ಅರ್ಹ ರೈತರಿಗೆ ಬಿತ್ತನೆ ಬೀಜ ವಿತರಿಸಿ
ಕ.ಪ್ರ.ವಾರ್ತೆ ಟಿ.ನರಸೀಪುರ ಜು. 4
ಸ್ಥಳೀಯ ಚುನಾಯಿತ ಪ್ರತಿನಿಧಿ ಹಾಗೂ ರಾಜಕೀಯ ಮುಖಂಡರಿಗೆ ಮನಬಂದಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ನೀಡುವ ಕೃಷಿ ಇಲಾಖೆಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಅರ್ಹ ರೈತರಿಗೆ ವಿತರಣೆಯಾಗಬೇಕು ಎಂದು ರೈತ ಮುಖಂಡರು ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ರೈತ ಮುಖಂಡರು, ಮುಂಗಾರು ಕೃಷಿ ಹಂಗಾಮು ಚಟುವಟಿಕೆಗಳು ಆರಂಭವಾಗುವ ಸಂದರ್ಭದಲ್ಲಿಯೇ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ನಿರಂತರವಾಗಿ ಆಗುತ್ತಿರುವ ಅನ್ಯಾಯ ಹಾಗೂ ಅವ್ಯವಸ್ಥೆಯ ವಿರುದ್ಧ ವ್ಯಾಪಕವಾಗಿ ದೂರಿದರಲ್ಲದೆ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಸಮರ್ಪಕವಾಗಿ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯ ಆರಂಭದಲ್ಲಿಯೇ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜಕಾರಣಿಗಳು ಹಾಗೂ ದೊಡ್ಡ ಮುಖಂಡರಿಗೆ ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ವಿತರಣೆ ಮಾಡಿದರೆ ಅದು ನಿಜವಾದ ರೈತನಿಗೆ ತಲುಪುವುದೆ ಇಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯ ರೈತರಿಗೆ ವಂಚನೆ ಮಾಡಿದಂತಾಗುತ್ತದೆ. ಸಹಕಾರ ಸಂಘ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಸಮರ್ಪಕವಾಗಿ ವಿತರಣೆ ಮಾಡುವ ವ್ಯವಸ್ಥೆಯನ್ನು ಮಾಡಬೇಕು. ಅಧಿಕಾರಿಗಳು ಬೆಳೆ ವಿಮೆಯಂತಹ ಸೌಲಭ್ಯವನ್ನು ರೈತರು ಪಡೆದುಕೊಳ್ಳುವಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸುಟ್ಟ ಟ್ರಾನ್ಸ್ಫಾರ್ಮರ್ಗಳನ್ನು ಕೂಡಲೆ ಬದಲಾಯಿಸಿ ರೈತರ ಪಂಪ್ಸೆಟ್ಗೆ ಹೆಚ್ಚಿನ ಸಮಯ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಅರುಣಪ್ರಭ ಮಾತನಾಡಿ, ಸಮರ್ಪಕವಾದ ದಾಖಲೆಗಳಿಲ್ಲದ ಆರೋಪಗಳನ್ನು ರೈತ ಮುಖಂಡರು, ವೈಯಕ್ತಿಕವಾಗಿ ಅಧಿಕಾರಿಗಳ ಮೇಲೆ ಮಾಡಬಾರದು. ದಾಖಲೆ ಸಮೇತ ದೂರು ನೀಡಿದರೆ ರೈತರನ್ನು ಸುಲಿಗೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಸರ್ಕಾರ ನೀರಿನ ಕರವನ್ನು ರೈತರಿಂದ ಸಂಗ್ರಹಿಸುವಂತೆ ಕಂದಾಯ ಇಲಾಖೆಗೆ ಸೂಚಿಸಿರುವುದರಿಂದ ರೈತರು ಸಾಧ್ಯವಾದಷ್ಟು ಕರವನ್ನು ಪಾವತಿಸಬೇಕು. ಮುಂದಿನ ಸಭೆಯನ್ನು ರೈತರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು. ನೀರಾವರಿ ನಿಗಮದ ಎಇಇ ಶ್ರೀಕಂಠಪ್ರಸಾದ್ ಮಾತನಾಡಿ, ಕಬಿನಿ ನಾಲೆಗಳಿಗೆ ಜು. 15ರಿಂದ ನೀರು ಹರಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆ- ಕಟ್ಟೆಗಳಿಗೆ ನೀರು ತುಂಬಿಸಲು ಆದ್ಯತೆ ನೀಡಲಾಗುವುದು. ಮುಂದಿನ ನವೆಂಬರ್ನಲ್ಲಿ ರೈತರ ಫಸಲು ಪೂರ್ಣಗೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್. ರಮೇಶ್ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಲೋಕೋಪಯೋಗಿ ಎಇಇ ಡಿ. ದಯಾನಂದ, ಜಿಪಂ ಎಇಇ ಎಸ್.ಆರ್. ಪುರುಷೋತ್ತಮ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ.ಆರ್. ಗೋಪಿಕೃಷ್ಣ, ದೈಹಿಕ ಪರಿವೀಕ್ಷಣಾಧಿಕಾರಿ ಸಂಪತ್ ದೊರೈರಾಜ್, ಕಂದಾಯ ಇಲಾಖೆಯ ಸಹಾಯಕಿ ಮಂಜುಳಾ, ರೈತ ಮುಖಂಡರಾದ ಮಾದಾಪುರ ಶಿವಣ್ಣ, ಕುಮಾರಸ್ವಾಮಿ, ಎಂ.ಎಲ್. ಹುಂಡಿ ಪರಶಿವಮೂರ್ತಿ, ವಿರೇಶ್, ಸಹಾಯಕ ಕೃಷಿ ಅಧಿಕಾರಿಗಳಾದ ಸುಧಾ, ಕುಮಾರಸ್ವಾಮಿ ಇದ್ದರು.