ಮುಂಬೈ ಅತ್ಯಾಚಾರ ಪ್ರಕರಣ ಖಂಡಿಸಿ ಧರಣಿ
ಮೈಸೂರು: ಮುಂಬೈನಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ, ಅಸಹಾಯಕ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ರಾಜ್ಯ ದ್ರಾವಿಡ ಮಹಾಸಭಾ ಕಾರ್ಯಕರ್ತರು ನಗರದ ಗಾಂಧಿ ಚೌಕದಲ್ಲಿ ಪ್ರತಿಭಟಿಸಿದರು. ದೇಶದಲ್ಲಿ ಪುಂಡರು, ಪೋಲಿಗಳು, ಕಿಡಿಗೇಡಿಗಳು ಮತ್ತು ಕಾಮುಕರ ಸಂಖ್ಯೆ ಹೆಚ್ಚಾಗುತ್ತಿದೆ. ಅಸಹಾಯಕ ಮಹಿಳೆಯರು ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನೆ ದಿನೆ ಹೆಚ್ಚುತ್ತಿದೆ. ಅನೇಕ ಸಂದರ್ಭದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಸಂಗವೂ ನಡೆದಿದೆ. ಆದ್ದರಿಂದ ಮಹಿಳೆಯರ ರಕ್ಷಣೆಗೆ ಸೂಕ್ತ ಕಾನೂನು ತಿದ್ದುಪಡಿ ತರಬೇಕು ಎಂದು ಮಹಾಸಭಾ ಆಗ್ರಹಿಸಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸೆ.3ಕ್ಕೆ ಡಾ. ರಾಗೌ ಸಮಗ್ರ ಕಾವ್ಯ ಬಿಡುಗಡೆ
ಮೈಸೂರು: ನಗರದ ಸಂವಹನ ಟ್ರಸ್ಟ್ ಮತ್ತು ಮಂಡ್ಯದ ಕರ್ನಾಟಕ ಸಂಘವು ಡಾ.ರಾಗೌ ಸಮಗ್ರ ಕಾವ್ಯ ಬಿಡುಗಡೆ ಹಾಗೂ ವಿಚಾರ ಸಂಕಿರಣವನ್ನು ಸೆ.3ರ ಬೆಳಗ್ಗೆ 10.30ಕ್ಕೆ ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದೆ. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು. ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕೃತಿ ಬಿಡುಗಡೆಗೊಳಿಸಿ, ಕಾರ್ಯಕ್ರಮ ಉದ್ಘಾಟಿಸುವರು. ಪ್ರೊ.ಚಂದ್ರಶೇಖರಯ್ಯ ಅವರ ಎ ಪ್ರೊಫೈಲ್ ಆಫ್ ರಾಗೌ ದಿ ರೈಟರ್ ಕೃತಿಯನ್ನು ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಡಾ.ಸಿ. ನಾಗಣ್ಣ ಬಿಡುಗಡೆಗೊಳಿಸಿ, ಮಾತನಾಡುವರು. ಬೆಳಗ್ಗೆ 10ಕ್ಕೆ ಗಮನಹಳ್ಳಿ ಸ್ವಾಮಿ ಮತ್ತು ತಂಡದವರು ರಾಗೌ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಡುವರು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಿ.ಎನ್. ಲೋಕಪ್ಪ, ಡಾ.ಎ. ರಂಗಸ್ವಾಮಿ ಇದ್ದರು.