ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳು
-ಕುಪ್ಪೆ ಮಹದೇವಸ್ವಾಮಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 29
ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಸೇರಿರುವ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅವುಗಳ ದುರಸ್ತಿಗೆ ಮುಂದಾಗದಿರುವುದರಿಂದ ಸಾರ್ವಜನಿಕ ವಾಹನಗಳು ಮತ್ತು ಜನರ ಸಂಚಾರಕ್ಕೆ ತೊಂದರೆಯಾಗಿದೆ.
ಕೆ.ಆರ್. ನಗರದಿಂದ- ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಕಿರು ಸೇತುವೆಯ ಚಪ್ಪಡಿ ಬ್ಯಾಡರಹಳ್ಳಿ ತಿರುವಿನ ಬಳಿ ಬಿದ್ದು ಹೋಗಿದ್ದು, ಮೃತ್ಯುಕೂಪವಾಗಿ ಪರಿಣಮಿಸಿದೆ. ಆದರೂ ಈವರೆಗೂ ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಇದರಿಂದ ಹೊಸದಾಗಿ ಈ ರಸ್ತೆಯಲ್ಲಿ ಸಂಚರಿಸುವವರು ಎಚ್ಚರ ತಪ್ಪಿದರೆ ಪ್ರಾಣಪಾಯ ಖಚಿತ. ತಾಲೂಕಿನ ಶ್ರೀರಾಂಪುರದಿಂದ ಚುಂಚನಕಟ್ಟೆಗೆ ಹೋಗುವ ಡಾಂಬರು ರಸ್ತೆ ಮಧ್ಯಭಾಗದಲ್ಲಿಯೇ ಕಿತ್ತು ಹೋಗಿ, ಒಂದು ಅಡಿಗಳಷ್ಟು ಆಳದ ಹತ್ತಾರು ಗುಂಡಿಗಳು ರಸ್ತೆಯುದ್ದಕ್ಕೂ ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸವಾರರಂತೂ ಸರ್ಕಸ್ ಮಾಡಿಕೊಂಡು ಚಲಿಸಬೇಕಿದೆ. ಆದರೆ ಇತ್ತ ಗಮನಹರಿಸುವ ಹೊಣೆ ಅಧಿಕಾರಿಗಳಿಗೆ ಇಲ್ಲವಾಗಿದೆ.
ಇದರ ಜತೆಗೆ ಚುಂಚನಕಟ್ಟೆ ಹೋಬಳಿಯ ಮಾಯಗೌಡಹಳ್ಳಿ ಗ್ರಾಮದಿಂದ ದಮ್ಮನಹಳ್ಳಿ ಗೇಟ್ವರೆಗಿನ ರಾಜ್ಯ ಹೆದ್ದಾರಿಗೆ ಮೆಟಲ್ಲಿಂಗ್ ಮಾಡಿ ನಾಲ್ಕು ತಿಂಗಳಾಗಿದ್ದು, ಈವರೆಗೂ ಡಾಂಬರೀಕರಣ ಮಾಡದಿರುವುದರಿಂದ ಜಲ್ಲಿಕಲ್ಲುಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದರ ಜತೆಗೆ, ಗುಂಡಿಗಳು ನಿರ್ಮಾಣವಾಗಿವೆ. ಪಾದಚಾರಿಗಳಂತೂ ಈ ರಸ್ತೆಯಲ್ಲಿ ಸಂಚರಿಸುವಾಗ ಪ್ರಾಣಭಯದಿಂದ ನಡೆದು ಹೋಗಬೇಕಿದೆ.
ಎಲ್ಲಿ ಹೋದರು ಅಧಿಕಾರಿಗಳು?: ಈ ಎಲ್ಲ ರಸ್ತೆಗಳ ಜತೆಗೆ ಹೊಸೂರು-ಹೊಸಕೋಟೆ ಸಂಪರ್ಕ ರಸ್ತೆ, ಚುಂಚನಕಟ್ಟೆ-ಮಿರ್ಲೆ ಸಂಪರ್ಕ ರಸ್ತೆ, ಬ್ಯಾಡರಹಳ್ಳಿ- ಹೊಸಕೋಟೆ ರಸ್ತೆಗಳು ಹಾಳಾಗಿ ಹೋಗಿದ್ದು, ಇವುಗಳ ದುರಸ್ತಿಯಾಗದಿರುವುದರಿಂದ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದಾರೋ ಇಲ್ಲವೋ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಸರ್ಕಾರದ ಅನುದಾನ ಬಂದಾಗ ತಮಗೆ ಇಷ್ಟಬಂದ ರಸ್ತೆಗಳನ್ನು ಕಾಮಗಾರಿಗಳಿಗೆ ಸೇರಿಸಿ, ಅಗತ್ಯವಿರುವ ಜನೋಪಯೋಗಿ ರಸ್ತೆಗಳ ಕಾಮಗಾರಿಗಳ ಬಗ್ಗೆ ಅಸಡ್ಡೆ ತೋರುತ್ತಿರುವ ಇವರ ವಿರುದ್ಧ ಚುನಾಯಿತ ಜನ ಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದರಿಂದ ಜನತೆ ಹಿಡಿ ಶಾಪ ಹಾಕಿಕೊಂಡು ನಿತ್ಯ ಹದಗೆಟ್ಟ ರಸ್ತೆಗಳಲ್ಲಿಯೇ ಸಂಚರಿಸುತ್ತಿದ್ದಾರೆ.
ಈಗಲಾದರೂ ಶಾಸಕ ಸಾ.ರಾ. ಮಹೇಶ್ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಕರೆದು ತಾಲೂಕಿನಲ್ಲಿ ಗುಂಡಿ ಬಿದ್ದು ಹಾಳಾಗಿರುವ ಮತ್ತು ಅರ್ಧಕ್ಕೆ ನಿಂತಿರುವ ರಸ್ತೆಗಳ ಕಾಮಗಾರಿಗಳನ್ನು ನಿರ್ವಹಿಸುವಂತೆ ತಾಕೀತು ಮಾಡಬೇಕು ಎಂಬುವುದು ನಾಗರಿಕರ ಆಗ್ರಹವಾಗಿದೆ.