ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರಿಗೆ ಶೀಘ್ರ ಪಾಸ್‌ಪೋರ್ಟ್ ಸೇವಾ ಕೇಂದ್ರ: ಕಾರ್ತಿಕೇಯನ್

Srinivasa Murthy VN
Updated On : 4 Jul 2013, 12:21 pm

ಕ.ಪ್ರ.ವಾರ್ತೆ ಮೈಸೂರು ಜು. 3
ನಗರದಲ್ಲಿ ಸದ್ಯದಲ್ಲಿಯೇ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾಗಲಿದೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಪಿ.ಎಸ್. ಕಾರ್ತಿಕೇಯನ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಭಾರತೀಯ ಕೈಗಾರಿಕೆಗಳ ಒಕ್ಕೂಟ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೈಸೂರಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಇದೆ. ನಾವು ಸಹ ಸೇವಾ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದ್ದೇವೆ. ಇದಕ್ಕೆ ದೆಹಲಿಯಲ್ಲಿ ಒಪ್ಪಿಗೆ ಸಿಗಬೇಕು. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಒತ್ತಾಯಿಸಿದರೆ ಖಂಡಿತವಾಗಿಯೂ ಸಿಗುತ್ತದೆ. ಅವರಿಂದ ಮಾತ್ರ ಈ ಕೆಲಸ ಆಗುತ್ತದೆ ಎಂದರು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸಿಗುವ ಸಾಧ್ಯತೆ ಇದೆ ಎಂದು  ಅವರು ಹೇಳಿದರು. ಈಗ ಆನ್‌ಲೈನ್ ಮೂಲಕ ಹಾಗೂ ಎಸ್‌ಬಿಐನಿಂದ ಮಾತ್ರ ಹಣ ಪಾವತಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಪಾಸ್‌ಪೋರ್ಟ್‌ನಲ್ಲಿ ಗುಣಮಟ್ಟ ಮತ್ತು ಭದ್ರತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು. ಸಿಐಐ ಅಧ್ಯಕ್ಷ  ಎಸ್. ನಾಗರಾಜನ್, ಮಹೇಶ್, ವಿ. ಮೌಳಿ  ಇದ್ದರು.

ಡಾ.ಗಂಗೂಬಾಯಿ ಬಗ್ಗೆ ಅವಹೇಳನಕಾರಿ ಹೇಳಿಕೆ; ವಿವಿಧ ಸಂಘಟನೆಗಳ ಖಂಡನೆ
ಕ.ಪ್ರ.ವಾರ್ತೆ ಮೈಸೂರು ಜು. 3

ಹಿರಿಯ ಸಂಗೀತಗಾರ್ತಿ ದಿ. ಡಾ. ಗಂಗೂಬಾಯಿ ಹಾನಗಲ್ ಅವರ ಬಗ್ಗೆ ಪಿಟೀಲು ವಾದಕ ಮೈಸೂರು ಎಂ. ನಾಗರಾಜ್ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ನಗರದಲ್ಲಿರುವ ಸಂಗೀತ ವಿವಿಗೆ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿಟ್ಟಿರುವುದರಿಂದ ಪ್ರಗತಿ ಹೊಂದುತ್ತಿಲ್ಲ. ಆದ್ದರಿಂದ ಅವರ ಹೆಸರನ್ನು ತೆಗೆದು ಬೇರೆ ಹೆಸರಿಡಬೇಕು' ಎಂದು ಹೇಳಿರುವುದನ್ನು ಮೈಸೂರು ನಗರ ವಿದ್ಯಾರ್ಥಿ ಕ್ರಿಯಾ ಸಮಿತಿ ಅಧ್ಯಕ್ಷ ಅಜಯ್, ಶ್ರೀಗಂಧ ಯುವಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ನಾಗರಿಕರ ವೇದಿಕೆಯ ಗೌರವ ಕಾರ್ಯದರ್ಶಿ ಟಿ. ಕಾಂತರಾಜು, ಪೋಷಕರ ಕ್ರಿಯಾ ಸಮಿತಿ ಪತ್ರಿಕಾ ಕಾರ್ಯದರ್ಶಿ ಮನೋಹರ್ ಖಂಡಿಸಿದ್ದಾರೆ.ಹಾನಗಲ್ ಅವರು ಹಿಂದೂಸ್ತಾನಿ ಸಂಗೀತದ ಅಪ್ರತಿಮ ಗಾಯಕರು. ಅವರ ಹೆಸರನ್ನು ನಗರದಲ್ಲಿರುವ ಸಂಗೀತ ವಿವಿಗೆ ಇಡಬಾರದು ಎಂದು ಹೇಳುವ ಮೂಲಕ ನಾಗರಾಜ್ ಕಲಾಸಕ್ತರಲ್ಲಿ ಅಚ್ಚರಿ ಹಾಗೂ ಗಾಬರಿ ಮೂಡಿಸಿದ್ದಾರೆ.
ಸಂಗೀತ ಎಂಬುದು ಸಾಗರವಿದ್ದಂತೆ. ಅದು ಎಲ್ಲ ಪ್ರಕಾರಗಳನ್ನೂ ಒಳಗೊಂಡ ಕಲೆ. ನಾಗರಾಜ್ ಸಹ ಒಬ್ಬ ಸಂಗೀತಗಾರರಾಗಿ ಸಂಗೀತದ ಪ್ರಕಾರಗಳನ್ನು ಬೇರ್ಪಡಿಸಿ ಮಾತನಾಡುವ ಮೂಲಕ ತಮ್ಮ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ.ಅವರು ಬಳಸಿರುವ ಈ ವಾಕ್ಯ ಕೋಮು ಸಾಮರಸ್ಯವನ್ನು ಕದಡಿ ಅನಾಹುತಗಳಿಗೆ ಎಡೆ ಮಾಡಿಕೊಡುವಂತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾದಲ್ಲಿ ಅದಕ್ಕೆ ನಾಗರಾಜ್ ಅವರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಕೀಳು ಹೋಲಿಕೆಗಳ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿರುವ ನಾಗರಾಜ್ ಕೂಡಲೆ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ವಿವಿಧ ಸಂಘ ಸಂಸ್ಥೆಗಳು ಒಂದುಗೂಡಿ ವ್ಯಾಪಕ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement