ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ
ಕ.ಪ್ರ.ವಾರ್ತೆ ಹುಣಸೂರು ಆ. 31
ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳನ್ನು ಪಕ್ಷಭೇದ ಮರೆತು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.
ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಕಲ್ಕಡ ಗ್ರಾಮದಲ್ಲಿ ನೂತನವಾಗಿ ಶ್ರೀ ಕಾಳಿಕಾಂಬ ಕಮಠೇಶ್ವರ ಹಾಗೂ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿದು ನೀವು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದು, ಗ್ರಾಮಕ್ಕೆ ಈಗಾಗಲೇ 36 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಗೊಳ್ಳುತ್ತಿದ್ದು, ಗ್ರಾಮ ಪರಿಮಿತಿಯಲ್ಲಿ ನನ್ನ ಮೊದಲ ಕಂತಿನ ಅನುದಾನದಲ್ಲೆ 10 ಲಕ್ಷ ವೆಚ್ಚದಲ್ಲಿ ಎರಡೂ ಬದಿಯಲ್ಲಿ ಚರಂಡಿ ಹಾಗೂ ಡಕ್ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ಹೇಳಿದರು.
ಮುಖಂಡ ಗೋವಿಂದಾಚಾರಿ ಗ್ರಾಮದಲ್ಲಿರುವ ಹಲವಾರು ಸಮಸ್ಯೆಗಳಿರುವ ಬಗ್ಗೆ ಶಾಸಕರ ಗಮನ ಸೆಳೆದು, ಮುಂದಿನ ದಿನಗಳಲ್ಲಿ ತಾಲೂಕಿನ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಲಿದ್ದು, ಆಗ ಅಲ್ಲಿಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೆಂದು ತಿಳಿಸಿದರು.
ಗ್ರಾಮದ ಮುಖಂಡರಾದ ಈರಪ್ಪಾಜಿ, ಬಸವರಾಜು, ಪ್ರಭಾಕರರಾಧ್ಯ, ಕಲ್ಲಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಂದರಮ್ಮ, ಗ್ರಾಪಂ ಸದಸ್ಯರಾದ ರವಿಕುಮಾರ್, ಹುಣಸೂರಿನ ದ್ವಾರಕೀಶ್, ಕುಮಾರ್, ಹರೀನಹಳ್ಳಿ ಮಲ್ಲೇಸ್ವಾಮಿ, ಮರೀಗೌಡ, ನಾಗರಾಜು ಇದ್ದರು.
ಜಾನುವಾರುಗಳಿಗೆ ವಿಮೆ ಮಾಡಿಸಿ
ಹುಣಸೂರು: ಪಶುಪಾಲಕರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸುವುದರ ಮೂಲಕ ಸರ್ಕಾರದ ರಿಯಾಯಿತಿ ದರದ ವಿಮಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹನಗೋಡು ಪಶುವೈದ್ಯ ಡಾ.ದರ್ಶನ್ ಹೇಳಿದರು. ಹನಗೋಡು ಹೋಬಳಿಯ ಕಾಡಂಚಿನ ಗ್ರಾಮಗಳಾದ ಚಿಕ್ಕಹೆಜ್ಜೂರು ಹಾಗೂ ಕೊಳವಿಗೆ ಗ್ರಾಮದಲ್ಲಿ 700ಕ್ಕೂ ಹೆಚ್ಚು ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕುವ ಶಿಬಿರದಲ್ಲಿ ಮಾತನಾಡಿ, ಜಾನುವಾರುಗಳಿಗೆ ಸರ್ಕಾರದ ವತಿಯಿಂದ ವಿಮಾ ಸೌಲಭ್ಯ ಕಲ್ಪಿಸಿದ್ದು, ಪ್ರತಿ ಜಾನುವಾರುಗಳಿಗೆ ಶೇ.60-70ರಷ್ಟು ರಿಯಾಯಿತಿ ಸೌಲಭ್ಯವಿದೆ.