ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ

Srinivasa Murthy VN
Updated On : 29 Aug 2013, 11:08 am

ಮೈಸೂರು: 66/11 ಕೆವಿ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಇಂಡಸ್ಟ್ರಿಯಲ್ ಮತ್ತು ಬಿಇಎಂಎಲ್ ಫೀಡರ್‌ನಲ್ಲಿ ಆರ್‌ಎಪಿಡಿಆರ್‌ಪಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.31ರ ಬೆಳಗ್ಗೆ 10 ರಿಂದ 3 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು- ಇಂಡಸ್ಟ್ರಿಯಲ್ ಸಬರ್ಬ್, ವಿಶ್ವೇಶ್ವರನಗರ, ಜೆ.ಪಿ. ನಗರ ಎ, ಬಿ, ಸಿ, ಇ ಮತ್ತು ಎಫ್ ಬ್ಲಾಕ್, ಕೊಪ್ಪಲೂರು, ಎಪಿಎಂಸಿ ಯಾರ್ಡ್, ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಇಂದು ಅನ್ನ ಸಂತರ್ಪಣೆ
ಮೈಸೂರು:
ನಗರದ ಬಿಗ್‌ಬಜಾರ್ ಸಂಸ್ಥೆಯು ಅನ್ನಪೂರ್ಣ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಅಭಿವೃದ್ಧಿಗಾಗಿ ಆ.30 ರಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಆ.30ರ ಮಧ್ಯಾಹ್ನ 12.30ಕ್ಕೆ ಬಿಗ್ ಬಜಾರ್ ಆವರಣದಲ್ಲಿ ಈ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಬಿಗ್‌ಬಜಾರ್‌ನಲ್ಲಿ ವ್ಯವಹರಿಸುವ ಗ್ರಾಹಕರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಬಳಿಕ ಗ್ರಾಹಕರು ಹುಂಡಿಯಲ್ಲಿ ತಮ್ಮ ಇಚ್ಛಾನುಸಾರ ಹಣ ದಾನ ಮಾಡಬಹುದು ಎಂದು ಬಿಗ್‌ಬಜಾರ್‌ನ ಹರೀಶ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.ಅನ್ನಪೂರ್ಣ ಚಾರಿಟಬಲ್ ಕಣ್ಣಿನ ಆಸ್ಪತ್ರೆಯ ಡಾ.ವಿದ್ಯಾಶಂಕರ್, ಕುಮಾರ್ ಇದ್ದರು.

ಇಂದು ಪ್ರವೇಶ ನಿಷೇಧ
ಮೈಸೂರು:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡಕ್ಕೆ ಆ.30 ರಂದು ಸಾಂಪ್ರದಾಯಿಕ ಸ್ವಾಗತ ನೀಡುವುದರಿಂದ ಜಯಮಾರ್ತಾಂಡ ದ್ವಾರದಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಆಹ್ವಾನಿತರು ಪಾಲಿಕೆ ಎದುರಿನ ಕರಿಕಲ್ಲು ತೊಟ್ಟಿ ದ್ವಾರದ ಮೂಲಕ ಅರಮನೆ ಮಂಡಳಿ ಬಳಿ ಬರಬೇಕು. ಅರಮನೆ ಮಂಡಳಿ ಕಚೇರಿಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡಲಾಗಿದೆ. ಜಯಮಾರ್ತಾಂಡ ದ್ವಾರ ಸಂಪೂರ್ಣ ಮುಚ್ಚಿರುತ್ತದೆ. ಆ ಮಾರ್ಗದಲ್ಲಿ ದಸರಾ ಆನೆಗೆ ಮಾತ್ರ ಪ್ರವೇಶ ಇರುತ್ತದೆ. ಸಾರ್ವಜನಿಕರು ವರಾಹ ದ್ವಾರದ ಮೂಲಕ ಪ್ರವೇಶಿಸಿ ನಿಗದಿಪಡಿಸಿದ ಬ್ಯಾರಿಕೇಡ್ ಹಾಕಿರುವ ಸ್ಥಳದಲ್ಲಿ ಬಂದು ಕಾರ್ಯಕ್ರಮ ವೀಕ್ಷಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಸಲೀಂ ತಿಳಿಸಿದ್ದಾರೆ.

ವಾಹನಗಳಿಗೆ ವೇಗ ಮಿತಿ
ಮೈಸೂರು:
ನಗರಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ಹಾಗೂ ನಗರದ ಒಳಗಿನ ರಸ್ತೆಗಳಲ್ಲಿ ವಾಹನಗಳು ಅತಿವೇಗದಿಂದ ಸಂಚರಿಸುತ್ತಿದ್ದು, ಇದರಿಂದ ಅನೇಕ ವೇಳೆ ರಸ್ತೆ ಅಪಘಾತ ಸಂಭವಿಸುತ್ತಿದೆ. ಆದ್ದರಿಂದ ನಗರದಲ್ಲಿ ವಾಹನಗಳಿಗೆ ವೇಗ ಮಿತಿ ನಿಗದಿಪಡಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಕಾರುಗಳು ಪ್ರತಿ ಗಂಟೆಗೆ 60 ಕಿ.ಮೀ. ಬಸ್ ಮತ್ತು ದ್ವಿಚಕ್ರ ವಾಹನಗಳು ಪ್ರತಿ ಗಂಟೆಗೆ 50 ಕಿ.ಮೀ. ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನಗಳು ಪ್ರತಿ ಗಂಟೆಗೆ 40 ಕಿ.ಮೀ ಮತ್ತು ಟ್ರಾಕ್ಟರ್ ಪ್ರತಿ ಗಂಟೆಗೆ 20 ಕಿ.ಮೀ. ವೇಗದಲ್ಲಿ ಸಂಚರಿಸಬೇಕು ಎಂದು  ಅವರು ಸೂಚಿಸಿದ್ದಾರೆ.

ಮಕ್ಕಳಿಲ್ಲದವರಿಗೆ ತಪಾಸಣೆ
ಗುಣಶೀಲ ಆಸ್ಪತ್ರೆಯು ಆ.31ರಂದು ಮಕ್ಕಳಿಲ್ಲದ ದಂಪತಿಗೆ ಉಚಿತ ತಪಾಸಣೆ ಶಿಬಿರ ಆಯೋಜಿಸಿದೆ. ಅಂದು ಬೆಳಗ್ಗೆ 8.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶ್ವಮಾನವ ಜೋಡಿ ರಸ್ತೆಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂ. 2343585 ಸಂಪರ್ಕಿಸಬಹುದು.

ಕ್ರೀಡಾಕೂಟ: ಮುತ್ತಿಗೆಹುಂಡಿ ವಿದ್ಯಾರ್ಥಿಗಳ ಸಾಧನೆ
ಸರಗೂರು:
ಎಚ್.ಡಿ. ಕೋಟೆ ತಾಲೂಕು ಕ್ರೀಡಾ ಕೂಟದಲ್ಲಿ ಮುತ್ತಿಗೆಹುಂಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಥ್ರೋಬಾಲ್‌ನಲ್ಲಿ ಬಾಲಕರ ತಂಡವು ಪ್ರಥಮ ಹಾಗೂ ಬಾಲಕಿಯರ ತಂಡವು ದ್ವಿತೀಯ, ಮೂರು ಸಾವಿರ ಓಟದಲ್ಲಿ ಪ್ರಥಮ ಬಹುಮಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಮುತ್ತಿಗೆಹುಂಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಶಶಿಕಲಾ 1,600 ಮತ್ತು 3 ಸಾವಿರ ಮೀಟರ್‌ನಲ್ಲಿ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಸಿದ್ದೇಗೌಡ, ದೈಹಿಕ ಶಿಕ್ಷಕ ಬೋಗನಂಜಯ್ಯ, ಬಿ.ಆರ್. ಗೌಡರ್, ಸಂದೀಪ್, ಸೋಮಣ್ಣ, ತಿಪ್ಪೇಸ್ವಾಮಿ, ಎಸ್‌ಣಡಿಎಂಸಿ ಅಧ್ಯಕ್ಷ ರಾಜಪ್ಪ, ಭವನೇಶ್, ಬಸವರಾಜಪ್ಪ ಅಭಿನಂದಿಸಿದ್ದಾರೆ.

ಇಂದು ಜಯಂತಿ ಮಹೋತ್ಸವ
ಸುತ್ತೂರು:
ವರುಣ ಕ್ಷೇತ್ರ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘ ಮತ್ತು ಅವಿರಳ ಜ್ಞಾನಿ ನಿಜದ ಸುಜ್ಞಾನಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಮಹೋತ್ಸವವು ಆ.30ರ ಬೆಳಗ್ಗೆ 10.30ಕ್ಕೆ ನಂಜನಗೂಡು ತಾಲೂಕಿನ ಎಸ್. ಹೊಸಕೋಟೆ ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆಯಲಿದೆ. ಕಾಂಗ್ರೆಸ್ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಹೋತ್ಸವ ಉದ್ಘಾಟಿಸುವರು. ಜಿಪಂ ಸದಸ್ಯ ಎಲ್. ಮಾದಪ್ಪ ಅಧ್ಯಕ್ಷತೆ ವಹಿಸುವರು. ಪ್ರಾಂಶುಪಾಲ ಎಲ್. ನರಸಿಂಹಯ್ಯ, ಮುಖ್ಯಶಿಕ್ಷಕ ಪಿ.ಸಿ. ರಾಜಶೇಖರ್ ಭಾಗವಹಿಸುವರು.

ಹನಗೋಡಿನಲ್ಲಿ ಅರಸು ಜಯಂತಿ
ಹುಣಸೂರು:
ಸವಿತಾ ಸಮಾಜದ ವತಿಯಿಂದ ಡಿ.ದೇವರಾಜ ಅರಸ್ ಅವರ ಜನ್ಮ ದಿನಾಚರಣೆಯನ್ನು ತಾಲೂಕಿನ ಹನಗೋಡಿನಲ್ಲಿ ಆಚರಿಸಿತು. ಈ ವೇಳೆ ಸಮಾಜದ ಅಧ್ಯಕ್ಷ ಗೋವಿಂದರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಜನ್ಮ ದಿನ ಆಚರಿಸಿ ಮಾತನಾಡಿ, ಡಿ.ದೇವರಾಜ್ ಅರಸರು ತಮ್ಮ ಅಧಿಕಾರ ಅವಧಿಯಲ್ಲಿ ಸಾಮಾಜಿಕ ತುಳಿತಕ್ಕೊಳಗಾದ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಶ್ರಮವಹಿಸಿ ಹಿಂದುಳಿದ ವರ್ಗಗಳ ಕಣ್ಮಣಿಯಾಗಿದ್ದರು ಎಂದು ಬಣ್ಣಸಿದರು. ಸಮಾಜದ ಪದಾಧಿಕಾರಿಗಳಾದ ಕುಮಾರ್, ನಟೇಶ್, ನಾಗೇಶ್, ರಾಮಕೃಷ್ಣ, ಬೀರೇಶ್, ಗೋವಿಂದಯ್ಯ, ನಟರಾಜ್, ಚಂದ್ರು, ಮಾದೇವ್‌ಭಾಗವಹಿಸಿದ್ದರು.

ಪ್ರತಿಭಾ ಪುರಸ್ಕಾರ
ಕೆ.ಆರ್. ನಗರ:
ತಾಲೂಕಿನ ಮಿರ್ಲೆ ಗ್ರಾಮದ ಯುವಸ್ಪಂದನದ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸೆ. 1 ರಂದು ಮಿರ್ಲೆ ಹೋಬಳಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಭಿವ್ಯಕ್ತಿ ಚರ್ಚಾ ಸ್ವರ್ಧೆ ಏರ್ಪಡಿಸಿದೆ. ಅಂದು ಮಧ್ಯಾಹ್ನ 2ಕ್ಕೆ ಮಿರ್ಲೆ ಗ್ರಾಮದ ಗಣಪತಿ ದೇವಾಲಯದ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಸಾ.ರಾ. ಮಹೇಶ್ ಉದ್ಘಾಟಿಸುವರು. ಯುವಸ್ಪಂದನ ಅಧ್ಯಕ್ಷ ಪ್ರಶಾಂತ ಮಿರ್ಲೆ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಮಿರ್ಲೆ ಗ್ರಾಪಂ ಅಧ್ಯಕ್ಷೆ ಸುಮಾ, ಜಿಪಂ ಸದಸ್ಯೆ ಕಲ್ಪನಾ ಧನಂಜಯ, ತಾಪಂ ಸದಸ್ಯ ಸೀತಾರಾಮು ಮತ್ತು ಇತರರು ಭಾಗವಹಿಸುವರು.

ಅರ್ಜಿ ಆಹ್ವಾನ
ಪಿರಿಯಾಪಟ್ಟಣ:
ತಾಲೂಕಿನ ಸರ್ಕಾರಿ, ಅರೆಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಯಲ್ಲಿ 2013-14ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಥಿವೇತನ ಮಂಜೂರಾತಿ ಬಯಸುವ ಆಸಕ್ತಿವುಳ್ಳ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲಾ ಕಾಲೇಜಿನ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರಿಂದ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸೆ.20ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement