ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಹೂಡಿ: ಶಿಖಾ

Srinivasa Murthy VN
Updated On : 29 Aug 2013, 11:00 am

ಕ.ಪ್ರ.ವಾರ್ತೆ ಮೈಸೂರು ಆ. 29
ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲ ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಸೂಚಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಆರೋಗ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡುವುದು ಕಡ್ಡಾಯವಾಗಿದೆ. ನೀವೇ ಕೇಂದ್ರದಲ್ಲಿ ಇಲ್ಲದಿದ್ದರೆ ನಿಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಘಟಕಗಳ ವೈದ್ಯರನ್ನು ಹಾಗೂ ಇತರೆ ಸಿಬ್ಬಂದಿಯನ್ನು ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚಿಸಲು ನಿಮಗೆ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಒಂದು ವಾರದೊಳಗಾಗಿ ಎಲ್ಲ ತಾಲೂಕು ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸಮಸ್ಯೆಗಳಿದ್ದಲ್ಲಿ ಹೇಳಿ, ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ಸಭೆಯ ವೇಳೆಗೆ ಈ ವಿಷಯವನ್ನು ತೀವ್ರವಾಗಿ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದರು.
ವಾರಪೂರ್ತಿ ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಉತ್ತಮ ದರ್ಜೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 10 ಹೆರಿಗೆಗಳಾಗಬೇಕು. ಕೇಂದ್ರ ಸ್ಥಾನದಲ್ಲಿ ವೈದ್ಯರು ವಾಸಿಸದ ಕೆಲವೆಡೆ ಒಂದೂ ಹೆರಿಗೆ ಪ್ರಕರಣ ದಾಖಲಾಗುತ್ತಿಲ್ಲ. ಇಂತಹ ಸ್ಥಳಗಳಿಂದ 24್ಢ7 ಸೌಲಭ್ಯವನ್ನು ಬೇರೆ ಪ್ರಾಥಮಿಕ ಕೇಂದ್ರಗಳಿಗೆ ವರ್ಗಾಯಿಸಲಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳಿಗೆ ನೀವೇ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು.
ವಿಶೇಷ ಆಂದೋಲನ ಕೈಗೊಳ್ಳಿ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪುರುಷರನ್ನು ಮನವೊಲಿಸಲು ವಿಶೇಷ ಆಂದೋಲನ ಕೈಗೊಳ್ಳುವಂತೆ ತಿಳಿಸಿದ ಅವರು, ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆ ವ್ಯಾಸೆಕ್ಟಮಿ ನಿಗದಿತ ಗುರಿಗಿಂತ ತೀರಾ ಕಡಿಮೆಯಾಗಿದೆ. ಈ ಬಗ್ಗೆ ವಿಶೇಷ ಗಮನ ಹರಿಸುವಂತೆ ಸೂಚಿಸಿದರು.
ಜುಲೈ ತಿಂಗಳಲ್ಲಿ 1,564 ಸಂತಾನಹರಣ ಶಸ್ತ್ರಚಿಕಿತ್ಸೆಗಳಾಗಿದ್ದು, ಈವರೆಗೆ 6,437 ಶಸ್ತ್ರಚಿಕಿತ್ಸೆಗಳಾಗಿವೆ. ಒಟ್ಟು ಗುರಿಯ ಕನಿಷ್ಠ ಶೇ.10 ರಷ್ಟು ವ್ಯಾಸೆಕ್ಟಮಿ ಆಗಬೇಕಿತ್ತು. ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ 150 ವ್ಯಾಸೆಕ್ಟಮಿ ಆಗಬೇಕಿದ್ದು, ಈವರೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇವಲ 6 ವ್ಯಾಸೆಕ್ಟೆಮಿ ಆಗಿದೆ. ಪುರುಷರ ಮನೋಭಾವ ಬದಲಾಗಬೇಕಿದ್ದು, ಇದಕ್ಕಾಗಿ ವ್ಯಾಪಕ ಪ್ರಚಾರ ಹಾಗೂ ವಿಶೇಷ ವ್ಯಾಸೆಕ್ಟಮಿ ಆಂದೋಲನ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಈ ತಿಂಗಳ ಕನಿಷ್ಠ 100 ವ್ಯಾಸೆಕ್ಟಮಿ ಮಾಡಿಸುವ ಗುರಿಯನ್ನಾದರೂ ಸಾಧಿಸಿ ಎಂದು ಅವರು ಹೇಳಿದರು.
ಆಸ್ಪತ್ರೆ ಹೆರಿಗೆಯಲ್ಲಿ ಜಿಲ್ಲೆಯಲ್ಲಿ ಉತ್ತಮ ಸಾಧನೆಯಾಗಿದೆ. ಜುಲೈ ತಿಂಗಳಲ್ಲಿ 3,171 ಹೆರಿಗೆಗಳಾಗಿದ್ದು, ಒಟ್ಟಾರೆ ಈ ಸಾಲಿನಲ್ಲಿ 13,684 ಹೆರಿಗೆಗಳಾಗಿವೆ. ಈ ಪೈಕಿ ಮನೆಯಲ್ಲಿ ಹೆರಿಗೆಯಾದ ನಾಲ್ಕು ಪ್ರಕರಣಗಳು ಮಾತ್ರ ವರದಿಯಾಗಿವೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ ಈ ಹೆರಿಗೆಗಳು ವರದಿಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಾಲೇಗೌಡ ಮಾಹಿತಿ ನೀಡಿದರು.
ಕಡಿಮೆ ಸಾವಿನ ಪ್ರಕರಣ: ಪ್ರಸಕ್ತ ಸಾಲಿನಲ್ಲಿ ಜುಲೈ ಅಂತ್ಯದವರೆಗೆ ತಾಯಿ ಮರಣದ ಒಂದು ಪ್ರಕರಣ ಹಾಗೂ ಶಿಶು ಮರಣದ 157 ಪ್ರಕರಣಗಳು ವರದಿಯಾಗಿವೆ. ಟಿ. ನರಸೀಪುರ ತಾಲೂಕಿನಲ್ಲಿ ತಾಯಿಯೊಬ್ಬರು ಮೃತಪಟ್ಟಿದ್ದು, ಶಿಶು ಮರಣದ ಪ್ರಕರಣಗಳು ಟಿ.ನರಸೀಪುರದಲ್ಲಿ 18, ಹುಣಸೂರಿನಲ್ಲಿ 12, ಎಚ್.ಡಿ. ಕೋಟೆಯಲ್ಲಿ 28, ನಂಜನಗೂಡಿನಲ್ಲಿ 24, ಪಿರಿಯಾಪಟ್ಟಣದಲ್ಲಿ 12, ಕೆ.ಆರ್. ನಗರದಲ್ಲಿ 14, ಮೈಸೂರು ಗ್ರಾಮಾಂತರದಲ್ಲಿ 16 ಹಾಗೂ ಮೈಸೂರು ನಗರದಲ್ಲಿ 33 ವರದಿಯಾಗಿವೆ ಎಂದು ಅವರು ವಿವರಿಸಿದರು. ಎಚ್.ಡಿ. ಕೋಟೆ ತಾಲೂಕು ದಮ್ಮನಕಟ್ಟೆಯಲ್ಲಿ ಒಂದು ತಿಂಗಳ ಹೆಣ್ಣು ಮಗು ಹಾಗೂ ಹುಣಸೇಕೊಪ್ಪದಲ್ಲಿ 28 ದಿನಗಳ ಒಂದು ಗಂಡು ಮಗು ಮನೆಯಲ್ಲಿ ಮೃತಪಟ್ಟಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚು ಜಾಗ್ರತೆ ವಹಿಸಬೇಕಾಗಿತ್ತು. ಯಾವುದೇ ಪ್ರಕರಣದಲ್ಲಿ ಸಿಬ್ಬಂದಿ ನಿರ್ಲಕ್ಷ್ಯತೆ ಇದ್ದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಯಾವುದೆ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗಿಲ್ಲ ಎಂದು ಸಭೆಯ ಗಮನಕ್ಕೆ ತರಲಾಯಿತು. ಸಭೆಯಲ್ಲಿ ಎಲ್ಲ ತಾಲೂಕು ವೈದ್ಯಾಧಿಕಾರಿಗಳು ಕಾರ್ಯಕ್ರಮಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವೃದ್ಧಾಶ್ರಮಗಳ ನೋಂದಣಿ ಕಡ್ಡಾಯ

ಜಿಲ್ಲೆಯಲ್ಲಿ ನಡೆಯುತ್ತಿರುವ ಅನುದಾನ, ಅನುದಾನ ರಹಿತ ವೃದ್ಧಾಶ್ರಮಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೇಳಿದ್ದಾರೆ. ವೃದ್ಧಾಶ್ರಮಗಳು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವ್ಯಾಪ್ತಿಗೆ ಒಳಪಡುವುದರಿಂದ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುಲಿಕೇಶಿ ರಸ್ತೆ, ತಿಲಕ್‌ನಗರ, ಮೈಸೂರು-570021, ದೂ. 2490111ನ್ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement