ಜಾತಿ, ಅಸ್ಪೃಶ್ಯತೆ ತೊಲಗದೆ ಪ್ರಗತಿ ಅಸಾಧ್ಯ
ಕ.ಪ್ರ.ವಾರ್ತೆ ಮೈಸೂರು ಆ. 29
ಸಮಾಜದಲ್ಲಿನ ಜಾತಿ ಹಾಗೂ ಅಸ್ಪೃಶ್ಯತೆ ತೊಲಗದೆ ದೇಶದ ಪ್ರಗತಿ ಅಸಾಧ್ಯ ಎಂದು ಡಾ.ಬಾಬೂ ಜಗಜೀವನರಾಂ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಪುಟ್ಟಸಿದ್ದಯ್ಯ ಹೇಳಿದರು.
ಮೈಸೂರು ವಿವಿಯ ಡಾ.ಬಾಬೂ ಜಗಜೀವನರಾಂ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಹಾಗೂ ಬಾಸುದೇವ ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಾಬೂ ಜಗಜೀವನರಾಂ ಚಿಂತನೆಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಎಲ್ಲೂ ಇಲ್ಲದ ಅಸ್ಪೃಶ್ಯತೆಯನ್ನು ಕೊಡುಗೆಯಾಗಿ ನೀಡಿದ ದೇಶ ಭಾರತ. ಇಂದಿನ ಜಾಗತೀಕರಣದ ಪ್ರಭಾವದಿಂದ ವಿಶ್ವವೇ ಬದಲಾವಣೆಯತ್ತ ಸಾಗಿದ್ದರೂ, ನಮ್ಮ ದೇಶದಲ್ಲಿ ಮಾತ್ರ ಇಂದಿಗೂ ಅಸ್ಪೃಶ್ಯತೆ ಜೀವವಂತವಾಗಿದೆ. ಜಾತಿ ಹಾಗೂ ಅಸ್ಪೃಶ್ಯತೆ ಸಮಾಜದಲ್ಲಿ ಇರುವುದು ಪ್ರಗತಿಗೆ ಮಾರಕ ಎಂದು ಅವರು ವಿಷಾದಿಸಿದರು.
ಅಸ್ಪೃಶ್ಯತೆ ಮೂಲಕ ಅನೇಕ ದೌರ್ಜನ್ಯಗಳು ನಡೆದಿವೆ. ಇದರಿಂದಾಗಿ ಬಹಳಷ್ಟು ಶೋಷಿತ ಸಮುದಾಯವು ಬೇರೆ ಧರ್ಮಕ್ಕೆ ಮತಾಂತರಗೊಂಡಿವೆ. ಈ ಮತಾಂತರ ಕಾರ್ಯ ಈಗಲೂ ಮುಂದುವರಿದಿದೆ. ಇದರಿಂದಾಗಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ಜನರ ನಡುವೆ ಪರಸ್ಪರ ಉತ್ತಮ ಬಾಂಧವ್ಯ ಹಾಗೂ ಸೌಹಾರ್ದತೆಗೆ ದಕ್ಕೆ ಒದಗಿದೆ ಎಂದು ಹೇಳಿದರು.
ದಲಿತ ಪ್ರಜ್ಞೆಯ ನೆಲೆಯಲ್ಲಿ ಹರಿಶ್ಚಂದ್ರ ಕಾವ್ಯ ಎಂಬ ವಿಷಯ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಕೃಷ್ಣಮೂರ್ತಿ ಹನೂರು, ಬಾಬೂಜಿ ಅವರ ಜೀವನ ಮತ್ತು ಸಾಧನೆ ಎಂಬ ವಿಷಯ ಕುರಿತು ಮಾನಸಗಂಗೋತ್ರಿ ಡಾ.ಬಾಬೂ ಜಗಜೀವನರಾಂ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಆರ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಯನ ಕೇಂದ್ರದ ನಿರ್ದೇಶಕ ಮೈಲಹಳ್ಳಿ ರೇವಣ್ಣ ಇದ್ದರು. ಸಹಾಯಕ ಪ್ರಾಧ್ಯಾಪಕ ಬಿ.ಸಿ. ಮಂಜುಳ ಪ್ರಾಸ್ತಾವಿಕ ಮಾತುಗಳಾಡಿದರು. ಸಿ.ಕೆ. ಸೌಮ್ಯ ಸ್ವಾಗತಿಸಿದರು. ಜೆ.ಕೆ. ಸುಜಾತ ನಿರೂಪಿಸಿದರು. ಎನ್. ಲಲಿತಾ ವಂದಿಸಿದರು.