ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ: 5.77 ಲಕ್ಷ ಸಸಿ ಲಭ್ಯ
ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ ಮೈಸೂರು ಜು. 4
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಅರಣ್ಯ ಇಲಾಖೆ ಮೈಸೂರು ವಿಭಾಗದಲ್ಲಿ 2012-13ನೇ ಸಾಲಿನಲ್ಲಿ 35 ರೈತರಿಗೆ 325,370 ಪ್ರೋತ್ಸಾಹ ಧನ ನೀಡಲಾಗಿದೆ.
ಮೈಸೂರು ವಲಯದ 15 ರೈತರಿಗೆ ನೀಡಲಾದ ಸಸಿಗಳ ಪೈಕಿ 772 ಬದುಕುಳಿದಿದ್ದು, 7,720. ಪ್ರೋತ್ಸಾಹ ಧನ ಮಂಜೂರು ಮಾಡಲಾಗಿದೆ. ಅದೇ ರೀತಿ ಸರಗೂರು ವಲಯದ ಮೂವರು ರೈತರಿಗೆ ಬದುಕುಳಿದ 414 ಸಸಿಗಳಿಗೆ 4,140 ಹಾಗೂ ನಂಜನಗೂಡು ವಲಯದಲ್ಲಿ 17 ರೈತರಿಗೆ ಸಸಿಗಳನ್ನು ವಿತರಿಸಲಾಗಿದ್ದು, 1349 ಸಸಿಗಳು ಬದುಕುಳಿದಿವೆ. ಇದಕ್ಕೆ 13,490 ಪ್ರೋತ್ಸಾಹಧನ ನೀಡಲಾಗಿದೆ.
ಮೈಸೂರು ವಿಭಾಗದಲ್ಲಿ ಒಟ್ಟಾರೆ 35 ರೈತರಿಗೆ ನೀಡಲಾಗಿದ್ದ ಸಸಿಗಳ ಪೈಕಿ 2,535 ಬದುಕುಳಿದಿದ್ದು, 25,370 ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
6.65 ಲಕ್ಷ ಸಸಿ: ಮೈಸೂರು ಅರಣ್ಯ ವಿಭಾಗದಲ್ಲಿ 2013-14ನೇ ಸಾಲಿನಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 6,65,000 ಸಸಿಗಳನ್ನು ಬೆಳೆಸಲಾಗಿದೆ. ಇದರಲ್ಲಿ ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ 115 ರೈತರಿಗೆ 63,087 ಸಸಿಗಳನ್ನು ವಿತರಿಸಲಾಗಿದೆ. ಇನ್ನೂ 5,76,913 ಸಸಿಗಳು ಲಭ್ಯವಿವೆ.
ಮೈಸೂರು ವಲಯದಲ್ಲಿ 11, ಟಿ. ನರಸೀಪುರ ವಲಯದಲ್ಲಿ 35, ನಂಜನಗೂಡಿನಲ್ಲಿ 48, ಸರಗೂರಿನಲ್ಲಿ 3 ಹಾಗೂ ಎಚ್.ಡಿ. ಕೋಟೆಯಲ್ಲಿ 18 ರೈತರು ಸೇರಿ ಒಟ್ಟು 115 ರೈತರು ನೋಂದಣಿ ಮಾಡಿಸಿಕೊಂಡು, ಸಸಿಗಳನ್ನು ಪಡೆದಿದ್ದಾರೆ. ಬಂಡಿಪಾಳ್ಯ, ನಾಗವಾಲ, ಶ್ರೀಗಂಧ ಸಸ್ಯಕ್ಷೇತ್ರ, ಇಲವಾಲ, ಕುಕ್ಕರಹಳ್ಳಿ, ಟಿ. ನರಸೀಪುರ, ಬಸವೇಶ್ವರ ನಂಜನಗೂಡು, ಬೀಚನಹಳ್ಳಿ ಸಸ್ಯಕ್ಷೇತ್ರಗಳಲ್ಲಿ ಶ್ರೀಗಂಧ, ಹೆಬ್ಬೇವು, ತೇಗ, ಸಿಲ್ವರ್, ನೇರಳೆ, ಬೇವು, ನೆಲ್ಲಿ, ಹೊಂಗೆ, ಕಹಿ ಬೇವು, ಬೇಲ, ಕರಿಬೇವು, ಸರ್ವೆ ಮೊದಲಾದ ಸಸಿಗಳನ್ನು ಬೆಳೆಸಲಾಗಿದೆ.
ಯೋಜನೆಯ ಹಿನ್ನೆಲೆ: ರೈತರು ತಮ್ಮ ಕೃಷಿ ಜಮೀನಿನಲ್ಲಿ ಬೆಳೆಗಳೊಂದಿಗೆ ಕಾಡು ಜಾತಿಯ ಗಿಡ ಮರಗಳನ್ನು ಬೆಳೆಸುವ ಪದ್ಧತಿಗೆ ಕೃಷಿ ಅರಣ್ಯ ಎಂದು ಕರೆಯಲಾಗುತ್ತದೆ. ಬೆಳೆಯೊಂದಿಗೆ ರೈತರು ಗಿಡ ಮರಗಳನ್ನು ಬೆಳೆಸಲು ರಿಯಾಯಿತಿ ದರದಲ್ಲಿ ಅಂದರೆ 1, 3, 5 ಲೆಕ್ಕಾಚಾರದಲ್ಲಿ ಸಸಿಗಳನ್ನು ನೀಡಲಾಗುತ್ತದೆ. ಈ ಸಸಿಗಳನ್ನು ಜಮೀನಿನಲ್ಲಿ ನೆಟ್ಟು ಪೋಷಿಸಿ, ಬದುಕುಳಿದ ಸಸಿಗಳಿಗೆ ಮೊದಲ ವರ್ಷಕ್ಕೆ 1 ಸಸಿಗೆ 10, ಎರಡನೇ ವರ್ಷ 15, ಮೂರನೇ ವರ್ಷಕ್ಕೆ 20 ಹಾಗೂ ಮೂರನೇ ವರ್ಷದ ಅಂತ್ಯದಲ್ಲಿ ಪ್ರತಿ ಸಸಿಗೆ 45 ಪ್ರೋತ್ಸಾಹ ಧನ ನೀಡಲಾಗುತ್ತದೆ. ಒಬ್ಬ ಫಲಾನುಭವಿ ಯಾವುದೇ ಮಿತಿ ಇಲ್ಲದೆ ಸಸಿಗಳನ್ನು ನೆಡಬಹುದು. ಆದರೆ, 1 ಹೆಕ್ಟೇರ್ನಲ್ಲಿ ನೆಟ್ಟಿರುವ 400 ಸಸಿಗಳಿಗೆ ಮಾತ್ರ ಪ್ರೋತ್ಸಾಹಧನ ಸಿಗುತ್ತದೆ.
ಈ ಸಸಿಗಳಿಗೆ ಪ್ರೋತ್ಸಾಹ ಇಲ್ಲ: ನೀಲಗಿರಿ, ಅಕೇಶಿಯಾ, ಕಾಫೀ ತೋಟದಲ್ಲಿ ಬೆಳೆಸುವ ಸಿಲ್ವರ್ ಓಕ್, ಕ್ಯಾಜುರೀನಾ (ಗಾಳಿಮರ), ಶೀಮೆ ತಂಗಡಿ, ಗ್ಲಿರಿಸಿಡಿಯಾ, ಸಸ್ ಬೇನಿಯಾ, ಎರಿಥ್ರೀನಾ, ರಬ್ಬರ್, ಸೂಬಾಬುಲ್, ತೆಂಗು, ಅಡಿಕೆ, ಕಿತ್ತಳೆ ಜಾತಿಯ ಸಿಟ್ರಿಸ್ ಮರಗಳು ಹಾಗೂ ಕಸಿ ಮಾಡಿದ ಮಾವು ಸಸಿಗಳಿಗೆ ಈ ಯೋಜನೆಯಡಿಯಲ್ಲಿ ಪ್ರೋತ್ಸಾಹ ಧನ ನೀಡುವುದಿಲ್ಲ.
ಯೋಜನೆಯ ಲಾಭಗಳು: ವೃಕ್ಷ ಮೂಲದ ಅವಶ್ಯಕತೆಗಳನ್ನು ತಮ್ಮ ಜಮೀನಿನಿಂದಲೇ ಪಡೆಯುವುದರಿಂದ ಅರಣ್ಯದ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಮರ ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗುವ ಸಂತೃಪ್ತಿ ಸಿಗುತ್ತದೆ. ಜಮೀನು ಸುತ್ತಲೂ ಮರಗಳನ್ನು ಬೆಳೆಸುವುದರಿಂದ ರಭಸವಾಗಿ ಬೀಸುವ ಗಾಳಿಯನ್ನು ತಡೆದು ಜಮೀನಿನಲ್ಲಿ ತೇವಾಂಶವನ್ನು ದೀರ್ಘಕಾಲ ಕಾಪಾಡುವುದರಿಂದ ಇಳುವರಿ ಹೆಚ್ಚುತ್ತದೆ. ಅಂತರ್ಜಲ ಹೆಚ್ಚುತ್ತದೆ, ಮಣ್ಣಿನ ಸವಕಳಿ ತಡೆಯುತ್ತದೆ. ಗಿಡಮರಗಳು ಪ್ರಾಣಿ ಪಕ್ಷಿಗಳನ್ನು ಆಕರ್ಷಿಸಿ ಪರಾಗ ಸ್ಪರ್ಶಕ್ರಿಯೆಯಿಂದ ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ.
ಉರವಲ ಜಾತಿ, ಮೇವು, ಹಣ್ಣು ಹಂಪಲು ಗಿಡ, ಮರ ಮುಟ್ಟ ಮರಗಳನ್ನು ಸಂಯೋಜಿತ ರೀತಿಯಲ್ಲಿ ಬೆಳೆಸಿದಾಗ ದೈನಂದಿನ ಬಳಕೆಗೂ ಅನುಕೂಲ. ಕೃಷಿ ಉತ್ಪನ್ನದೊಂದಿಗೆ ಕಿರು ಅರಣ್ಯ ಉತ್ಪನ್ನವೂ ಲಭ್ಯವಾಗುತ್ತದೆ. ಆಪತ್ಕಾಲದಲ್ಲಿ ಮರಗಳು ವಿಮೆ ರೂಪದಲ್ಲಿ ಸಹಾಯವಾಗುತ್ತದೆ.