ಮಳೆಗೆ ಕುಸಿದ ಮನೆ: ವೃದ್ಧ ದಂಪತಿ ಬೀದಿಪಾಲು
ಕ.ಪ್ರ.ವಾರ್ತೆ ಭೇರ್ಯ ಜು. 22
ಕೆ.ಆರ್. ನಗರ ತಾಲೂಕಿನಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ರೈತರಿಗೆ ಹರ್ಷ ತಂದಿದ್ದರೆ, ಇನ್ನೊಂದೆಡೆ ಅವಘಡವನ್ನುಂಟು ಮಾಡುತ್ತಿದ್ದು, ಮಿರ್ಲೆ ಗ್ರಾಮದ ವೃದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮಗೆ ಆಶ್ರಯವಾಗಿದ್ದ ಮನೆ ವರುಣನ ಅಬ್ಬರಕ್ಕೆ ಕುಸಿದಿದ್ದರಿಂದ ವಿಜಿಯಮ್ಮ ಹಾಗೂ ಜಯಂತಣ್ಣ ಎಂಬ ವಯೋವೃದ್ಧ ದಂಪತಿಗೆ ದಿಕ್ಕು ತೋಚದಂತಾಗಿದೆ. ಕಳೆದ 10 ವರ್ಷದಿಂದ ಇವರು ವಾಸವಿದ್ದ ತೀರಾ ಶಿಥಿಲಗೊಂಡ ಸ್ಥಿತಿಯಲ್ಲಿದ್ದ ಪುಟ್ಟ ಆಶ್ರಯ ಮನೆಯ ಒಂದು ಪಾರ್ಶ್ವ ಶನಿವಾರ ರಾತ್ರಿ ಧಾರಾಕಾರ ಸುರಿದ ಮಳೆಗೆ ಕುಸಿದಿದೆ. ತಕ್ಷಣ ಹೊರಬಂದಿದ್ದರಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿಯಿಡಿ ನಿದ್ರೆಯಿಲ್ಲ: ಇಡಿ ಮನೆ ಕುಸಿಯುವ ಭೀತಿಯಿಂದ ಒಳ ಹೋಗದ ದಂಪತಿ ರಾತ್ರಿಯಿಡಿ ಊಟ, ನಿದ್ರೆ ಇಲ್ಲದೆ ಕಾಲ ಕಳೆದಿದ್ದಾರೆ. ದೇಹದ ಶಕ್ತಿಗುಂದಿದ್ದರೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ, ಮಕ್ಕಳಿಲ್ಲದ ಈ ದಂಪತಿ, ಕಳೆದ 10 ವರ್ಷದ ಹಿಂದೆ ಸರ್ಕಾರ ಕಟ್ಟಿಸಿದ್ದ ಆಶ್ರಯ ಮನೆಯಲ್ಲಿ ವಾಸವಿದ್ದರು. ತಮ್ಮ ಕಣ್ಣಮುಂದೆಯೆ ನೆಲಕ್ಕುರುಳಿದ ಮನೆ ಕಂಡು ಸಂಕಟಗೊಂಡ ವಿಜಿಯಮ್ಮ, ಸರ್ಕಾರ ಗಟ್ಟಿಯಾದ ಮನೆ ಕೊಟ್ಟರೆ ನೆಮ್ಮದಿಯಿಂದ ಜೀವನ ಸಾಗಿಸುತ್ತೇವೆ. ಇಲ್ಲವಾದರೆ ಇದೆ ಮನೆಯಲ್ಲೆ ಸಾಯುತ್ತೇನೆ ಎಂದು ಸುದ್ದಿಗಾರರೊಂದಿಗೆ ಕಣ್ಣೀರು ಹಾಕಿದರು.
ಈ ಯಾವ ಅಧಿಕಾರಿಯೂ ಭೇಟಿ ನೀಡಿಲ್ಲ: ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದು ಎರಡು ದಿನ ಕಳೆದರೂ ಇದೂವರೆಗೂ ಯಾವ ಅಧಿಕಾರಿಯೂ ತಿರುಗಿ ನೋಡಿಲ್ಲ. ಇದ್ದ ಮನೆ ಕಳೆದಕೊಂಡ ವೃದ್ದ ದಂಪತಿಗೆ ಯಾವ ಜನಪ್ರತಿನಿಧಿಗಳು ಸಾಂತ್ವನ ಕೂಡ ಹೇಳಿಲ್ಲ. ಮನೆ ಇಲ್ಲದೆ ಈ ನೊಂದ ವೃದ್ದ ದಂಪತಿ ಕಂಗಲಾಗಿದ್ದು, ತಾಲೂಕಿನ ತಹಸೀಲ್ದಾರ್ ಅವರ ಭೇಟಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.