ಹೃದ್ರೋಗಿಗೆ ನೈಸರ್ಗಿಕವಾಗಿ ಕರಗುವ ಸ್ಟೆಂಟ್ ರೋಗಿಗೆ ಯಶಸ್ವಿ ಅಳವಡಿಕೆ
ಕ.ಪ್ರ.ವಾರ್ತೆ ಮೈಸೂರು ಜು. 4
ಇದೇ ಮೊದಲ ಬಾರಿಗೆ ಮೈಸೂರಿನ ಫೋರ್ಟಿಸ್ ಕಾವೇರಿ ಹೃದಯ ಆಸ್ಪತ್ರೆಯಲ್ಲಿ ಹೃದ್ರೋಗಿಯೊಬ್ಬರಿಗೆ ನೈಸರ್ಗಿಕವಾಗಿ ಕರಗುವ (ಬಯೋಡಿಗ್ರೇಡೆಬಲ್) ಸ್ಟೆಂಟ್ ಉಪಕರಣವನ್ನು ಯಶಸ್ವಿಯಾಗಿದೆ ಅಳವಡಿಸಿದೆ.
ಮೈಸೂರಿನ ಸುಭಾಷ್‌ನಗರ ನಿವಾಸಿ ಹಾಗೂ ಪ್ಲಾಸ್ಟಿಕ್ ವ್ಯಾಪಾರಿ ನಾಸೀರ್ (48) ತೀವ್ರ ಎದೆನೋವಿನಿಂದ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಸ್ಟೆಂಟ್ ಅಳವಡಿಕೆ ಚಿಕಿತ್ಸೆಯನ್ನು ನಗರದಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ಪ್ರಮುಖ ಹೃದಯ ತಜ್ಞ ಡಾ.ಸಿ.ಬಿ. ಕೇಶವಮೂರ್ತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಯೋಡಿಗ್ರೇಡೆಬಲ್ ಸ್ಟೆಂಟ್ ಅಳವಡಿಕೆ ಹೊಸ ತಂತ್ರಜ್ಞಾನವಾಗಿದ್ದು, ಈ ಉಪಕರಣಗಳು ಸಂಪೂರ್ಣ ನೈಸರ್ಗಿಕವಾಗಿ ಕರಗುವ ಗುಣ ಹೊಂದಿದೆ. ಒಮ್ಮೆ ಹೃದಯ ನಾಳಗಳಲ್ಲಿ ಅಳವಡಿಸಿದರೆ ಸಾಕು. ಇವು ತಮ್ಮ ಔಷಧಿಯ ಗುಣ ಮತ್ತು ತಾಂತ್ರಿಕ ಕಾರ್ಯಗಳನ್ನು ನಿಗದಿತ ಅವಧಿಯವರೆಗೆ ಪ್ರದರ್ಶಿಸುತ್ತವೆ. ಅಳವಡಿಸಿದ 6 ತಿಂಗಳ ನಂತರ ಅವು ಕರಗಲು ಆರಂಭವಾಗಿ, 2 ವರ್ಷಗಳ ಅವಧಿಯಲ್ಲಿ ಹೃದಯದಿಂದ ಸಂಪೂರ್ಣವಾಗಿ ಕರಗಿ ಹೋಗುತ್ತವೆ. ಇದರಿಂದ ಅಪಧಮನಿಯ ಬಾಧಿತ ಭಾಗವು ಪುನರುಜ್ಜೀವನಗೊಳ್ಳುತ್ತದೆ ಎಂದು ಹೇಳಿದರು.
ಸ್ಟೆಂಟ್ ಉಪಕರಣದಲ್ಲಿ ಲೋಹ ಇರುವುದಿಲ್ಲ. ಕೆಲವು ಅವಧಿಯ ನಂತರ ಸಂಪೂರ್ಣವಾಗಿ ಕರಗುವ ಗುಣವುಳ್ಳ ಪೊಲಿ-ಎಲ್-ಲಾಕ್ಟಿಕ್ ಆ್ಯಸಿಡ್ (ಪಿಎಲ್‌ಎಲ್‌ಎ) ಎನ್ನುವ ವಿಶೇಷ ಪಾಲಿಮರ್‌ನಿಂದ ಸ್ಟೆಂಟ್ ತಯಾರಿಸಲಾಗುತ್ತದೆ. ಇದರ ಅಳವಡಿಕೆಯಿಂದ ರಕ್ತನಾಳಗಳು ಸಂಪೂರ್ಣವಾಗಿ ತಡೆಯಿಂದ ಮುಕ್ತವಾಗಿ ಗುಣಮುಖವಾಗುತ್ತವೆ ಎಂದರು.
ಈ ತಂತ್ರಜ್ಞಾನ ಬಳಸಿ ಕಳೆದ 6 ತಿಂಗಳಲ್ಲಿ ಇಡೀ ದೇಶದಲ್ಲಿ 3 ಸಾವಿರ ಮಂದಿ ಸ್ಟೆಂಟ್ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚಿನ ಮಂದಿಗೆ ಅಳವಡಿಸಲಾಗಿದೆ. ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಈ ಉಪಕರಣವನ್ನು ನಾಸೀರ್ ಅವರಿಗೆ ಅಳವಡಿಸಲಾಗಿದೆ. ಈ ಉಪಕರಣಕ್ಕೆ 2.50 ಲಕ್ಷ ವೆಚ್ಚ ತಗಲುತ್ತದೆ ಎಂದು ತಿಳಿಸಿದರು.
ಹೃದಯ ತಜ್ಞರಾದ ಡಾ.ಜೆ. ರಾಜಗೋಪಾಲ್, ಡಾ. ನಾಗೇಂದ್ರ ಪ್ರಕಾಶ್, ಚಿಕಿತ್ಸೆಗೊಳಗಾದ ನಾಸೀರ್ ಇದ್ದರು.