ಕೃಷ್ಣ ಮಂದಿರದಲ್ಲಿ ವಿವಿಧ ಸ್ಪರ್ಧೆಗಳು
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 29
ಇಲ್ಲಿನ ಶ್ರೀ ಕೃಷ್ಣ ಸೇವಾ ಸಮಿತಿ ವತಿಯಿಂದ ಶ್ರೀಕೃಷ್ಣ ಜಯಂತಿಯ ಅಂಗವಾಗಿ ಆ.31 ಮತ್ತು ಸೆ. 1 ರಂದು ಕೃಷ್ಣಮಂದಿರದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ಆ.31 ರಂದು ಮಧ್ಯಾಹ್ನ 2ಕ್ಕೆ ಶಾಲಾ ಮಕ್ಕಳಿಗೆ ಸ್ಥಳದಲ್ಲೆ ಚಿತ್ರ ಬರೆಯುವ ಸ್ಫರ್ಧೆ ಏರ್ಪಡಿಸಿದ್ದು 1 ರಿಂದ 4, 5 ರಿಂದ 7 ಮತ್ತು 8 ರಿಂದ 10ನೇ ತರಗತಿಯವರೆಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸಂಜೆ 5ಕ್ಕೆ ಒಂದರಿಂದ 6 ಮತ್ತು 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ದಾಸರ ಪದಗಳ ಸ್ಪರ್ಧೆ ಏರ್ಪಡಿಸಿದೆ. ಸೆ.1ರಂದು ಮಧ್ಯಾಹ್ನ 3ಕ್ಕೆ ಬಾಲಗೋಕುಲ ಶ್ರೀಕೃಷ್ಣ ಮತ್ತು ರಾಧೆ ವೇಷ ಸ್ಫರ್ಧೆ ನಡೆಯಲಿದ್ದು, ಸಂಜೆ 6.30ಕ್ಕೆ ಬಹುಮಾನ ವಿತರಣೆ ಮಾಡಲಾಗುವುದು. ನಂತರ 7ಕ್ಕೆ ನಗರದ ವಿವಿಧ ಶಾಲಾ ತಂಡಗಳಿಂದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ.
ಆಸಕ್ತರು ಸಿ.ಎಂ. ರಸ್ತೆಯಲ್ಲಿರುವ ಶ್ರೀ ಟಿಫಾನೀಸ್, ಬಜಾರ್ ರಸ್ತೆಯಲ್ಲಿರುವ ಶ್ರೀ ಕೃಷ್ಣರಾವ್ ಸ್ಟೋರ್ಸ್ನಲ್ಲಿ ಹೆಸರು ನೋಂದಾಯಿಸುವಂತೆ ಕೋರಲಾಗಿದೆ.
ಸ್ವಸಹಾಯ ಸಂಘಗಳ ತಂಡ ರಚನೆ
ಹುಣಸೂರು: ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕಚುವಿನಹಳ್ಳಿ ಗ್ರಾಮದಲ್ಲಿ ಸ್ವಸಹಾಯ ಸಂಘ ತಂಡಗಳನ್ನು ರಚಿಸಲಾಯಿತು. ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕಚುವಿನಹಳ್ಳಿ ಗ್ರಾಮದಲ್ಲಿ ಗೌರಿಶಂಕರ ಸ್ವಸಹಾಯ ಸಂಘ ಹಾಗೂ ಬೀರೇಶ್ವರ ಪ್ರಗತಿಬಂಧು ತಂಡವನ್ನು ತಾಪಂ ಸದಸ್ಯ ಗಣಪತಿ ಉದ್ಘಾಟಿಸಿ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಂಘಗಳಲ್ಲಿ ಕೇವಲ ಹಣ ಉಳಿತಾಯ ಮಾಡುವುದಕ್ಕಷ್ಟೆ ಸೀಮಿತವಾಗದೆ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ತಂಡದ ಮೇಲ್ವಿಚಾರಕ ರಾಘವೇಂದ್ರ ಯೋಜನೆ ವತಿಯಿಂದ ಸಿಗುವ ಸವಲತ್ತು ಹಾಗೂ ಸಹಕಾರವನ್ನು ತಿಳಿಸಿದರು. ಸೇವಾ ಪ್ರತಿನಿಧಿ ಕೌಸಲ್ಯ ಹಾಗೂ ಸಂಘದ ಪ್ರತಿನಿಧಿಗಳು, ಸದಸ್ಯರು ಭಾಗವಹಿಸಿದ್ದರು.