ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೊಳವೆ ಬಾವಿ ಕೊರೆಯಲು ಚಾಲನೆ

Srinivasa Murthy VN
Updated On : 4 Jul 2013, 12:20 pm

ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 3
ಪಟ್ಟಣದ ಜನತೆಗೆ ಕುಡಿಯುವ ನೀರಿನ ಬವಣೆ ನೀಗಿಸುವ ಸಲುವಾಗಿ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಮತ್ತು ಅಗತ್ಯವಿರುವೆಡೆ  ಎಂಟು ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ನಾಗಶೆಟ್ಟಿ ಹೇಳಿದರು.
10ನೇ ವಾರ್ಡ್‌ನ ಹೊಳೆಮಹಾಗಣಪತಿ ದೇವಾಲಯದ ಬಳಿ ಕೊಳವೆ ಕೊರೆಯುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾಹಿತಿ ನೀಡಿದ ಅವರು, ಸರ್ಕಾರದ ಆದೇಶದಂತೆ ಇಲ್ಲಿನ ಮುಸ್ಲಿಂ ಬ್ಲಾಕ್, ಅರ್ಕೇಶ್ವರನಗರ, ಕುವೆಂಪು ಬಡಾವಣೆ, ಕನಕನಗರ, ಬಾಬು ಜಗಜೀವನ್‌ರಾವ್ ಬಡಾವಣೆ ಮತ್ತು ಕಾಳಿಕಾಂಬ ವರ್ಕ್‌ಶಾಪ್ ಬಳಿ ಕೊಳವೆ ಬಾವಿ ಕೊರೆಯಲಾಗುತ್ತದೆ ಎಂದರು.
ನೀರಿನ ಲಭ್ಯತೆ ಇರುವ ಕೊಳೆವೆ ಬಾವಿಗಳಿಗೆ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡುವುದರ ಜೊತೆಗೆ ಜನತೆಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು. ವಿದ್ಯುತ್ ಸಮಸ್ಯೆ ಮತ್ತು ಮೋಟಾರ್‌ಗಳ ದುರಸ್ತಿ ಸಂದರ್ಭದಲ್ಲಿ ಕುಡಿಯುವ ನೀರೊದಗಿಸಲು ಸಮಸ್ಯೆ ಆಗುತ್ತಿದ್ದರಿಂದ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದ್ದು, ಮುಂದೆ ಯಾವುದೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಪುರಸಭಾ ಸದಸ್ಯ ಉಮೇಶ್, ಆರೋಗ್ಯಾಧಿಕಾರಿ ರಮೇಶ್, ರವಿ ಇದ್ದರು.

ವಾಹನ ಡಿಕ್ಕಿ: ವ್ಯಕ್ತಿ ಸಾವು
ಬೈಲುಕುಪ್ಪೆ:
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಲುಕುಪ್ಪೆಯ ಬಿ.ಎಂ. ರಸ್ತೆಯಲ್ಲಿ ನಡೆದಿದೆ. ಬೈಲುಕುಪ್ಪೆ ನಿವಾಸಿ ನಾಗರಾಜ (43) ಮೃತಪಟ್ಟವರು. ಇವರು ಸಿಂಡಿಕೇಟ್ ಬ್ಯಾಂಕ್ ಸಮೀಪ ನಡೆದು ಹೋಗುತ್ತಿದ್ದಾಗ ಪಿರಿಯಾಪಟ್ಟಣ ಕಡೆಯಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದು ಮತ್ತೆ ಪಿರಿಯಾಪಟ್ಟಣ ಕಡೆಗೆ ಹೋಗಿದೆ. ಈ ಸಂಬಂಧ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕ್ರೋಶ: ಹಲವು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈ ಸ್ಥಳಕ್ಕೆ ರಸ್ತೆ ಡುಬ್ಬ ನಿರ್ಮಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಹೆದ್ದಾರಿ ಕಾಮಗಾರಿ ಸ್ಥಗಿತ: ಆರೋಪ
ಕ.ಪ್ರ.ವಾರ್ತೆ ಕೆ.ಆರ್. ನಗರ ಜು. 3

ರಸ್ತೆ ದುರಸ್ತಿ ಮಾಡಲು ಮೆಟಲಿಂಗ್ ಮಾಡಿ ತಿಂಗಳಾಗಿದ್ದು, ಡಾಂಬರೀಕರಣ ಮಾಡದೆ ಬಿಟ್ಟಿರುವುದರಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದು, ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಅಸಡ್ಡೆ ತೋರುತ್ತಿದ್ದಾರೆ. ತಾಲೂಕಿನ ಮಾಯಿಗೌಡನಹಳ್ಳಿಯಿಂದ-ಹಾಡ್ಯ ಗೇಟ್- ದೊಡ್ಡಹನಸೋಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ ಮಾಡಿರುವ ಲೋಕೋಪಯೋಗಿ ಇಲಾಖೆಯವರು ಮೆಟಲಿಂಗ್ ನಂತರ ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದರಿಂದ ಜಲ್ಲಿ ಕಲ್ಲುಗಳು ರಸ್ತೆಯ ತುಂಬೆಲ್ಲಾ ಬಿದ್ದಿದ್ದು, ಇದರಿಂದ ಪಾದಚಾರಿಗಳಿಗೆ ನರಕ ಯಾತನೆಯಾಗಿದೆ. ರಸ್ತೆಯಲ್ಲಿ ವಾಹನಗಳು ಚಲಿಸುವಾಗ ಕಲ್ಲುಗಳು ಸಿಡಿದು ಪಾದಚಾರಿಗಳಿಗೆ ಗಾಯಗಳಾಗಿರುವ ಘಟನೆಯು ನಡೆದಿದ್ದು, ಇಷ್ಟಾದರೂ ಇಲ್ಲಿ ಹೇಳುವವರು-ಕೇಳುವವರೆ ಇಲ್ಲವಾಗಿದೆ. ಗುತ್ತಿಗೆದಾರನು ತಿಂಗಳಿನಿಂದ ಇತ್ತ ತಿರುಗಿಯೂ ನೋಡಿಲ್ಲ ಎಂಬುವುದು ಸಾರ್ವಜನಿಕರ ಆರೋಪ. ಸಂಬಂಧಿತ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಕೂಡಲೆ ತುರ್ತು ಕ್ರಮ ಕೈಗೊಂಡು ಮೆಟಲಿಂಗ್ ಮಾಡಿ ಸ್ಥಗಿತಗೊಂಡಿರುವ ರಸ್ತೆಗೆ ಡಾಂಬರೀಕರಣ ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement