ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಸನ್ಮಾನ
ಕ.ಪ್ರ.ವಾರ್ತೆ ಹುಣಸೂರು ಜು. 3
ಇಲ್ಲಿನ ಟ್ಯಾಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರಿ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ಎಲ್ಲ ವೈದ್ಯರನ್ನು ಸನ್ಮಾನಿಸುವ ಮೂಲಕ ವೈದ್ಯರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಕಾಲೇಜಿನ ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ಧಾವಿಸಿ ವೈದ್ಯರುಗಳಿಗೆ ಹೂಗುಚ್ಚ ನೀಡಿ, ಸಿಹಿ ನೀಡಿ ಗೌರವಿಸಿದರು.
ಟ್ಯಾಲೆಂಟ್ ಕಾಲೇಜಿನ ಪ್ರಾಂಶುಪಾಲ ರವಿ, ಸಾರ್ವಜನಿಕರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಉದಯಕುಮಾರ್ ಮಾತನಾಡಿದರು.
ವೈದ್ಯರಾದ ಡಾ. ಚಂದ್ರಶೇಖರ್, ಡಾ. ಸಚ್ಚಿದಾನಂದಮೂರ್ತಿ, ಡಾ. ಮಹೇಶ್, ಡಾ. ಸುಖೇಶ್, ಡಾ. ಮೀನಾಕ್ಷಿ, ಡಾ. ಲತಾ, ಡಾ. ವಾಣಿ, ಡಾ. ಪರಮೇಶ್, ಡಾ. ಕೃಷ್ಣಕುಮಾರ್ ಅವರನ್ನು ಸನ್ಮಾನಿಸಲಾಯಿತು. ಟ್ಯಾಲೆಂಟ್ ಶಾಲೆಯ ನವೀನ್ ರೈ ಇದ್ದರು. ಹಲವು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಕೀಟನಾಶಕದಿಂದ ಹೊಗೆಸೊಪ್ಪು ನಾಶವಾಗಿಲ್ಲ: ಡಾ.ವಸಂತಕುಮಾರ್
ಕ.ಪ್ರ.ವಾರ್ತೆ ಹುಣಸೂರು ಜು. 3
ಫೈಟಾನ್- ಮತ್ತು ಜಿಎಲ್ಸ್ಟಿನ್ ಬಳಸಿ ಹೊಗೆಸೊಪ್ಪಿನ ಗಿಡ ನಾಶವಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಗ್ರೀನ್ ಲೈಫ್ಸೈನ್ಸ್ ಟೆಕ್ನಾಲಜಿಸ್ ನಿರ್ದೇಶಕ ಡಾ. ವಸಂತಕುಮಾರ್ ಸ್ಪಷ್ಟಪಡಿಸಿದ್ದಾರೆ.
ರೈತರಿಗೆ ಮಾಹಿತಿ ಮತ್ತು ಅನುಭದ ಕೊರತೆಯಿಂದ ಫೈಟಾನ್ ಸಾವಯವ ಟಾನಿಕ್ ಜೊತೆಗೆ ವಿವಿಧ ಔಷಧ ಬೆರೆಸಿ, ಪ್ರಮಾಣ ಮೀರಿ ಬಳಸಿದ ಪರಿಣಾಮ ತಂಬಾಕು ಗಿಡ ಸುಟ್ಟು ಹೋಗಿರಬಹುದು ಎಂದು ಹೇಳಿದ್ದಾರೆ.
ಆದರೆ, ತಮ್ಮ ಫೈಟಾನ್- ಟಿ ಮತ್ತು ಜಿಎಲ್ಸ್ಟಿನ್ ಒಂದು ಸಸ್ಯ ಮೂಲದ ಸಾವಯವ ಸಸ್ಯ ಟಾನಿಕ್ ಆಗಿದ್ದು, ಇದು ಕೀಟನಾಶಕವು ಅಲ್ಲ, ರೋಗ ನಾಶಕವು ಅಲ್ಲ. ಮೊದಲಿಗೆ ಇದು ರಾಸಾಯನಿಕವೆ ಅಲ್ಲ. ಬೆಳವಣಿಗೆಗೆ ಪೂರಕವಾಗಿ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುವ ಉತ್ಪನ್ನವಾಗಿದ್ದು, ಇದರಲ್ಲಿ ಯಾವುದೆ ವಿಷಕಾರಿ ವಸ್ತುವೆ ಇರುವುದಿಲ್ಲ. ಹಾಗಾಗಿ ಇದರಿಂದ ಬೆಳೆ ನಾಶವಾಗುವ ಪ್ರಶ್ನೆಯೆ ಇಲ್ಲ. ಕಳೆದ 11 ವರ್ಷಗಳಿಂದ ರೈತರು ಇದನ್ನು ಬಳಸಿ, ಹೆಚ್ಚು ಹೆಚ್ಚು ಲಾಭ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಇದರ ಜನಪ್ರಿಯತೆಯೆ ಇದಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದ್ದಾರೆ.
ಹನಗೋಡು ಹೋಬಳಿಯ ದಾಸನಪುರದ ಕಾಳೇಗೌಡರಿಗೆ ನೀಡಿದ 15 ಸಾವಿರ ಪರಿಹಾರ ಕೇವಲ ಮಾನವೀಯತೆ ದೃಷ್ಟಿಯಿಂದ ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಿದಷ್ಟೇ ಹೊರತು, ನಮ್ಮ ಉತ್ಪನ್ನಗಳಿಂದ ಹಾನಿಯಾಗಿದೆ ಎಂದು ಒಪ್ಪಿಕೊಂಡು ನೀಡಿದ ಪರಿಹಾರವಲ್ಲವೆಂದು ತಿಳಿಸಿದ್ದಾರೆ.
ಹಾಗೆ ಹೆಗ್ಗಂದೂರಿನ ಕಲ್ಯಾಣಮ್ಮನವರ ಜಮೀನಿನಲ್ಲಿ ಇದೇ ಸಮಸ್ಯೆ ತಲೆದೋರಿದಾಗ ನಾವು ಭೇಟಿ ನೀಡಿ, ಪರಿಶೀಲಿದಾಗ ಅಲ್ಲಿಯೂ ಸಹ ನೇರವಾಗಿ ಫೈಟಾನ್- ಟಿ ಜೊತೆಗೆ ಬೇರೆ ಕೀಟನಾಶಕ ಬಳಕೆ ಮಾಡಿದ್ದೀರಿ ಎಂದು ಸಮಜಾಯಿಷಿ ನೀಡಿ, ನಿಮ್ಮ ಬೆಳೆ ಉಳಿಸಿಕೊಡಲು ನಾವು ಸಿದ್ಧ ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿದರು.
ಕಲ್ಯಾಣಮ್ಮ ಒಪ್ಪದೆ ಹಣ ನೀಡಿ ಇಲ್ಲವೆ ಕೋರ್ಟ್ಗೆ ಹೋಗುವುದಾಗಿ ಬೆದರಿಕೆ ಹಾಕಿದರು. ಆಗ ನಾವು ಕೋರ್ಟಿಗೆ ಹೋಗಿ, ಅಲ್ಲಿ ಏನು ತೀರ್ಮಾನ ಬರುತ್ತದೆಯೇ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ. ಬೇರೆ ಯಾವ ರೈತರು ಆತಂಕಪಡಬೇಡಿ, ಫೈಟಾನ್- ಟಿ ಬಳಕೆ ಮಾಡಿ ಬೇರೆ ಯಾವ ಔಷಧವನ್ನು ಮಿಶ್ರಣ ಮಾಡಿಕೊಳ್ಳಬೇಡಿ, ಉತ್ತಮ ಇಳುವರಿ ಬೆಳೆ ಬರುತ್ತದೆ ಎಂದು ಮನವಿ ಮಾಡಿದ್ದಾರೆ.