ಎನ್ಟಿಎಂಎಸ್ ಮುಚ್ಚಿದರೆ ಹೋರಾಟ
ಕ.ಪ್ರ.ವಾರ್ತೆ ಮೈಸೂರು ಜು. 4
ಇಂದಿನ ಕಾಂಗ್ರೆಸ್ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಗೌರವ ಕೊಡುವ ಕೆಲಸ ಮಾಡಬೇಕು ಎಂದು ಕನ್ನಡ ಕ್ರಿಯಾ ಸಮತಿ ಅಧ್ಯಕ್ಷ ಪ. ಮಲ್ಲೇಶ್ ಆಗ್ರಹಿಸಿದರು.
ಕನ್ನಡ ಕ್ರಿಯಾ ಸಮಿತಿಯು ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿವೇಕ ಸ್ಮಾರಕ ಬೇಡ ಎಂದಲ್ಲ, ಪಾರಂಪರಿಕ ಶಾಲೆಯ ಜಾಗವೇ ಬೇಕೇ ಎಂಬ ವಿಷಯ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.
ಈ ಹಿಂದಿನ ಬಿಜೆಪಿ ಸರ್ಕಾರ ರಾಮಕೃಷ್ಣ ಮಠಕ್ಕೆ ಇಲ್ಲಿನ ಪಾರಂಪರಿಕ ಎನ್ಟಿಎಂ ಶಾಲೆಯ ಜಾಗವನ್ನು ಸ್ಮಾರಕ ನಿರ್ಮಾಣಕ್ಕೆ ಉಚಿತವಾಗಿ ನೀಡಿರುವುದರ ವಿರುದ್ಧ ಮೈಸೂರು ಜಿಪಂ ಪಕ್ಷಾತೀತವಾಗಿ ನಿರ್ಣಯ ಕೈಗೊಂಡಿದೆ. ಇಂದಿನ ಕಾಂಗ್ರೆಸ್ ಸರ್ಕಾರ ಆ ನಿಲುವಿಗೆ ಮಾನ್ಯತೆ ನೀಡುವ ಮೂಲಕ ಪಂಚಾಯತ್ ರಾಜ್ ವಿಕೇಂದ್ರೀಕರಣಕ್ಕೆ ಗೌರವ ಕೊಡಬೇಕು ಎಂದರು.
ಆರ್ಎಸ್ಎಸ್ ಬೆಂಬಲಿತ ಬಿಜೆಪಿ ಸರ್ಕಾರ ಈ ಹಿಂದಿನ ಹಲವು ಯೋಜನೆಗಳನ್ನು ಕೈಬಿಡಲು ಕಾಂಗ್ರೆಸ್ ಸರ್ಕಾರ ತೀರ್ಮಾನ ಕೈಗೊಂಡಿರುವಂತೆ ಎನ್ಟಿಎಂ ಶಾಲೆ ಮುಚ್ಚದಿರುವ ಹಾಗೂ ಆ ಜಾಗವನ್ನು ರಾಮಕೃಷ್ಣ ಮಠಕ್ಕೆ ನೀಡದಿರುವ ನಿರ್ಧಾರವನ್ನು ಮುಂಬರುವ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಡ ಮಕ್ಕಳು ಓದುತ್ತಿರುವ ಈ ಜಾಗದಲ್ಲಿ ಅಂತಾರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡುತ್ತಿರುವುದು ಯಾರಿಗೋಸ್ಕರ ಎಂಬುದು ತಿಳಿಯದಾಗಿದೆ. ಕಳೆದ 40- 50 ವರ್ಷಗಳ ಹಿಂದೆಯೇ ರಾಮಕೃಷ್ಣ ಆಶ್ರಮದ ವಿದ್ಯಾಶಾಲೆಯಲ್ಲಿ 30- 40 ಸಾವಿರ ವಂತಿಕೆ ತೆಗೆದುಕೊಳ್ಳತ್ತಿದ್ದರು. ಇದೀಗ ಲಕ್ಷ ಮುಟ್ಟಿರಬಹುದು. ಬಡವರು, ದೀನ ದಲಿತರಿಗೆ ಸೀಟು ಕೊಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಮಠಕ್ಕೆ ಸರ್ಕಾರ ಹಣ ಹಾಗೂ ಜಾಗ ನೀಡುವುದನ್ನು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಸಾಹಿತಿ ಪ್ರೊ. ಜಿ.ಎಚ್. ನಾಯಕ ಮಾತನಾಡಿ, ಸ್ವಾಮಿ ವಿವೇಕಾನಂದರ ಬಗ್ಗೆ ಮೈಸೂರಿಗರಿಗೆ ಅಪಾರ ಗೌರವವಿದೆ. ಇಲ್ಲಿನ ನಗರದ ಬಡಾವಣೆಗಳಿಗೆ ವಿವೇಕಾನಂದ, ರಾಮಕೃಷ್ಣ, ಶಾರದಾದೇವಿ ಅವರ ಹೆಸರಿಡಲಾಗಿದೆ ಹಾಗೂ ವಿವೇಕಾನಂದರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇದ್ಯಾವುದಕ್ಕೂ ನಾವು ವಿರೋಧ ಮಾಡಿಲ್ಲ. ಇಂದು ಸಹ ನಾವು ಸ್ಮಾರಕ ನಿರ್ಮಾಣಕ್ಕೆ ವಿರೋಧಿಗಳಲ್ಲ. ಕನ್ನಡ ಶಾಲೆಯ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ ಇತ್ತೀಚೆಗೆ ನಡೆದ ಸಾಹಿತಿಗಳ ಸಭೆಯಲ್ಲಿ ಮಾತನಾಡಿದವರು ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದರು.
ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣದ ಬಗ್ಗೆ ಮಾತನಾಡುವ ರಾಮಕೃಷ್ಣ ಮಠದವರು ದೇಜಗೌ ಅವರಂಥವರನ್ನು ಬೆಂಬಲವಾಗಿ ಪಡೆದಿರುವುದು ವಿವೇಕಾನಂದರಿಗೂ ಗೌರವವಲ್ಲ ಹಾಗೂ ಮಠಕ್ಕೂ ಗೌರವವಲ್ಲ. ದೇಜಗೌ ಟ್ರಸ್ಟ್ನಿಂದ ಪ್ರಕಟವಾಗಿರುವ ನೆನಪಿನ ಬುತ್ತಿ ಎಂಬ ಆತ್ಮಚರಿತ್ರೆ ಓದಿದರೆ ದೇಜಗೌ ಅವರ ವಿಚಾರ ತಿಳಿಯಲಿದೆ. ಮೊದಲು ಆ ಕೆಲಸವನ್ನು ರಾಮಕೃಷ್ಣ ಮಠದವರು ಮಾಡಲಿ ಎಂದು ಆಶಿಸಿದರು.
ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜೇ ಅರಸ್, ಸಮತಾ ವೇದಿಕೆ ಸಂಚಾಲಕಿ ಮೀರಾ ನಾಯಕ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಶಂಭುಲಿಂಗಸ್ವಾಮಿ, ನಿವೃತ್ತ ಪ್ರಾಧ್ಯಾಪಕರಾದ ಎನ್.ಎಸ್. ರಘುನಾಥ್, ಕಿಕ್ಕೇರಿ ನಾರಾಯಣ, ಕೆ. ಬಸವರಾಜು ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಎಂ.ಬಿ. ವಿಶ್ವನಾಥ್, ಪ್ರೊ. ಪಂಡಿತರಾಧ್ಯ, ಕನ್ನಡ ಚಳವಳಿಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಗೊ.ಹ. ಶೆಟ್ಟಿ, ಬೋಗಾದಿ ಸಿದ್ದೇಗೌಡ, ಬಿ.ಎ. ಶಿವಶಂಕರ್, ಸಂಸ್ಕೃತ ಸುಬ್ರಹ್ಮಣ್ಯ, ಕಾರ್ಮಿಕ ಮುಖಂಡ ಲ. ಜಗನಾಥ್, ರಂಗಕರ್ಮಿಗಳಾದ ನಾ. ನಾಗಚಂದ್ರ, ಕೆ. ಮುದ್ದುಕೃಷ್ಣ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಉಪಾಧ್ಯಕ್ಷ ಎಂ. ಬಸವರಾಜು, ಡಾ. ಕೃಷ್ಣಮೂರ್ತಿ ಚಮರಂ, ಎಚ್.ಎಸ್. ಆರ್. ಪ್ರಕಾಶ್, ಈ. ಧನಂಜಯ, ಶ್ರೀನಿವಾಸ ಮಿತ್ರ ಇದ್ದರು.
ಸಮಿತಿ ಕಾರ್ಯದರ್ಶಿ ಸ.ರ. ಸುದರ್ಶನ ಸ್ವಾಗತಿಸಿದರು. ಸಂಚಾಲಕ ಕೊ.ಸು. ನರಸಿಂಹಮೂರ್ತಿ ನಿರೂಪಿಸಿದರು.
ಶೈಕ್ಷಣಿಕವಾಗಿ ಸೇವೆ: ರಾಮಕೃಷ್ಣಾಶ್ರಮ ಸ್ಪಷ್ಟನೆ
ಮೈಸೂರು: ನಗರದ ರಾಮಕೃಷ್ಣ ಆಶ್ರಮ ಕೇವಲ ಆಧ್ಯಾತ್ಮಿಕತೆಗೆ ಸೀಮಿತವಾಗದೆ ಶೈಕ್ಷಣಿಕ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದೆ ಎಂದು ಆಶ್ರಮ ಸ್ಪಷ್ಟಪಡಿಸಿದೆ.
ಕುಂಬಾರಕೊಪ್ಪಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಆಯ್ದ ಮಕ್ಕಳಿಗೆ ವಿವೇಕ ಶಿಕ್ಷಣ ಎಂಬ ಉಚಿತ ತರಗತಿಯನ್ನು ಕಳೆದ 13 ವರ್ಷಗಳಿಂದ ನಡೆಸುತ್ತಿದೆ. ಈ ಪೈಕಿ 9 ರಿಂದ 10ನೇ ತರಗತಿ ಮಕ್ಕಳಿಗೆ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯದಲ್ಲಿ ವಿಶೇಷ ತರಗತಿಯನ್ನು ಪ್ರತಿದಿನ ನಡೆಸುತ್ತಿದೆ. ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಸಾಮಗ್ರಿಯನ್ನೂ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಆಶ್ರಮದಿಂದ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ಪ್ರತಿ ಬುಧವಾರ ಆಶ್ರಮದಲ್ಲಿ ನಡೆಯುವ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣದಲ್ಲಿ ಭಾಗವಹಿಸಿದ ಶೇ. 90ಕ್ಕೂ ಹೆಚ್ಚು ಮಕ್ಕಳು ಹೆಚ್ಚು ಅಂಕದೊಂದಿಗೆ ತೇರ್ಗಡೆ ಹೊಂದುತ್ತಿದ್ದಾರೆ. ಈ ಕಾರ್ಯಕ್ರಮದಡಿ 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದು, ಈ ಶೈಕ್ಷಣಿಕ ವರ್ಷದಲ್ಲಿ 425 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದೆ.
ಆಶ್ರಮದ ಸಂಚಾರಿ ಜ್ಞಾನಪ್ರಸಾರ ಅಭಿಯಾನ ಕಳೆದ 9 ವರ್ಷಗಳಲ್ಲಿ, 28 ಜಿಲ್ಲೆಗಳ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಆಶ್ರಮದ ಪುಸ್ತಕ ಮಾರಾಟ, ಚಲನಚಿತ್ರ ಪ್ರದರ್ಶನ ನಡೆಯುತ್ತಿದೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ವತಿಯಿಂದ ಭಾರತಾದ್ಯಂತ 6 ರಿಂದ 11ನೇ ತರಗತಿ ಮಕ್ಕಳಿಗೆ ನೀತಿ ಶಿಕ್ಷಣ ತರಗತಿ ನಡೆಸಲಾಗುತ್ತಿದೆ. ರಾಜ್ಯದ 300 ಶಾಲೆಗಳಲ್ಲಿ ವಾರ್ಷಿಕ 11 ಸಾವಿರಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಇದರೊಡನೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಿಬಿರಗಳು ಮತ್ತು ಶಾರದಾ ಜ್ಞಾನಸುಧಾ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದೆ.
ಆಶ್ರಮವು ರಾಮಕೃಷ್ಣ ವಿದ್ಯಾಶಾಲೆ ಮತ್ತು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದು, ಈ ಪೈಕಿ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿದೆ. ಶಾಲೆಯ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 50 ಮಂದಿ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಅಲ್ಲದೆ, ಶೈಕ್ಷಣಿಕವಾಗಿ ಬುದ್ಧಿವಂತರಾಗಿದ್ದು, ವರಮಾನ ಕಡಿಮೆ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸಮಾಜದ ಉಪೇಕ್ಷಿತರ ಸೇವೆ ಮಾಡಲು ಮಕ್ಕಳನ್ನು ಹುರಿದುಂಬಿಸಲು ನಾರಾಯಣ ಸೇವೆ ಅಥವಾ ಫ್ರೆಂಡ್ಸ್ ಆಫ್ ಪೂರ್ ಸೇವಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಿಇಡಿ ವಿದ್ಯಾರ್ಥಿಗಳಿಗೆ ಮೌಲ್ಯಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ಮತ್ತು ಬಡ ಮಕ್ಕಳಿಗಾಗಿ ಅನೇಕ ಚಾರಿತ್ರ್ಯ ವರ್ಧನ ಶಿಬಿರ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದರೊಡನೆ ಆಧ್ಯಾತ್ಮಿಕ ಸೇವೆ, ಸಾಹಿತ್ಯಕ ಸೇವೆ, ವಿವೇಕಪ್ರಭ ಪತ್ರಿಕೆ, ಆಶ್ರಮದ ಶ್ರೀಗಳ ಪ್ರವಾಸ ಮತ್ತು ಪ್ರವಚನ, ಮಾನವೀಯ ಸೇವೆ, ಪೌಷ್ಟಿಕ ಆಹಾರ ಮತ್ತು ಮೂಲ ಅವಶ್ಯಕತೆಗಳ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಲೂಟಿಗೆ ಹುನ್ನಾರ: ಪ್ರೊ. ಪಿವಿಎನ್ ಆರೋಪ
ಮೈಸೂರು: ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣದ ಹೆಸರಿನಲ್ಲಿ ಹಣದ ಲೂಟಿಗೆ ಹುನ್ನಾರ ನಡೆದಿದೆ ಎಂದು ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜೇ ಅರಸ್ ಆರೋಪಿಸಿದರು.
ಕನ್ನಡ ಕ್ರಿಯಾ ಸಮಿತಿ ಗುರುವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ 150ನೇ ವರ್ಷದ ಜನ್ಮದಿನದ ಅಂಗವಾಗಿ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ 150 ಕೋಟಿ ಹಾಗೂ ರಾಜ್ಯ ಸರ್ಕಾರ ಸಹ ಅಷ್ಟೆ ಪ್ರಮಾಣದ ಹಣ ನೀಡಲಿದೆ. ಆದ್ದರಿಂದ ಈ ಹಣದ ಲೂಟಿಗೆ ಆಶ್ರಮದ ಕೂಟ ವ್ಯವಹಾರದ ದೃಷ್ಟಿಯಿಂದ ಸ್ಮಾರಕ ನಿರ್ಮಾಣಕ್ಕೆ ಹುನ್ನಾರ ನಡೆಸಿದೆ ಎಂದರು.
ಭಾರತದಲ್ಲಿ ಪ್ರಥಮ ಬಾರಿಗೆ ಹೆಣ್ಣು ಮಕ್ಕಳಿಗಾಗಿ 1881ರಲ್ಲಿ ಎನ್ಟಿಎಂ ಶಾಲೆಯನ್ನು ಅಂದಿನ 10ನೇ ಚಾಮರಾಜ ಒಡೆಯರ್ ಸ್ಥಾಪಿಸಿದರು. ಸುಮಾರು 130 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯು ಮೊದಲಿಗೆ ಅರಮನೆ ವರಹಸ್ವಾಮಿ ದೇವಸ್ಥಾನದ ಬಳಿ ಆರಂಭವಾಯಿತು. ನಂತರ ಜಗನ್ಮೋಹನ ಅರಮನೆ ಹಿಂಭಾಗ ಆನಂತರ ಹೀಗಿನ ಜಾಗಕ್ಕೆ ಸ್ಥಳಾಂತರಗೊಂಡಿತು. 1975 ರಲ್ಲಿ ಈ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿರುವ ಪ್ರೊ. ದೇಜಗೌ ಅವರೇ ಈ ಶಾಲೆಯನ್ನು ಮುಚ್ಚಿಸುವ ಪರ ವಹಿಸಿರುವುದು ದುರಂತದ ಸಂಗತಿ ಎಂದು ತಿಳಿಸಿದರು.
ದಾಖಲೆ ಇಲ್ಲ: ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ಇಲ್ಲಿನ ನಿರಂಜನ ಮಠದಲ್ಲಿ ವಾಸ್ತವ್ಯ ಹೂಡಿದ್ದರು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಅವರು ಯಾವುದೇ ರಾಜರ ಭೇಟಿಗೆ ಹೋದರೂ ಅಲ್ಲಿನ ಅರಮನೆಯಲ್ಲಿ ಉಳಿಯುತ್ತಿದ್ದರು. ಆದರೆ, ಇಲ್ಲಿಗೆ ಬಂದಾಗ ನಿರಂಜನ ಮಠದಲ್ಲಿ ಉಳಿದಿದ್ದರು ಎಂಬುದು ಸರಿಯಲ್ಲ. ಅದಕ್ಕೆ ಸೂಕ್ತ ದಾಖಲೆಯನ್ನು ರಾಮಕೃಷ್ಣಮಠ ಒದಗಿಸಿದರೆ ಆ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ನಾನು ಸಹ ಬೆಂಬಲ ನೀಡಲು ಸಿದ್ಧ ಎಂದು ಸವಾಲು ಹಾಕಿದರು.
ಇಲ್ಲಿನ ಅರಮನೆಯಲ್ಲಿ ಮಹಾರಾಜರಿಗೆ ಮಾರ್ಗದರ್ಶನ ನೀಡಿದ್ದ ವಿವೇಕಾನಂದರು ಸದ್ವಿದ್ಯಾ ಶಾಲೆಯಲ್ಲಿ ಸಾರ್ವಜನಿಕರಿಗೆ ಪ್ರವಚನ ನೀಡಿದ್ದರು. ಇಂತಹ ಸ್ಥಳಗಳಿಗೆ ಮಹತ್ವ ನೀಡದೆ ಕೇವಲ ಮಲಗಿದ್ದು ಹೋದರೆಂಬ ಸ್ಥಳಕ್ಕೆ ಮಹತ್ವ ನೀಡುವುದು ದುರಂತದ ಸಂಗತಿ. ಸದ್ವಿದ್ಯಾ ಶಾಲೆಗೆ ಬೇರೆ ಜಾಗ ಕಲ್ಪಿಸಿ ಆ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮಾರಕ ನಿರ್ಮಾಣದ ಪರವಾಗಿದ್ದಾರೆ ಎಂಬ ವರದಿ ಸತ್ಯವಲ್ಲ. ಈ ಹಿಂದೆ ಅವರು ಸಹ ಎನ್ಟಿಎಂ ಶಾಲೆ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ಕಾನೂನು ತಜ್ಞರ ಸಲಹೆ ಪಡೆದು ಆ ಜಾಗ ಉಳಿಸುತ್ತಾರೆ ಎಂಬುವ ನಂಬಿಕೆಯಿದೆ. ಈ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಅಗತ್ಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.
ರಾಜಶೇಖರ ಕೋಟಿ, ಪತ್ರಿಕೋದ್ಯಮಿ
ವಿವೇಕ ಸ್ಮಾರಕ ಕುರಿತು ಇತ್ತೀಚೆಗೆ ಸಾಹಿತಿಗಳು ನಡೆಸಿದ ಸಭೆಯಲ್ಲಿ ಡಾ. ಮಳಲಿ ವಸಂತಕುಮಾರ್ ಅವರು, ಸಿದ್ದರಾಮಯ್ಯ ಅಲ್ಲ ಆ ಬ್ರಹ್ಮನೇ ಬಂದರೂ ಸ್ಮಾರಕ ನಿರ್ಮಾಣ ತಪ್ಪಿಸಲಾಗದು ಎಂದು ಹೇಳಿದ್ದು ನಿಜ. ಆ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ.
ಸ.ರ. ಸುದರ್ಶನ, ಕಾರ್ಯದರ್ಶಿ, ಕನ್ನಡ ಕ್ರಿಯಾ ಸಮಿತಿ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಹೋರಾಟ ಹೊರತುಪಡಿಸಿದರೆ, ನಾಡು ನುಡಿ ಹಾಗೂ ಗಡಿ ಮತ್ತು ಜಲದ ವಿಚಾರದಲ್ಲಿ ಯಾವುದೇ ಹೋರಾಟ ನಡೆಸದ ದೇಜಗೌ, ನನ್ನಷ್ಟು ಹೋರಾಟ ಯಾರು ಮಾಡಿಲ್ಲ ಎಂದು ಹೇಳುವ ಮೂಲಕ ಕನ್ನಡ ಚಳವಳಿಗಾರರನ್ನು ಹಗುರವಾಗಿ ಪರಿಗಣಿಸಿರುವುದು ಸರಿಯಲ್ಲ.
ಮೂಗೂರು ನಂಜುಂಡಸ್ವಾಮಿ, ಚಳವಳಿಗಾರ
ಕನ್ನಡ ಪರ ಹೋರಾಟಗಾರರ ಬಗ್ಗೆ ಕೆಲವು ಸಾಹಿತಿಗಳು ನೀಡಿರುವ ತಪ್ಪು ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.
ತಾಯೂರು ವಿಠಲಮೂರ್ತಿ, ಚಳವಳಿಗಾರ
ಕನ್ನಡ ಶಾಲೆ ಮುಚ್ಚುವುದಕ್ಕೆ ಆಕ್ಷೇಪ
ಮೈಸೂರು: ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ವಿಚಾರಗಳೆ ಜಂಗಮ. ಯಾವುದೇ ಸ್ಥಾವರ ಅಲ್ಲ ಎಂದು ದಸಂಸ ಹೇಳಿದೆ.
ಇತ್ತೀಚೆಗೆ ನಗರದಲ್ಲಿ ನಡೆದ ಸ್ವಾಮಿ ವಿವೇಕಾನಂದ ಸ್ಮಾರಕ ಅಗತ್ಯ ಮತ್ತು ಸತ್ಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ದೇಜಗೌ, ಸಿಪಿಕೆ, ಚಿದಾನಂದಗೌಡರು ಇಂತಹ ಸಂಕುಚಿತ ಮನಸ್ಥಿತಿಗೆ ಇಳಿದಿರುವುದು ಈ ನಾಡಿನ ದುರಂತ ಹಾಗೂ ಕನ್ನಡ ಶಾಲೆಗಳನ್ನು ಮುಚ್ಚಿ ಎನ್ನುತ್ತಿರುವುದು ಕನ್ನಡಿಗರಿಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಸಮಿತಿಯ ಸಂಚಾಲಕ ಬೆಟ್ಟಯ್ಯ ಕೋಟೆ, ಸಂಘಟನಾ ಸಂಚಾಲಕರಾದ ಶಂಭುಲಿಂಗಸ್ವಾಮಿ ಹಾಗೂ ರತ್ನಪುರಿ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸುವುದನ್ನು ದಸಂಸ ಎಂದೂ ವಿರೋಧಿಸುವುದಿಲ್ಲ. ಆದರೆ, ಮಹಾರಾಣಿ ಎನ್ಟಿಎಂ ಶಾಲೆಯ ಪಕ್ಕದ ನಿರಂಜನ ಮಠದಲ್ಲಿ ವಿವೇಕಾನಂದರು ಉಳಿದು ಹೋಗಿದ್ದರು ಎಂಬುದಕ್ಕೆ ಯಾವುದೆ ಐತಿಹಾಸಿಕ ಪುರಾವೆಗಳಿಲ್ಲ.
ಆಕಸ್ಮಿಕ ಅಲ್ಲೆ ಉಳಿದು ಹೋಗಿದ್ದರೂ ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎನ್ನುವುದು ಈ ವಿದ್ವಾಂಸರ ಮೌಢ್ಯವಲ್ಲವೆ ಎಂದು ಪ್ರಶ್ನಿಸಿದ್ದಾರೆ.
ತಪ್ಪುತ್ತಿಲ್ಲ: ಗಲ್ಲಿ- ಗಲ್ಲಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದರೆ ಏನು ಸುಖ, ಕನ್ನಡ ಶಾಲೆಯನ್ನು ಮುಚ್ಚಿಸುವುದು ತಪ್ಪುತ್ತಿಲ್ಲ ಎಂದು ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ ಪ್ರಶ್ನಿಸಿದ್ದಾರೆ.ನಾಡಿನ ಸಾಹಿತಿಗಳಿಗೆ ಸಮ್ಮೇಳನ ಅಂದರೆ ಮೋಜಿನ ಆಟ ಇದ್ದಂತೆ. ಸರ್ಕಾರದಿಂದ ಅಥವಾ ದಾನಿಗಳಿಂದ ಹಣ ಸಂಗ್ರಹ ಮಾಡಿ ಸಮ್ಮೇಳನ ಮಾಡುತ್ತಾರೆ. ಸಮ್ಮೇಳನದಲ್ಲಿ ನಾಡು, ನುಡಿ, ಜಲದ ಬಗ್ಗೆ ಗಂಟಲು ಕಟ್ಟಿಕೊಳ್ಳುವಷ್ಟು ಮಾತನಾಡುತ್ತಾರೆ. ಆದರೆ, ಅವರು ಮಾತನಾಡಿರುವುದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದಾಗ ಒಡೆಯರವರ ಯೋಜನೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಅವರೇನಾದರು ಬದುಕಿದ್ದರೆ ಶಾಲೆಯನ್ನು ಮುಚ್ಚಲು ಬಿಡುತ್ತಿರಲಿಲ್ಲ. ಮಾತೃಭಾಷೆಯ ಅರ್ಥ ಏನೆಂಬುದನ್ನು ಸಾಹಿತಿಗಳಿಗೆ ಅರಿವು ಮೂಡಿಸುತ್ತಿದ್ದರು. ಸಾಹಿತ್ಯ ಪರಿಷತ್ ಸದಸ್ಯರೆ ಪ್ರಚಾರಕ್ಕಾಗಿ ಸಮ್ಮೇಳನ ಮಾಡುವುದು ತರವಲ್ಲ. ಭಾಷೆಯನ್ನು ಮತ್ತು ವಿದ್ಯೆಯನ್ನು ಕೊಡುವುದು ಕನ್ನಡಿಗರ ಧರ್ಮ ಎಂದು ತಿಳಿಸಿದ್ದಾರೆ.