ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಸರಾ ಮಹೋತ್ಸವ: ಗಜಪಯಣ ಶುರು

Srinivasa Murthy VN
Updated On : 28 Aug 2013, 11:21 am

-ಅಂಶಿ ಪ್ರಸನ್ನಕುಮಾರ್
ನಾಗಾಪುರ (ಹುಣಸೂರು ತಾಲೂಕು): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಯಣಕ್ಕೆ ಬುಧವಾರ ಚಾಲನೆ ದೊರೆಯಿತು. ಇದರೊಂದಿಗೆ ಈ ಬಾರಿಯ ದಸರೆಯ ಸಿದ್ಧತೆಗೆ ಅಧಿಕೃತ ಚಾಲನೆ ದೊರೆತಂತಾಯಿತು.
ಅ.5 ರಿಂದ 14 ರವರೆಗೆ ನಡೆಯಲಿರುವ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡ ಕಾಡಿನಿಂದ ನಾಡಿನತ್ತ ಪಯಣ ಬೆಳೆಸಿದವು. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಗಜರಾಜ ಅರ್ಜುನ ನೇತೃತ್ವದ ಈ ತಂಡದಲ್ಲಿ ಹಿಂದಿನ ಕ್ಯಾಪ್ಟನ್ ಬಲರಾಮ, ಮೆರವಣಿಗೆಯಲ್ಲಿ ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಅಭಿಮನ್ಯು, ಸರಳ ಹಾಗೂ ವರಲಕ್ಷ್ಮಿ ಇಲ್ಲಿಂದ ಹೊರಟವು. ಚಾಮರಾಜನಗರ ಜಿಲ್ಲೆ ಕೆ.ಗುಡಿಯಿಂದ ಪಟ್ಟದ ಆನೆ ಗಜೇಂದ್ರ ಹೊರಟು, ಮೈಸೂರಿನಲ್ಲಿ ಈ ತಂಡವನ್ನು ಸೇರಿಕೊಂಡಿತು.
ಆ.30 ರಂದು ಮಧ್ಯಾಹ್ನ 12.30ಕ್ಕೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಈ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ದೊರೆಯಲಿದೆ. ಅಲ್ಲಿಯವರೆಗೆ ಈ ಆನೆಗಳು ಅರಣ್ಯ ಇಲಾಖೆಯ ಶ್ರೀಗಂಧ ಕೋಠಿಯಲ್ಲಿ ವಾಸ್ತವ್ಯ ಹೂಡಲಿವೆ. ದಸರೆ ಸಮೀಪಿಸುತ್ತಿದ್ದಂತೆಯೇ ಎರಡನೇ ತಂಡದ ಆನೆಗಳು ಬಂದು ಸೇರಿಕೊಳ್ಳಲಿವೆ.
ಮೈಸೂರನ್ನು ಆಳಿದ ರಾಜಮಹಾರಾಜರ ಕಾಲದಲ್ಲಿ ಆನೆಗಳನ್ನು ಕಾಡಿನಿಂದ ನಾಡಿಗೆ ನಾಗರಹೊಳೆಯಿಂದ ಗಜಪಯಣದ ಹೆಸರಿನಲ್ಲಿ ಕರೆತರಲಾಗುತ್ತಿತ್ತು. ನಂತರ ಇದು ನಿಂತು ಹೋಗಿತ್ತು. ಆನೆಗಳನ್ನು ನೇರವಾಗಿ ವಿವಿಧ ಶಿಬಿರಗಳಲ್ಲಿ ಲಾರಿಗಳಲ್ಲಿ ಮೈಸೂರಿಗೆ ತಂದು, ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತಿತ್ತು.
1992 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ವಿಶ್ವನಾಥ್ ಅವರು ಗಜಪಯಣವನ್ನು ಮತ್ತೆ ಆರಂಭಿಸಿದರು. ಮೊದಲ ವರ್ಷ ನಾಗರಹೊಳೆ ಅಭಯಾರಣ್ಯದ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಮೈಸೂರುವರೆಗೆ ಕಾಲ್ನಡಿಗೆಯಲ್ಲೇ ಕರೆತರಲಾಗಿತ್ತು. ದಾರಿಯುದ್ದಕ್ಕೂ ಜನರು ನೀಡಿದ ಕಬ್ಬು, ಬೆಲ್ಲ, ತೆಂಗಿನಕಾಯಿ ತಿಂದು ಆನೆಗಳ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಮರು ವರ್ಷದಿಂದ ಗಜಪಯಣದ ನಂತರ ಆನೆಗಳನ್ನು ನೇರವಾಗಿ ಲಾರಿಯಲ್ಲಿ ಮೈಸೂರಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ.
ಕಳೆದ ಬಾರಿಯಿಂದ ಸ್ಥಳ ಬದಲು: 1992 ರಿಂದಲೂ ವರ್ಷಗಳಿಂದಲೂ ನಾಗರಹೊಳೆ ಅಭಯಾರಣ್ಯದ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಗಜಪಯಣ ಆರಂಭಿಸಲಾಗುತ್ತಿತ್ತು. ಆದರೆ ಕಾಡಿನಲ್ಲಿ ಮನುಷ್ಯ ಚಟುವಟಿಕೆಗಳನ್ನು ಹೆಚ್ಚು ಮಾಡಿ, ಪ್ರಾಣಿಗಳ ನೆಮ್ಮದಿಗೆ ಭಂಗ ತಾರದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಅಲ್ಲಿಂದ 4 ಕಿ.ಮೀ. ವರೆಗೆ ಅಂದರೆ ನಾಗಾಪುರ- 1ನೇ ಬ್ಲಾಕಿನ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ಬಳಿ ಗಜಪಯಣ ಆರಂಭಿಸಲಾಯಿತು. ಈ ವರ್ಷವೂ ಅದೇ ಸ್ಥಳದಲ್ಲಿ ಗಜಪಯಣಕ್ಕೆ ಚಾಲನೆ ಸಿಕ್ಕಿತು.
ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಿಡಗಳ ನಡುವೆ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಿದ್ದ ಸ್ವಾಗತ ಕಮಾನುಗಳ ಮುಂದೆ ಸರ್ವಾಲಂಕೃತವಾದ ಆನೆಗಳು, ಸಮವಸ್ತ್ರಧಾರಿ ಮಾವುತರ ಸಂಜ್ಞಯಂತೆ ಕಾಡಿನಿಂದ ನಾಡಿನತ್ತ ಪಯಣ ಆರಂಭಿಸಿದವು. ಮಂಗಳವಾದ್ಯ, ಶಾಲಾ ಮಕ್ಕಳ ಬ್ಯಾಂಡ್‌ಸೆಟ್, 51 ಕಳಸ ಹೊತ್ತ ಸುಮಂಗಲಿಯರು, ಗಿರಿಜನರು, ಟಿಬೆಟಿಯನ್ನರ ನೃತ್ಯ, ವೀರಗಾಸೆ, ಜನಪದ ಕುಣಿತಗಳ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಆನೆಗಳಿಗೆ ಪೂಜೆ ಸಲ್ಲಿಸಿ, ಕಾಯಿ, ಬೆಲ್ಲ, ಕಬ್ಬು ತಿನ್ನಿಸಿ, ಪುಷ್ಪಾರ್ಚನೆ ಮಾಡಿ, ಗಜಪಯಣಕ್ಕೆ ಚಾಲನೆ ನೀಡಿದರು. ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್,  ಜಿಪಂ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಜಿಲ್ಲಾಧಿಕಾರಿ ಸಿ. ಶಿಖಾ ಮೊದಲಾದವರು ಸಾಥ್ ನೀಡಿದರು. ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಉತ್ಸಾಹದಿಂದ ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement