ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆನಂದ ಪ್ರಜ್ಞೆಯ ಮಹಾನ್ ಲೇಖಕ ಭೈರಪ್ಪ

Srinivasa Murthy VN
Updated On : 31 Aug 2013, 11:38 am

ಕ.ಪ್ರ.ವಾರ್ತೆ ಮೈಸೂರು ಆ. 31
ಡಾ.ಎಸ್.ಎಲ್. ಭೈರಪ್ಪ ಅವರು ಆನಂದ ಪ್ರಜ್ಞೆಯ ಮಹಾನ್ ಲೇಖಕ ಎಂದು ಶತಾವಧಾನಿ ಡಾ.ಆರ್. ಗಣೇಶ್ ಹೇಳಿದರು.
ವನಮಾಲಿ ಚಾರಿಟಬಲ್ ಟ್ರಸ್ಟ್ ನಾದಬ್ರಹ್ಮ ಸಂಗೀತಸಭಾದಲ್ಲಿ ಶನಿವಾರ ಏರ್ಪಡಿಸಿದ್ದ ವನಮಾಲಿ ಸೇವಾ ಪ್ರಶಸ್ತಿ ಹಾಗೂ ಪದ್ಮಶ್ರೀ ಮತ್ತೂರು ಕೃಷ್ಣಮೂರ್ತಿ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪುರಸ್ಕೃತರನ್ನು ಕುರಿತು ಅವರು ಮಾತನಾಡಿದರು.
ಸನಾತನ ಧರ್ಮದ ಸರ್ವಶ್ರೇಷ್ಠ ಸಿದ್ಧಾಂತ ಆನಂದ. ಎಲ್ಲಿ ಆನಂದ ಇರುತ್ತದೋ ಅಲ್ಲಿ ಅಭಯ ಇರುತ್ತದೆ. ಕಲೆಯೂ ಲೋಕವನ್ನು ಸುಧಾರಣೆ ಮಾಡುತ್ತದೋ ಇಲ್ಲವೋ, ಆದರೆ ತನ್ನ ರಸದಿಂದ ಆನಂದ ಉಂಟು ಮಾಡಲಿದೆ. ಅಂತಹ ರಸ ನೀಡುವ ಆನಂದ ಪ್ರಜ್ಞೆಯ ಹತ್ತಾರು ಕೃತಿಗಳನ್ನು ಡಾ.ಭೈರಪ್ಪ ಅವರು ನೀಡುವ ಮೂಲಕ ಜೀವನದ ಅನುಭವ ಗಟ್ಟಿಗೊಳಿಸಿದ್ದಾರೆ ಎಂದರು.
ಶ್ರೇಷ್ಠ ಹಾಗೂ ಜನಪ್ರಿಯ ಬರವಣಿಗೆ ಹೊಂದಿರುವ ಭೈರಪ್ಪ ಅವರ ಕಾದಂಬರಿಗಳಲ್ಲಿನ ಪಾತ್ರಗಳ ವೈವಿಧ್ಯತೆ ಅನನ್ಯ. ಭಾರತೀಯ ಯಾವ ಲೇಖಕರಿಂದ ಇಂತಹ ಪಾತ್ರಗಳ ಸೃಷ್ಟಿ ನಡೆದಿಲ್ಲ. ಜಾಗತಿಕ ಮಟ್ಟದಲ್ಲಿ ಶೇಕ್ಸ್‌ಪಿಯರ್ ಹಾಗೂ ಟಾಲ್‌ಸ್ಟಾಯ್ ಇವರ ಸರಿಸಮಾನಕ್ಕೆ ನಿಲ್ಲುವರು ಎಂದು ತಿಳಿಸಿದರು.  
ಅಧ್ಯಕ್ಷತೆ ವಹಿಸಿದ್ದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ಅವರು, 2013ನೇ ಸಾಲಿನ ವನಮಾಲಿ ಸೇವಾ ಪ್ರಶಸ್ತಿಯನ್ನು ಹೆಸರಾಂತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರಿಗೂ, ಪದ್ಮಶ್ರೀ ಡಾ.ಮತ್ತೂರು ಕೃಷ್ಣಮೂರ್ತಿ ಗೌರವ ಪ್ರಶಸ್ತಿಯನ್ನು ನೇತ್ರದಾನಕ್ಕಾಗಿ ಸೇವೆ ಸಲ್ಲಿಸುತ್ತಿರುವ ಬಿ.ಎಸ್. ಮಧುರ ಅವರಿಗೂ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ವಿವಿಧ ಶಾಲೆ ಹಾಗೂ ಸಂಸ್ಥೆಗಳಿಗೆ 1.25 ಲಕ್ಷ ಆರ್ಥಿಕ ನೆರವು ವಿತರಿಸಲಾಯಿತು. ಮೈಸೂರು ಆಕಾಶವಾಣಿ ನಿವೃತ್ತ ನಿರ್ದೇಶಕಿ ಡಾ.ಎಂ.ಎಸ್. ವಿಜಯಾಹರನ್ ಪುರಸ್ಕೃತೆ ಮಧುರ ಅವರ ಸೇವೆ ಸ್ಮರಿಸಿದರು.

ವಿಶ್ವಕರ್ಮ ಜಯಂತಿ ಸರ್ಕಾರ ಆಚರಿಸಲಿ
ಕ.ಪ್ರ.ವಾರ್ತೆ ಮೈಸೂರು ಆ. 31

ಕನಕ ಜಯಂತಿ, ವಾಲ್ಮೀಕಿ ಜಯಂತಿಯಂತೆ ವಿಶ್ವಕರ್ಮ ಜಯಂತಿಯನ್ನು ಸರ್ಕಾರ ಆಚರಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮುಖಂಡರು ಒತ್ತಾಯಿಸಿದರು.
ಈ ಸಮುದಾಯಕ್ಕೆ ರಾಜಕೀಯ ಅಧಿಕಾರ  ನೀಡಬೇಕು ಹಾಗೂ ವಿಶ್ವಕರ್ಮ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಕಳೆದ 13 ವರ್ಷಗಳಿಂದ ಮಹಾಸಭೆ ಹೋರಾಟ ಮಾಡುತ್ತಿದ್ದರೂ, ಬೇಡಿಕೆ ಸಫಲವಾಗಿಲ್ಲ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರ ವಿಶ್ವಕರ್ಮ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರ ಹಿಡಿಯುವಲ್ಲಿ ವಿಶ್ವಕರ್ಮ ಜನಾಂಗದ ಪಾತ್ರವು ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಸೆ.17 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 5ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತಿಯನ್ನು ಕೆ.ಪಿ. ನಂಜುಂಡಿ ಅವರ ನೇತೃತ್ವದಲ್ಲಿ ಆಚರಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಡಾ.ಜಿ. ಪರಮೇಶ್ವರ್ ಮುಂತಾದ ನಾಯಕರು ಭಾಗವಹಿಸುವರು ಎಂದರು.
ಪೂರ್ವಭಾವಿ ಸಭೆ: ವಿಶ್ವಕರ್ಮ ಜಯಂತಿ ಆಚರಿಸುವ ಸಂಬಂಧ ಚರ್ಚಿಸಲು ಸೆ.3 ರಂದು ಮಧ್ನಾಹ್ನ 12ಕ್ಕೆ  ಕಲಾಮಂದಿರಲ್ಲಿ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು. ಪಿ. ಸಿದ್ದಾಚಾರ್, ಶಾಂತಮ್ಮ, ನಾಗಮ್ಮ, ಎಂ.ಎನ್. ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement