ನಿವೇಶನ ಹಂಚಿಕೆ ಮಾಡಲು ಆಗ್ರಹಿಸಿ ದಸಂಸ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 29
ಬೆಲವತ್ತದಲ್ಲಿ ಸೂರಿಲ್ಲದವರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಸಂಸ ಮತ್ತು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು. ಬೆಲವತ್ತ ಗ್ರಾಮದ ಸರ್ವೆ ನಂ.93ರ ಪ್ರಕರಣ ಸಂಖ್ಯೆ 10/7980ರ ಭೂಮಿಯನ್ನು ಕುಪ್ಪಯ್ಯ ಅವರ ಸ್ವಾಧೀನಕ್ಕೆ ವಹಿಸಿಕೊಡಬೇಕು. ಬೆಲವತ್ತ ಸರ್ವೆ ನಂ. 12/13ರಲ್ಲಿ 6 ಎಕರೆ 20 ಗುಂಟೆ ಜಮೀನು ಬಡವರ ನಿವೇಶನಕ್ಕೆ ನಿಗದಿಯಾಗಿದೆ. ಕೂಡಲೆ ನಿರ್ಗತಿಕ ಬಡಜನರಿಗೆ ನಿವೇಶನ ಹಂಚಬೇಕು ಎಂದು ಅವರು ಆಗ್ರಹಿಸಿದರು.
ಬೆಲವತ್ತ ಗ್ರಾಮದ ಬಡ ಪ.ಜಾತಿ ಮತ್ತು ವರ್ಗಗಳಿಗೆ ಮಂಜೂರಾಗಿದ್ದ ಭೂಮಿಗಳು ಅಕ್ರಮವಾಗಿ ಮಾರಾಟವಾಗಿದ್ದು, ಪಿಟಿಸಿಎಲ್ ಪ್ರಕರಣ ನಡೆದು ಪರಿಶಿಷ್ಟರ ಪರ ತೀರ್ಮಾನವಾಗಿದ್ದರೂ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಭೂಮಿ ಬಿಡಿಸಿಕೊಡದೆ ತಾರತಮ್ಯ ಮಾಡುತ್ತಿದ್ದಾರೆ. ಕೂಡಲೆ ಪಿಟಿಸಿಎಲ್ ಭೂಮಿಯನ್ನು ದಲಿತರಿಗೆ ಬಿಡಿಸಿಕೊಡಬೇಕು. ಭೂದಂಧೆ ಕೋರರು ಮತ್ತು ಕೆಲವು ದುಷ್ಟಹಿತಾಶಕ್ತಿಗಳು ಬೆಲವತ್ತ ಪ್ರದೇಶದಲ್ಲಿ ಬಡವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಭೂ ದಂದೆಯ ಸಂಬಂಧ ಸಿಐಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸಮನ್ವಯ ವೇದಿಕೆ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಸೋಮಯ್ಯ ಮಲೆಯೂರು, ಕೆ.ಹನುಮಂತು, ದಶರಥ ಇದ್ದರು.