ಶಿಕ್ಷಕರ ಸಂಘಕ್ಕೆ ಆಯ್ಕೆ
ಕೆ.ಆರ್. ನಗರ: ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಲಕ್ಷ್ಮೀಪುರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ. ರಂಗಸ್ವಾಮಿ ಅವಿರೋಧ ಆಯ್ಕೆಯಾದರು. ಪದಾಧಿಕಾರಿಗಳಾಗಿ ವಿ.ಟಿ. ಮೇರಿ, ಹುಸೇನ್‌ಪಾಷ (ಉಪಾಧ್ಯಕ್ಷರು), ಎಂ.ಬಿ. ಕುಮಾರಸ್ವಾಮಿ (ಕಾರ್ಯದರ್ಶಿ), ಬೀರೇಶ್, ಎಂ.ಎನ್. ರಾಧ (ಸಂಘಟನಾ ಕಾರ್ಯದರ್ಶಿ), ರಾಜಕುಮಾರ್ (ಖಜಾಂಚಿ), ಸುಗುಣ, ಪುಷ್ಪಲತಾ, ಕೆ.ಎಸ್. ಇಂದ್ರರಮ್ಮ, ಎಚ್.ಆರ್. ಕುಮಾರ್, ಎಚ್.ಆರ್. ರಾಮೇಗೌಡ, ಟಿ.ಆರ್. ತಿಮ್ಮೇಗೌಡ, ಕೆ. ಕೃಷ್ಣೇಗೌಡ, ಶಿವಲಿಂಗಯ್ಯ, ತಿಮ್ಮರಾಯಪ್ಪ, ಬಸವರಾಜು (ನಿರ್ದೇಶಕರು) ಆಯ್ಕೆಯಾಗಿದ್ದಾರೆ.
ಕೊತ್ತನಹಳ್ಳಿಯಲ್ಲಿ ಹುಲಿ ಪ್ರತ್ಯಕ್ಷ
ಎಚ್.ಡಿ. ಕೋಟೆ: ಹುಲಿ ಕಾಣಿಸಿಕೊಂಡು, ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಕೊತ್ತನಹಳ್ಳಿ ಗ್ರಾಮದಲ್ಲಿ ನಡಿದಿದೆ. ತಾಲೂಕಿನ ಮೇಟಿಕುಪ್ಪೆ ಅರಣ್ಯ ಪ್ರದೇಶದ ಕೊತ್ತನಹಳ್ಳಿ ಗ್ರಾಮದ ಬಳಿ ಕಾಡಿನ ಅಂಚಿನಲ್ಲಿ ಇರುವ ಅರಣ್ಯ ಇಲಾಖೆಯ ಟ್ರಂಚ್ ಪಕ್ಕದ ಶಿವಣ್ಣ ಎಂಬವರ ಕಬ್ಬಿನ ಗದ್ದೆಯಲ್ಲಿ ಹುಲಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಮುನಿರಾಜು ಹಾಗು ಸಿಬ್ಬಂದಿ ಸ್ಥಳಕ್ಕೆ ಬಂದು ಹುಲಿಯನ್ನು ಕಾಡಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಯಾವುದೆ ಹಾನಿ ಸಂಭವಿಸಿಲ್ಲ.
ಪಾಲಿಸಿ ಪಾಸ್‌ಬುಕ್ ನೀಡಲು ಮನವಿ
ನಂಜನಗೂಡು: ಭಾರತೀಯ ಅಂಚೆ ಇಲಾಖೆಯು ತನ್ನಲ್ಲಿರುವ ಎಲ್ಲ ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿಗಳನ್ನು ಗಣಕೀಕರಣಗೊಳಿಸುತ್ತಿದ್ದು, ಪಾಲಿಸಿ ಪಾಸ್‌ಬುಕ್ ನೀಡುವಂತೆ ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕರು ಮನವಿ ಮಾಡಿದ್ದಾರೆ. ಆದ್ದರಿಂದ ನಂಜನಗೂಡು, ಟಿ. ನರಸೀಪುರ, ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳ ವ್ಯಾಪ್ತಿಗೆ ಬರುವ ಎಲ್ಲ ಅಂಚೆ ಜೀವ ವಿಮಾ, ಗ್ರಾಮೀಣ ಅಂಚೆ ಜೀವ ವಿಮಾ ಪಾಲಿಸಿದಾರರು ತಮ್ಮ ಪಾಲಿಸಿ ಪಾಸ್ ಪುಸ್ತಕಗಳನ್ನು ಗಣಕೀಕರಣಕ್ಕಾಗಿ ಸಮೀಪದ ಅಂಚೆ ಕಚೇರಿಗೆ ತಲುಪಿಸಲು ಕೋರಿದ್ದಾರೆ.