ಈಗಿನ ರಾಜಕಾರಣಿಗಳಲ್ಲಿ ಸ್ವಾರ್ಥ ಹೆಚ್ಚಳ
ಕ.ಪ್ರ.ವಾರ್ತೆ ಹುಣಸೂರು ಜು. 4
12ನೇ ಶತಮಾನದ ಬಿಜ್ಜಳ ಮಹಾರಾಜರ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ಅವರು ಜನರ ಹಿತ ಮತ್ತು ರಾಜ್ಯದ ಕಲ್ಯಾಣಕ್ಕಾಗಿ ಬೊಕ್ಕಸವನ್ನು ಬಳಕೆ ಮಾಡುತ್ತಿದ್ದರು. ಆದರೆ, ಇತ್ತಿಚಿನ ರಾಜಕಾರಣಿಗಳು ರಾಜ್ಯದ ಬೊಕ್ಕಸವನ್ನೇ ಖಾಲಿ ಮಾಡಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ವಿಷಾದಿಸಿದರು.
ಪಟ್ಟಣದ ಮುನೇಶ್ವರ ಮೈದಾನದಲ್ಲಿ ಗುರುವಾರ ನಡೆದ ಬಸವ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರಿಂದ ಆಯ್ಕೆಯಾದ ಶಾಸಕರು, ಮಂತ್ರಿಗಳು ದೇವರು ಮತ್ತು ಸತ್ಯದ ಹೆಸರಿನಲ್ಲಿ ಪ್ರಮಾಣ ಮಾಡಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳವಲ್ಲಿ ವಿಫಲರಾಗಿದ್ದಾರೆ. ಎಲ್ಲಾ ಚುನಾಯಿತ ಪ್ರತಿನಿಧಿಗಳೂ ಇನ್ನು ಮುಂದಾರು ಬುದ್ಧ, ಬಸವಣ್ಣ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲಿ ಎಂದು ಆಶಿಸಿದರು.
ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಪ್ರತಿಯೊಬ್ಬರು ಬಸವಣ್ಣವರ ತತ್ವ, ಆದರ್ಶ ಮತ್ತು ಸಿದ್ಧಾಂತಗಳನ್ನು ಪರಿಪೂರ್ಣವಾಗಿ ಮೈಗೂಡಿಸಿಕೊಂಡರೆ ಸರ್ಕಾರದ ಕಾರ್ಯಕ್ರಮಗಳ ಅವಶ್ಯಕತೆಯೇ ಇರುವುದಿಲ್ಲ. ರಾಜ್ಯದಲ್ಲಿ ಅಕ್ಷರ, ಆರೋಗ್ಯ, ಅನ್ನ ಸೇರಿದಂತೆ ತ್ರಿವಿಧ ದಾಸೋಹಗಳನ್ನು ಮಠ- ಮಾನ್ಯಗಳು ಮಾಡುತ್ತಿದ್ದನ್ನು ತಾವು ಅಧ್ಯಯನ ಮಾಡಿ ಶಿಕ್ಷಣ ಮಂತ್ರಿಯಾಗಿದ್ದಾಗ ಜಾರಿಗೆ ತಂದ ಅಕ್ಷರ, ಆರೋಗ್ಯ, ಬಿಸಿಯೂಟ ವ್ಯವಸ್ಥೆಯಿಂದ 65 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದ ಅವರು, ಮಠ-ಮಾನ್ಯಗಳ ವಿರೋಧಿ ಎಂದು ಬಣ್ಣಕಟ್ಟಿ ಶ್ರಮಿಸಿದವರ ಮೇಲೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಬಸವಣ್ಣನವರ ಜಯಂತಿ ಕೇವಲ ವೀರಶೈವ ಸಮಾಜಕ್ಕೆ ಸೀಮಿತವಾಗಿಲ್ಲ ಹಾಗೂ ಅವರನ್ನು ವರ್ಷದಲ್ಲಿ ಒಮ್ಮೆ ಆಚರಿಸಿ ನೆನೆದುಕೊಂಡರೆ ಪ್ರಯೋಜನವಿಲ್ಲ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಪಾಲನೆ ಮಾಡಿದರೆ ಸಮಾಜ ಮತ್ತು ದೇಶ ಎರಡೂ ಅಭಿವೃದ್ಧಿಯಾಗುತ್ತದೆ ಎಂದರು.
ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, ಬಸವಣ್ಣನವರು ಜಾತೀಯತೆ ಮತ್ತು ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಮಹಾತ್ಮರು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ತಿಪ್ಪಣ್ಣ, ಮಾಜಿ ಸಭಾಪತಿ ವೀರಣ್ಣಮತ್ತಿಕಟ್ಟಿ ಮಾತನಾಡಿದರು. ಮೈಸೂರು ವಿವಿ ಸಂಸ್ಕೃತ ಪ್ರಾಧ್ಯಾಪಕ ಡಾ.ಎಸ್. ಶಿವರಾಜಪ್ಪ ಪ್ರಧಾನ ಭಾಷಣ ಮಾಡಿದರು.
ಸುತ್ತೂರು ಮಠದ ಶಿವರಾತ್ರಿಕೇಂದ್ರ ಸ್ವಾಮೀಜಿ, ಮಾದಹಳ್ಳಿ ಮಠದ ಸಾಂಬಸದಾಶಿವ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಜಾನಪದ ಕಲಾ ತಂಡ ಮೆರವಣಿಗೆ
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಮೂರ್ತಿಯನ್ನು ಅಲಂಕೃತ ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮಾಡಲಾಯಿತು. ಕಂಸಾಳೆ ನೃತ್ಯ, ಮೈಲಾರಲಿಂಗ ಗುಡ್ಡರ ಕುಣಿತ, ನಂದಿ ಕಂಬ, ಬೊಂಬೆಯಾಟ, ಮಹದೇವಪ್ಪನವರ ವೀರಗಾಸೆ, ಮಹಿಳಾ ವೀರಗಾಸೆ ಕುಣಿತ, ಕೀಲುಕುದುರೆ ಕುಣಿತ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರ ಮನ ತಣಿಸಿದರು. ಮಾಜಿ ಸಚಿವ ಎಂ. ಮಹದೇವು, ಪುರಸಭಾ ಮುಖ್ಯಾಧಿಕಾರಿ ಆರ್. ಹರೀಶ್, ಉಪವಿಭಾಗಾಧಿಕಾರಿ ವಿನುತಾ ಪ್ರಿಯಾ, ತಹಸೀಲ್ದಾರ್ ಶಿವಾನಂದಮೂರ್ತಿ, ಜಿಪಂ ಸದಸ್ಯರಾದ ಡಾ. ಪುಷ್ಪಾ ಅಮರನಾಥ್, ರಮೇಶ್, ಮುಖಂಡರಾದ ಪಿ.ಆರ್. ರಾಚಪ್ಪ, ವಿ.ಎನ್. ದಾಸ್, ವೀರಶೈವ ಮಹಾಸಭಾದ ಅಧ್ಯಕ್ಷ ಸೋಮಶೇಖರ್, ಬಸವ ಸಮಿತಿ ಅಧ್ಯಕ್ಷ ಬಸವರಾಜ್, ಬಿ.ಆರ್. ಶಣ್ಮುಖ, ಎಸ್.ಎಲ್. ಮಹದೇವಪ್ಪ, ಗುರುಸ್ವಾಮಿ, ಬಿ.ಎಲ್. ನಾಗರಾಜು, ಶಾಂತಕುಮಾರಿ, ಬಸವರಾಜು, ಮಲ್ಲೇಶ್ ಸ್ವಾಮಿ ಇದ್ದರು.