ನಾಳೆ ಮೈಸೂರು ವಿವಿ 93ನೇ ಘಟಿಕೋತ್ಸವ
ಕ.ಪ್ರ.ವಾರ್ತೆ ಮೈಸೂರು ಜು. 3
ಮೈಸೂರು ವಿಶ್ವವಿದ್ಯಾನಿಲಯದ 93ನೇ ವಾರ್ಷಿಕ ಘಟಿಕೋತ್ಸವವು ಜು.5ರ ಬೆಳಗ್ಗೆ 10ಕ್ಕೆ ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ನಡೆಯಲಿದೆ.
ಈ ಬಾರಿ ವಿಜ್ಞಾನಿ ಪದ್ಮವಿಭೂಷಣ ಪ್ರೊ. ರೊದ್ದಂ ನರಸಿಂಹ, ಕ್ರಿಕೆಟಿಗ ಪದ್ಮಶ್ರೀ ಅನಿಲ್ ಕುಂಬ್ಳೆ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸೇವಕ ಡಾ.ಹೊ. ಶ್ರೀನಿವಾಸಯ್ಯ ಹಾಗೂ ಕಾನೂನುತಜ್ಞ ಟಿ.ಕೆ. ವಿಶ್ವನಾಥನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ಇವರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ಎಂ.ಎಂ. ಪಲ್ಲಂರಾಜು ಅವರು ಪದವಿ ಪ್ರದಾನ ಮಾಡುವರು. ರಾಜ್ಯಪಾಲ ಹಾಗೂ ಕುಲಾಧಿಪತಿ ಹಂಸ್ರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಮತ್ತು ವಿವಿ ಸಮಕುಲಾಧಿಪತಿ ಆರ್.ವಿ. ದೇಶಪಾಂಡೆ ಉಪಸ್ಥಿತರಿರುವರು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಘಟಿಕೋತ್ಸವದಲ್ಲಿ ಆಯ್ದ ಕೆಲವರಿಗೆ ಮಾತ್ರ ಪದವಿ, ಪದಕ, ಬಹುಮಾನವನ್ನು ಸಾಂಕೇತಿಕವಾಗಿ ವಿತರಿಸಲಾಗುವುದು. ಅದೇ ದಿನ ಮಧ್ಯಾಹ್ನ 3.30ಕ್ಕೆ ಕ್ರಾಫರ್ಡ್ ಭವನದಲ್ಲೇ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿದ್ದು, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಉಪಸ್ಥಿತರಿರುವರು ಎಂದರು.
ಪದವೀಧರರು: ಮೈಸೂರು ವಿವಿ ಈ ಘಟಿಕೋತ್ಸವದಲ್ಲಿ 21,038 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು. ಅವರಲ್ಲಿ 11,758 ಮಹಿಳೆಯರು, 9,280 ಪುರುಷರು ಇದ್ದಾರೆ. 50 ವಿಷಯಗಳಲ್ಲಿ 363 ಅಭ್ಯರ್ಥಿಗಳಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಗುವುದು. ಇವರಲ್ಲಿ 132 ಮಹಿಳೆಯರು, 231 ಪುರುಷರು ಇದ್ದಾರೆ. ಒಟ್ಟು 296 ಪದಕಗಳು ಮತ್ತು 159 ಬಹುಮಾನವನ್ನು 184 ಅಭ್ಯರ್ಥಿಗಳು ಪಡೆದಿದ್ದು, ಇದರಲ್ಲಿ 104 ಮಹಿಳೆಯರು ಸೇರಿದ್ದಾರೆ. 3,278 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪಡೆದಿದ್ದು ಇವರಲ್ಲಿ 1,833 ಮಹಿಳೆಯರು ಇದ್ದಾರೆ. 16,947 ಅಭ್ಯರ್ಥಿಗಳು ಸ್ನಾತಕಪದವಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಕಲಾ ನಿಕಾಯದಲ್ಲಿ 135 ಮಂದಿ ಪಿಎಚ್ಡಿ, 83 ಪದಕ, ಬಹುಮಾನ ವಿಜೇತರು, ಒಟ್ಟು 5,489 ಅಭ್ಯರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ. ವಾಣಿಜ್ಯ ನಿಕಾಯದಲ್ಲಿ 28 ಪಿಎಚ್ಡಿ, 26 ಪದಕ, ಬಹುಮಾನ, 7,163 ಅಭ್ಯರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ. ಶಿಕ್ಷಣ ನಿಕಾಯದಲ್ಲಿ 13 ಪಿಎಚ್ಡಿ, 7 ಪದಕ, ಬಹುಮಾನ, ಒಟ್ಟು 3,612 ಮಂದಿ ಪದವಿಗೆ ಅರ್ಹರಾಗಿದ್ದಾರೆ. ಕಾನೂನು ನಿಕಾಯದಲ್ಲಿ 7 ಪಿಎಚ್ಡಿ, 2 ಪದಕ, ಬಹುಮಾನ, 320 ಪದವಿಗೆ ಅರ್ಹರಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ 180 ಮಂದಿ ಪಿಎಚ್ಡಿ, 66 ಪದಕ, ಬಹುಮಾನ, 4454 ಪದವಿಗೆ ಅರ್ಹರಾಗಿದ್ದಾರೆ ಎಂದರು.
ಪದಕ ಬಹುಮಾನ: ಕಲಾ ನಿಕಾಯದಲ್ಲಿ ಸ್ನಾತಕೋತ್ತರದಲ್ಲಿ ಎಚ್.ಪಿ. ಮಂಜು ಪ್ರಥಮ ಸ್ಥಾನ ಪಡೆದಿದ್ದು, ಎಂ. ಅಕ್ಷತಾ 8 ಪದಕ, 2 ಬಹುಮಾನ ಪಡೆದಿದ್ದಾರೆ. ಸ್ನಾತಕ ಪದವಿಯಲ್ಲಿ ಎಂ.ಪಿ. ಸ್ವಾತಿ ಪ್ರಥಮ, ಎಂ.ಟಿ. ಶ್ರುತಿರಂಜಿನಿ 5 ಪದಕ, 4 ಬಹುಮಾನ ಹಾಗೂ ಡಿ. ಸುಜನ್ಕುಮಾರ್ 5 ಪದಕ, 4 ಬಹುಮಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರದಲ್ಲಿ ಎಂ. ನರಸಿಂಹ ಅಕಾಶ್ ಪ್ರಥಮ, ಮೆಲ್ಯಾವತಿ 2 ಪದಕ, 2 ಬಹುಮಾನ, ಬಿ. ಮೇಘಶ್ರೀ 4 ಪದಕ ಪಡೆದಿದ್ದಾರೆ. ಶಿಕ್ಷಣ ನಿಕಾಯ ಸ್ನಾತಕೋತ್ತರದಲ್ಲಿ ಎಸ್. ಲಿಂಗರಾಜು 4 ಪದಕು, ಸ್ನಾತಕ ಪದವಿಯಲ್ಲಿ ಎನ್.ಎಂ. ಪಂಕಜ ಪ್ರಥಮ, 2 ಪದಕ ಮತ್ತು 1 ಬಹುಮಾನ, ಬಿ.ಎಂ. ರೇಖಾ 2 ಪದಕ, 1 ಬಹುಮಾನ ಪಡೆದಿದ್ದಾರೆ. ಕಾನೂನು ನಿಕಾಯದಲ್ಲಿ ಸ್ನಾತಕೋತ್ತರದಲ್ಲಿ ಡಿಯಾನ್ ಜಾನ್ ಪ್ರಥಮ, 3 ಪದಕ ಹಾಗೂ 3 ಬಹುಮಾನ ಪಡೆದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ ಪಿಜಿಯಲ್ಲಿ ಡಿ. ಗಂಗಾಧರ ಪ್ರಥಮ, ಎಚ್.ಆರ್. ವನಿತಾ 12 ಪದಕ, 4 ಬಹುಮಾನ, ಯುಜಿ ವಿಭಾಗದಲ್ಲಿ ಪ್ರಿಯಾ ಎಂ. ಕೌಶಿಕ್ ಪ್ರಥಮ, ಕೆ.ಎಸ್. ಅಖಿಲೇಶ್ 4 ಪದಕ, 3 ಬಹುಮಾನ ಪಡೆದಿದ್ದಾರೆ.
ಇಳಿವಯಸ್ಸಿನಲ್ಲಿ ಪಿಎಚ್ಡಿ: ಐಟಿಪಿಐ (ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ಸ್- ಇಂಡಿಯಾ) ಅಧ್ಯಕ್ಷ ಡಿ.ಎಸ್. ಮೆಶ್ರಂ ಅವರು ಇಳಿವಯಸ್ಸಿನಲ್ಲಿ ಪಿಎಚ್ಡಿ ಮಾಡಿದ್ದು, ಅವರಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು. ವಿದೇಶದಲ್ಲಿ ವಾಸವಾಗಿರುವ ಅವರ ಪುತ್ರಿ ಸ್ವಾಮಿ ಮೆಶ್ರಂ ಸಹ ನಮ್ಮ ವಿವಿಯಲ್ಲೇ ಪಿಎಚ್ಡಿ ಮಾಡುತ್ತಿದ್ದಾರೆ. ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಪತ್ನಿ ಎಂ.ಸಿ. ಮೋಹನಕುಮಾರಿ ಅವರು ಪಿಎಚ್ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು. ಕುಲಸಚಿವ ಪ್ರೊ.ಸಿ. ಬಸವರಾಜು, ಪರೀಕ್ಷಾಂಗ ಕುಲಸಚಿವ ಪ್ರೊ.ಡಿ. ಶ್ರೀಜಯದೇವರಾಜ ಅರಸ್ ಇದ್ದರು.