನೀರು ಹರಿಯುತ್ತಿದೆ ಹೊರತು ನಗರಕ್ಕೆ ನೀರು ಬರುತ್ತಿಲ್ಲ. ಬಂದರೂ ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ. ಇದರಿಂದ ಬೋರ್ವೆಲ್ ನೀರನ್ನೇ ಬಳಸುವಂತಾಗಿದೆ. ಜಸ್ಕೋದವರು ಅನಧಿಕೃತ ಹಾಗೂ ಕಾನೂನು ಬಾಹಿರ ಸಂಪರ್ಕ ಕಲ್ಪಿಸಿರುವುದು ಇದಕ್ಕೆ ಕಾರಣವಾಗಿದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ದಿನಕ್ಕೆ 2 ಅಥವಾ 3 ಗಂಟೆ ನೀರು ಬರುವಂತೆ ನೋಡಿಕೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಮುಂಬೈ ಸಾಮೂಹಿಕ ಅತ್ಯಾಚಾರಕ್ಕೆ ಖಂಡನೆ
ಮೈಸೂರು: ಮುಂಬೈನಲ್ಲಿ ಇತ್ತೀಚೆಗೆ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರವನ್ನು ಕೆ.ಆರ್. ಮೊಹಲ್ಲಾದ ಕೆ.ಎಂ. ಪ್ರವೀಣ್ಕುಮಾರ್ ಚಾರಿಟಬಲ್ ಟ್ರಸ್ಟ್ ಖಂಡಿಸಿದೆ. ಇತ್ತೀಚೆಗೆ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಪತ್ರಕರ್ತರು ಸಮಾಜಮುಖಿ ವರದಿಗಾರಿಕೆಯನ್ನು ನಿರ್ಭಿಡೆಯಿಂದ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವಾಗಿದೆ. ಇಂತಹ ದಮನಕಾರಿ ಪ್ರವೃತ್ತಿಯನ್ನು ಹತ್ತಿಕ್ಕುವಲ್ಲಿ ಅಲ್ಲಿನ ಸರ್ಕಾರಗಳು ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಹೇಳಿದ್ದಾರೆ. ಅತ್ಯಾಚಾರ ಎಸಗುವವರನ್ನು ಗಡಿಪಾರು ಮಾಡಿ, ಅಂತಹವರ ವಿರುದ್ಧ ಪೋಟಾ ಅಥವಾ ಟಾಡಾ ಸಮಾನ ಕಾಯ್ದೆ ಹೇರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜೂಜಾಡುತ್ತಿದ್ದ 19 ಮಂದಿ ಬಂಧನ
ಮೈಸೂರು: ಜೂಜಾಟದಲ್ಲಿ ತೊಡಗಿದ್ದ 19 ಮಂದಿಯನ್ನು ಬಂಧಿಸಿರುವ ನಜರ್ಬಾದ್ ಪೊಲೀಸರು, ಪಣಕಿಟ್ಟಿದ್ದ 29 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ರಾಣಾ ಪ್ರತಾಪಸಿಂಹ ರಸ್ತೆಯ ಪ್ಲಾನೆಟ್ ಎಕ್ಸ್ ಅಮ್ಯೂಸ್ಮೆಂಟ್ ಪಾರ್ಕ್ನ ಪೂರ್ವದ ಕಡೆಯ ಜೈನ್ ಫಾರಂನ ಮೊಬೈಲ್ ಟವರ್ ಪಕ್ಕದಲ್ಲಿನ ಉಪಕರಣ ಕೊಠಡಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ 19 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನಜರ್ಬಾದ್ ಇನ್ಸ್ಪೆಕ್ಟರ್ ಜಯಕುಮಾರ್, ಎಸ್ಐ ಉದಯರವಿ, ಯಾಸ್ಮೀನ್ ತಾಜ್ ಮತ್ತು ಸಿಬ್ಬಂದಿ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ
ಮೈಸೂರು: ಕಡಿಮೆ ಅಂಕ ಪಡೆದ ಕಾರಣಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಹಾರಾಣಿ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಮಹಾರಾಣಿ ಕಾಲೇಜಿನಲ್ಲಿ ತೃತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದ ಮೀನಾ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪ್ರಥಮ ಬಿಎಸ್ಸಿಯಲ್ಲಿ ಕಡಿಮೆ ಅಂಕ ಬಂದಿತ್ತು ಎಂಬ ಕಾರಣಕ್ಕೆ ವಿದ್ಯಾರ್ಥಿನಿಲಯದ ತನ್ನ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.