ಸಹಾಯಕ ಕೃಷಿ ನಿರ್ದೇಶಕ ಕೆಂಚೇಗೌಡರಿಗೆ ಬೀಳ್ಕೊಡುಗೆ
ಕ.ಪ್ರ.ವಾರ್ತೆ ಹುಣಸೂರು ಆ. 31
ರೈತರು ಮತ್ತು ಮಾರಾಟಗಾರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸತ್ಯ ಹಾಗೂ ನಿಷ್ಠುರವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಪೈಕಿ ಸಹಾಯಕ ಕೃಷಿ ನಿರ್ದೇಶಕ ಕೆಂಚೇಗೌಡ ಒಬ್ಬರು ಎಂದು ರಾಜ್ಯ ಕೃಷಿ ಮಾರಾಟ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ವಿಷಕಂಠ ಹೇಳಿದರು.
ಇಲ್ಲಿನ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ವರ್ಗಾವಣೆಯಾದ ಸಹಾಯಕ ನಿರ್ದೇಶಕ ಕೆಂಚೇಗೌಡರಿಗೆ ಕೃಷಿ ಸಲಕರಣೆ ಮಾರಾಟಗಾರರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ.ದೇವರಾಜ ಅರಸು ಅವರು ಆಡಳಿತ ನಡೆಸಿದ ವಿಶಿಷ್ಟವಾದ ಕ್ಷೇತ್ರದಲ್ಲಿ ಯಾವುದೆ ಕಪ್ಪು ಚುಕ್ಕೆಗಳಿಲ್ಲದೆ, ಸಕಾಲದಲ್ಲಿ ರೈತರಿಗೆ ಬಿತ್ತನೆ ಬೀಜ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸಿ, ಜಿಲ್ಲೆಯ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ಕೃಷಿ ಇಲಾಖೆಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಕೆಂಚೇಗೌಡ, ತಾವು ಈ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲು ಅಧಿಕಾರಿವರ್ಗ ಮತ್ತು ರೈತರು ಹಾಗೂ ಮಾರಾಟಗಾರರು ಕಾರಣರಾಗಿದ್ದಾರೆ.
ತಾವು ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನೂ ನಿಷ್ಠುರವಾಗಿ ಮಾತನಾಡಿದ್ದೇನೆ ಯಾರು ತಪ್ಪಾಗಿ ತಿಳಿದುಕೊಳ್ಳಬಾರದೆಂದು ಮನವಿ ಮಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ರಾಜಶೇಖರ್, ಕೃಷಿ ಸಲಕರಣೆ ಮಾರಾಟಗಾರರಾದ ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು, ಸಂಜೀವಶೆಟ್ಟಿ, ಹರೀಶ್, ಸಂತೋಷ್ ಮಾತನಾಡಿದರು. ಕೃಷಿ ಅಧಿಕಾರಿ ರಾಜನ್ ಪ್ರಾರ್ಥಿಸಿ, ಪ್ರಸನ್ನ ಸ್ವಾಗತಿಸಿ, ವಂದಿಸಿದರು. ಹಲವಾರು ಮಾರಾಟಗಾರರು ಭಾಗವಹಿಸಿದ್ದರು.