ವೈದ್ಯನಾಥೇಶ್ವರ ದೇಗುಲಕ್ಕೆ ಡಿಸಿ ಭೇಟಿ
ಕ.ಪ್ರ.ವಾರ್ತೆ ಮೈಸೂರು ಜು. 3
ಟಿ. ನರಸೀಪುರ ತಾಲೂಕಿನ ತಲಕಾಡಿನಲ್ಲಿ ಡಿ. 2 ರಂದು ಪ್ರಸಿದ್ಧ ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ರಾಮೇಗೌಡ ಬುಧವಾರ ಅಲ್ಲಿನ ವೈದ್ಯನಾಥೇಶ್ವರ ಸಮೂಹ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಿದ್ಧತೆ ಚುರುಕುಗೊಳಿಸುವ ಹಿನ್ನೆಲೆ ತಲಕಾಡು ಹಾಗೂ ಪಂಚಲಿಂಗ ದರ್ಶನ ನಡೆಯುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಅಧಿಕಾರಿಗಳ ಸಭೆ ನಡೆಸಿ, ರಸ್ತೆಗಳು ಹಾಗೂ ಅವುಗಳ ಅಭಿವೃದ್ಧಿ ಕುರಿತು ಮಾಹಿತಿ ಪಡೆದು, ಜನದಟ್ಟಣೆ ತಪ್ಪಿಸಲು ಏಕಮುಖ ಸಂಚಾರ ಮಾಡುವಂತೆ ಸೂಚಿಸಿದರು.
ತಡೆರಹಿತ ಹಾಗೂ ನಿರಂತರ ವಿದ್ಯುತ್ ಒದಗಿಸುವ, ಆರೋಗ್ಯ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ಮೊದಲಾದ ವಿಷಯಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪ್ರಸಿದ್ಧ ಪಂಚಲಿಂಗದರ್ಶನ ಮಹೋತ್ಸವ ಕಾರ್ಯಕ್ರಮಕ್ಕೆ 30ರಿಂದ 35 ಲಕ್ಷ ಯಾತ್ರಾರ್ಥಿಗಳು ಮತ್ತು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಸಂಬಂಧಿಸಿದ ಎಲ್ಲ ಇಲಾಖೆಗಳ ಮುಖ್ಯಸ್ಥರು ಸಕಲ ಸಿದ್ಧತೆಗಳನ್ನು ಈಗಿನಿಂದಲೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕ ಕಟಕಟೆ ಮತ್ತು ಹೆಲಿಪ್ಯಾಡ್ ನಿರ್ಮಾಣ, ದೇವಸ್ಥಾನಗಳಿಗೆ ಸ್ಪೈನ್ಲೆಸ್ ಸ್ಟೀಲ್ ಹಿತ್ತಾಳೆ ರೈಲಿಂಗ್, ಪ್ರವಾಸಿ ಮಂದಿರಗಳ ನವೀಕರಣ ಮತ್ತು ಪೀಠೋಪಕರಣ ವ್ಯವಸ್ಥೆ ಮಾಡಬೇಕು. ತಲಕಾಡನ್ನು ಸಂಪರ್ಕಿಸುವ ಪ್ರಮುಖ ಜಿಲ್ಲಾ ಮುಖ್ಯ ರಸ್ತೆಗಳ, ರಾಜ್ಯ ಹೆದ್ದಾರಿ 79, ರಾಜ್ಯ ಹೆದ್ದಾರಿ 84ರ ಮತ್ತು ತಲಕಾಡು ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಮುಡುಕುತೊರೆ ಗ್ರಾಮದಲ್ಲಿ ಶಾಶ್ವತ ಪ್ರವಾಸಿಮಂದಿರ ಹಾಗೂ ಮುಡುಕುತೊರೆ ಗ್ರಾಮದಲ್ಲಿ ಪ್ರವಾಸಿಗರಿಗೆ ಶಾಶ್ವತ ವಿಶ್ರಾಂತಿ ಗೃಹ ನಿರ್ಮಾಣ ಕಾರ್ಯ ಮತ್ತು ತಲಕಾಡು ಗ್ರಾಮದಲ್ಲಿ ಹಾಲಿ ಇರುವ ಸರ್ಕಾರಿ ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಈ ಪಂಚಲಿಂಗ ದರ್ಶನದಲ್ಲಿ ಯಾವುದೆ ಸಾಂಕ್ರಾಮಿಕ ರೋಗ ಉಲ್ಬಣವಾಗದಂತೆ ಕಟ್ಟೆಚ್ಚರ ವಹಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು. ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರುಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ವಿದ್ಯುತ್ ಇಲಾಖೆಯಿಂದ ತಲಕಾಡು ಮುಡುಕುತೊರೆ ಇತರ 5 ದೇವಸ್ಥಾನಗಳಿಗೆ ಶಾಶ್ವತವಾಗಿ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ಮತ್ತು ಮುಡುಕುತೊರೆ ಮತ್ತು ಇತರ ದೇವಸ್ಥಾನಗಳಿಗೆ ವಿದ್ಯುತ್ ಸರಬರಾಜು ಮಾಡಲು ಟ್ರಾನ್ಸ್ಫಾರ್ಮರ್ ಅಳವಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು. ಕಾವೇರಿ ನೀರಾವರಿ ನಿಗಮದಿಂದ ಕಾವೇರಿ ನದಿಯ ಬದಿಯಲ್ಲಿ ಮಾಧವ ಮಂತ್ರಿ ನಾಲಾ ಮತ್ತು ಶಾಖಾ ನಾಲಾಗಳ ವಿವಿಧ ಸ್ಥಳಗಳಲ್ಲಿ ಪಂಚಲಿಂಗಗಳಲ್ಲಿ ಒಂದಾದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸಮೀಪ ಶಾಶ್ವತ ಸಾಮೂಹಿಕ ಸ್ನಾನಘಟ್ಟ ನಿರ್ಮಿಸಬೇಕು. ದೇವಸ್ಥಾನಗಳಿಗೆ ಯಾತ್ರಾರ್ಥಿಗಳು ಸಂಚರಿಸಲು ಅನುವಾಗುವಂತೆ ಮಿನಿ ಬಸ್ ವ್ಯವಸ್ಥೆ ಮಾಡಬೇಕು ಹಾಗೂ ತಲಕಾಡಿಗೆ ರಾಜ್ಯದ ನಾನಾ ಭಾಗಗಳಿಂದ ಹೆಚ್ಚುವರಿಯಾಗಿ ಬಸ್ ನಿಯೋಜಿಸಲು ಕ್ರಮ ಜರುಗಿಸಬೇಕು.
ಜಿಪಂ ಸಿಇಒ ಪಿ.ಎ. ಗೋಪಾಲ್, ಎಸ್ಪಿ ಅಭಿನವ್ ಖರೆ, ಪ್ರಾಚ್ಯವಸ್ತು ಸಂಗ್ರಾಹಲಯದ ನಿರ್ದೇಶಕ ಗೋಪಾಲ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ಸಹಾಯಕ ಆಯುಕ್ತರು ಬಸವರಾಜ್, ತಾಪಂ ಅಧ್ಯಕ್ಷ ಅಂದನಿ, ಉಪಾಧ್ಯಕ್ಷೆ ಸುಜಾತಾ, ಜಿಪಂ ಸದಸ್ಯೆ ಗೌರಮ್ಮ ಇದ್ದರು.