ಗುರಿ ಸಾಧನೆಗೆ ಕಠಿಣ ಪರಿಶ್ರಮ ಅವಶ್ಯ
ಕ.ಪ್ರ.ವಾರ್ತೆ ಮೈಸೂರು ಜು. 22
ಯಾವುದೇ ಗುರಿ ಸಾಧನೆಗೆ ಕಠಿಣ ಪರಿಶ್ರಮ ಅವಶ್ಯಕ ಎಂದು ಚೆನ್ನೈನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ಪ್ರಬಂಧಕ ಶ್ರೀಕಂಠಶರ್ಮ ಹೇಳಿದರು.
ಮೈಸೂರು ವಿವಿಯ ಪ್ರಸಾರಾಂಗ ಹಾಗೂ ಸುಮಿತ್ರ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಾನೋದಿದ್ದು ಕನ್ನಡದಲ್ಲೇ ಮತ್ತು ಇಂಗ್ಲಿಷ್ ಕಲಿಯಬಹುದು ಭಯಬೇಡ ಎಂಬ ವಿಷಯ ಕುರಿತ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿ ವಿಶೇಷತೆ ಹೊಂದಿರುತ್ತಾನೆ. ಆದರೆ ತನ್ನಲ್ಲಿರುವ ಸಾಮರ್ಥ್ಯ ಹಾಗೂ ಕೊರತೆಯ ಬಗ್ಗೆ ಅರಿಯಬೇಕು. ಆತ್ಮವಿಶ್ವಾಸ ಹಾಗೂ ಛಲದೊಂದಿಗೆ ಮುನ್ನಡೆಯಬೇಕು. ಜೀವನ ಎಂಬುದು ಒಂದು ಪಂದ್ಯ ಇದ್ದಂತೆ. ಅದರಲ್ಲಿ ಯಶಸ್ಸು ಪಡೆಯಬೇಕಾದರೆ ಹಾಗೂ ನಿಶ್ಚಿತ ಗುರಿ ಸಾಧಿಸಬೇಕಾದರೆ ಕಠಿಣ ಪರಿಶ್ರಮ ಅವಶ್ಯಕ ಎಂದರು.
ಕೀಳರಿಮೆ ತಪ್ಪಿಲ್ಲ: ಆಗಿನ ಕಾಲದಂತೆ ಶಿಕ್ಷಣ ಪಡೆಯಲು ಇಂದಿನ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿಲ್ಲ. ಎಲ್ಲಾ ರೀತಿಯ ಸವಲತ್ತುಗಳಿವೆ. ಇನ್ನು ನಮ್ಮಂತೆ ಗುರುಗಳಿಗೆ ಹಾಗೂ ತಂದೆ, ತಾಯಿಗೆ ಭಯಪಟ್ಟು ಓದುವ ಹಾಗೂ ನಡೆದುಕೊಳ್ಳುವ ಪರಿಪಾಠವೂ ಇಂದಿನ ಮಕ್ಕಳಲ್ಲಿ ಕಾಣುತ್ತಿಲ್ಲ. ಆದರೆ ಆ ಕಾಲದಂತೆ ಇಂದಿಗೂ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಮಾತ್ರ ತಪ್ಪಿಲ್ಲ ಎಂದು ವಿಷಾದಿಸಿದರು.
ಇಂಗ್ಲಿಷ್ ಎಂಬ ಪೆಡಂಭೂತ ಆಗಲೂ ಇತ್ತು. ಈಗಲೂ ಕಾಡುತ್ತಿದೆ. ಆದರೆ ಇಂಗ್ಲಿಷ್ ಕಲಿಯುವುದು ಅಷ್ಟು ಕಷ್ಟವಲ್ಲ. ನಾನು ಒಂಬತ್ತನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು, ನಂತರ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಇಂದು ಎಸ್‌ಬಿಎಂ ಮುಖ್ಯ ಪ್ರಬಂಧಕನಾಗಿದ್ದೇನೆ. ಇನ್ನೂ 13 ವರ್ಷಗಳ ಸೇವೆಯಿದ್ದು, ಅಷ್ಟರಲ್ಲಿ ಪ್ರಧಾನ ಪ್ರಬಂಧಕನಾಗುವ ಅರ್ಹತೆಯಿದೆ ಎಂದರು.
ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಇಂಗ್ಲಿಷ್ ಭಾಷೆಯ ಮೋಹದಲ್ಲಿ ಕನ್ನಡ ಮರೆಯುವುದು ಸರಿಯಲ್ಲ. ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ದಿಸೆಯಲ್ಲಿ ಮಾತೃಭಾಷೆ ಕನ್ನಡಕ್ಕೆ ಮಹತ್ವ ನೀಡಬೇಕು ಎಂದು ಹೇಳಿದರು.
ಇಂಗ್ಲಿಷ್ ಕಲಿಯಬಹುದು, ಭಯಬೇಡ ಎಂಬ ವಿಷಯ ಕುರಿತು ಮಹಾರಾಜ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ರಾಮನರಸಿಂಹ ಹಾಗೂ ಟಿವಿಎಸ್ ಕಂಪನಿಯ ನಿವೃತ್ತ ವ್ಯವಸ್ಥಾಪಕ ಅನುಜನ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ವಾಸುದೇವ ಇದ್ದರು. ಪ್ರಸಾರಾಂಗದ ಉಪನಿರ್ದೇಶಕ ಸ.ರ. ಸುದರ್ಶನ ನಿರೂಪಿಸಿದರು.