7 ಕೆಜಿ ಗಂಧ ವಶ: ಇಬ್ಬರ ಬಂಧನ
ಮೈಸೂರು: ನಗರದ ದೇವರಾಜ ಸಂಚಾರ ಠಾಣೆ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ 7 ಕೆಜಿ ಶ್ರೀಗಂಧ ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಉದಯಗಿರಿ ನಿವಾಸಿ ಸುಹೇಲ್ (25) ಮತ್ತು ಶಾಂತಿನಗರ ನಿವಾಸಿ ಜಾವೀದ್ (24) ಬಂಧಿತ ಆರೋಪಿಗಳು. ಹೆಲ್ಮೆಟ್ ಧರಿಸದೇ ಬೈಕಿನಲ್ಲಿ ಈ ಇಬ್ಬರು ಮೈಸೂರು ರೇಸ್ ಕ್ಲಬ್ ವೃತ್ತದ ಬಳಿ ಬರುತ್ತಿದ್ದಾಗ ಸಂಚಾರ ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಈ ಇಬ್ಬರ ಮಧ್ಯೆ ಎರಡು ಬ್ಯಾಗ್ಗಳಿದ್ದು, ಅದರಲ್ಲಿ 7 ಕೆ.ಜಿ ಶ್ರೀಗಂಧದ ಮರದ ಚೆಕ್ಕೆಗಳು ಹಾಗೂ ಒಂದು ಮಚ್ಚು ಪತ್ತೆಯಾಗಿದೆ. ನಂತರ ಆರೋಪಿಗಳನ್ನು ನಜರ್ಬಾದ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಧದ ಚೆಕ್ಕೆಗಳನ್ನು ಕಳವು ಮಾಡಿ ಅಕ್ರಮವಾಗಿ ಬೈಕಿನಲ್ಲಿ ಸಾಗಿಸುತ್ತಿದ್ದು, ವಿಚಾರಣೆ ವೇಳೆ ದೃಢಪಟ್ಟಿದ್ದು, ಈ ಸಂಬಂಧ ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ದೇವರಾಜ ಸಂಚಾರ ಠಾಣೆ ಎಎಸ್ಐ ಎಂ.ಎನ್. ಸತೀಶಕುಮಾರ್ ಅರಸು ಮತ್ತು ಸಿಬ್ಬಂದಿ ಶಿವರಾಜು ಮತ್ತು ಚಂದ್ರಶೇಖರ್ ಈ ಪತ್ತೆ ಮಾಡಿದ್ದಾರೆ.
ಡಿಕ್ಕಿ: ಸೈಕಲ್ ಸವಾರ ಸಾವು
ಮೈಸೂರು: ಬೈಕ್ ಡಿಕ್ಕಿಯಾಗಿ ಸೈಕಲ್ ಸವಾರ ಮೃತಪಟ್ಟಿರುವ ಘಟನೆ ಮಾನಂದವಾಡಿ ರಸ್ತೆ ರೇಲ್ವೆ ಕಾರ್ಯಾಗಾರ ಬಳಿಯ ಶ್ರೀರಾಮಮಂದಿರ ಎದುರು ಬುಧವಾರ ಬೆಳಗ್ಗೆ ನಡೆದಿದೆ. ಮಹದೇವಪುರ ನಿವಾಸಿ ಸಣ್ಣೇಗೌಡ ಎಂಬವರ ಪುತ್ರ ಸಿದ್ದರಾಮು (55) ಮೃತಪಟ್ಟವರು. ಇವರು ಸೈಕಲ್ನಲ್ಲಿ ಹೋಗುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಂದೀಪ್, ಹಿಂಬದಿ ಸವಾರ ವಿಕಾಸ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕೆ.ಆರ್. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಹಿಳೆ ಸರ ಕಸಿದ ವ್ಯಕ್ತಿಗೆ ಧರ್ಮದೇಟು
ಮೈಸೂರು: ಮನೆಗೆ ನುಗ್ಗಿ ಮಹಿಳೆಯ ಸರ ಕಸಿದು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಚಾಟಿಪುರ ನಿವಾಸಿ ಮಹೇಶ್ (22) ಬಂಧಿತ ಆರೋಪಿ. ಈತನು ಕೆ.ಆರ್. ಆಸ್ಪತ್ರೆ ಆವರಣದಲ್ಲಿರುವ ಕ್ಯಾಂಟಿನ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಈತ ನಜರ್ಬಾದ್ ವಸಂತ್ಮಹಲ್ ರಸ್ತೆಯಲ್ಲಿರುನ ಮನೆಗೆ ನುಗ್ಗಿ ಇಂದ್ರಾವತಿ ರಾಜೇಂದ್ರನ್ ಎಂಬವರ 30 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ. ಈ ವೇಳೆ ಇಂದ್ರಾವತಿ ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಸರ ತುಂಡಾಗಿದೆ. ಕೈಗೆ ಸಿಕ್ಕಷ್ಟು ಸರದೊಂದಿಗೆ ಮಹೇಶ್ ಪರಾರಿಯಾಗುತ್ತಿದ್ದಾಗ ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿದ್ದಾರೆ. ಬಳಿಕ ನಜರ್ಬಾದ್ ಠಾಣೆ ಪೊಲೀಸರಿಗೆ ಆರೋಪಿ ಮಹೇಶನನ್ನು ಸಾರ್ವಜನಿಕರು ಒಪ್ಪಿಸಿದ್ದಾರೆ.
ಭಾವಚಿತ್ರ ವಿವಾದಕ್ಕೆ ಖಂಡನೆ
ಮೈಸೂರು: ಮುಖ್ಯಮಂತ್ರಿಗಳ ಕೊಠಡಿಯಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಭಾವಚಿತ್ರ ತೆಗೆದು ಹಾಕಿಸಿದ್ದ ಸಿಎಂ ನಿರ್ಧಾರವನ್ನು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಎನ್.ಆರ್. ರವಿಚಂದ್ರಗೌಡ ಖಂಡಿಸಿದ್ದಾರೆ.ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಕೊಠಡಿಯಲ್ಲಿ ದೇವೇಗೌಡರ ಭಾವಚಿತ್ರ ಹಾಕಿದ್ದರು. ನಂತರ ಬಂದ ಎಸ್.ಎಂ. ಕೃಷ್ಣ, ಎನ್. ಧರಂಸಿಂಗ್, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಭಾವಚಿತ್ರ ಹಾಕಿಕೊಂಡು ಮುಂದುವರಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಸಿದ್ದರಾಮಯ್ಯ ಅವರು ಭಾವಚಿತ್ರ ತೆಗೆದು ಹಾಕುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.