ಕನ್ನಡದ ಜೊತೆಗೆ ಆಂಗ್ಲ ಭಾಷೆ ಕಲಿಸಿ
ಕ.ಪ್ರ.ವಾರ್ತೆ ಮೈಸೂರು ಆ. 28
ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಮೂಲಕ ಆಂಗ್ಲ ಭಾಷೆಯನ್ನು ಕಲಿಸುವ ಕೆಲಸವಾಗಬೇಕು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ. ಶಾಂತಯ್ಯ ಹೇಳಿದರು.
ಇಲ್ಲಿನ ಜೆಎಸ್ಎಸ್ ಶೈಕ್ಷಣಿಕ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಆಂಗ್ಲ ಭಾಷಾ ಬೋಧಕರಿಗಾಗಿ ಏರ್ಪಡಿಸಿರುವ ಮೂರು ದಿನಗಳ ಆಂಗ್ಲ ಭಾಷಾ ಅಭಿವರ್ಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೋಧಕರು ವೃತ್ತಿ ಪ್ರಾವೀಣ್ಯತೆ ಗಳಿಸಲು ತರಬೇತಿ ಅವಶ್ಯವಿದೆ. ಭಾಷಾ ಕೌಶಲ್ಯಗಳಾದ ಓದು, ಬರಹ, ಉಚ್ಚಾರಣೆ ಇವುಗಳ ಮಾರ್ಗದರ್ಶನದೊಂದಿಗೆ ಕಠಿಣ ಪರಿಶ್ರಮದಿಂದ ಮಾತ್ರ ಭಾಷಾ ಪ್ರೌಢಿಮೆ ಗಳಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ವ್ಯಾಕರಣ, ಶಬ್ದ ಕೋಶಗಳನ್ನು ಅಧ್ಯಯನ ಮಾಡುವುದರೊಂದಿಗೆ ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನು ಹೊಂದುವಂತಾಗಬೇಕು. ಕಲಿಯಲು ಯಾವುದೇ ನೆಪ ಒಡ್ಡಬಾರದು ಎಂದು ಸಲಹೆ ನೀಡಿದರು.
ವಾತಾವರಣ ಮುಖ್ಯ: ಮುಖ್ಯ ಅತಿಥಿಯಾಗಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ಮತ್ತೊಬ್ಬ ನಿರ್ದೇಶಕ ಎನ್.ಬಿ. ಪಾಟೀಲ್ ಮಾತನಾಡಿ, ಯಾವುದೇ ಭಾಷೆ ಕಲಿಯಲು ವಾತಾವರಣ ಬಹಳ ಮುಖ್ಯ. ಶಾಲೆಗಳಲ್ಲಿ ಅಂತಹ ಪೂರಕ ವಾತಾವರಣ ನಿರ್ಮಿಸಬೇಕಿದೆ. ಬೋಧಕರು ತರಬೇತಿಯಿಂದ ಕಲಿತದ್ದನ್ನು ವರ್ಗಕೋಣೆಯಲ್ಲಿ ಅನುಷ್ಠಾನಕ್ಕೆ ತರುವುದು ಕಷ್ಟಸಾಧ್ಯವಾಗಿದೆ. ತರಬೇತಿಯು ಸಾಫಲ್ಯವಾಗಬೇಕಾದರೆ ಅನುಸರಣಾ ಸಂದರ್ಭದಲ್ಲೂ ಸೂಕ್ತ ಮಾರ್ಗದರ್ಶನದ ಅವಶ್ಯವಿರುತ್ತದೆ ಎಂದು ಹೇಳಿದರು.
ತರಬೇತಿ ಸಂಸ್ಥೆಯ ಸಂಚಾಲಕ ಡಾ.ಎಂ.ಸಿ. ನಟರಾಜ, ವಿಷಯ ಪರಿವೀಕ್ಷಕ ಎಚ್.ಎಸ್. ನಾಗರಾಜು, ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿಗಳಾದ ಜಿ.ಎಲ್. ತ್ರಿಪುರಾಂತಕ, ಶಿಕ್ಷಕರಾದ ಅಂದಯ್ಯ ಶಿರೂರ್ ಮಠ್ ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದ್ದರು. ಗೀತ ಪ್ರಾರ್ಥಿಸಿದರು. ಡಾ.ಎಂ.ಸಿ. ನಟರಾಜ ಸ್ವಾಗತಿಸಿದರು. ಪರಿವೀಕ್ಷಕರಾದ ಎಚ್.ಎಸ್. ನಾಗರಾಜು ವಂದಿಸಿದರು. ನಾಗಶ್ರೀ ನಿರೂಪಿಸಿದರು.