ಅಪಘಾತ: ವಿದ್ಯಾರ್ಥಿಗಳಿಬ್ಬರ ಸಾವು
ಹುಣಸೂರು: ಸಾರಿಗೆ ಸಂಸ್ಥೆಯ ಬಸ್ ಟ್ರ್ಯಾಕ್ಟರ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯಾರ್ಥಿಗಳಿಬ್ಬರು ಮೃತಪಟ್ಟು, 9 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಣಸೂರು- ಎಚ್.ಡಿ. ಕೋಟೆ ಮುಖ್ಯರಸ್ತೆಯ ಚಿಕ್ಕಹುಣಸೂರು ಬಳಿ ಬುಧವಾರ ಬೆಳಿಗ್ಗೆ ಜರುಗಿದೆ.
ತಾಲೂಕಿನ ಹೊಸೂರು ಗೇಟ್ ನಿವಾಸಿ ವಸಂತಕುಮಾರ್ ಪುತ್ರ ನವೀನಕುಮಾರ್ (18) ಹಾಗೂ ಕೊಟ್ಟಿಗೆ ಕಾವಲ್ ಗ್ರಾಮದ ನಿವಾಸಿ ಸೈಯದ್ಸಾದತ್ ಪುತ್ರ ಸೈಯದ್ ಆರೀಫ್ (18) ಮೃತಪಟ್ಟವರು.
ಇವರು ಇಲ್ಲಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ, ಪಕ್ಷಿರಾಜಪುರದ ಚಿನ್ನರಾಸ, ಕಿರಿಜಾಜಿಯ ಹರೀಶ್ ಹಾಗೂ ಸ್ವಾತಿ, ಲಕ್ಷ್ಮಿ, ಅವಿನಾಶ್, ಶೇಖರ್, ಟ್ರ್ಯಾಕ್ಟರ್ ಚಾಲಕ ರಘು, ಬಸ್ ನಿರ್ವಾಹಕ ರವಿ ಅವರಿಗೆ ತೀವ್ರ ಪೆಟ್ಟು ಬಿದ್ದು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆರಿದ್ದಾರೆ. ಘಟನೆ ವಿವರ: ಎಚ್.ಡಿ. ಕೋಟೆಯಿಂದ ಹುಣಸೂರು ಕಡೆಗೆ ವೇಗವಾಗಿ ಬಂದ ಸಾರಿಗೆ ಸಂಸ್ಥೆ ಬಸ್ನಲ್ಲಿ 134 ಪ್ರಯಾಣಿಕರಿದ್ದು, ಇದರಲ್ಲಿ 104 ವಿದ್ಯಾರ್ಥಿಗಳೇ ತುಂಬಿ ಬಸ್ನ ಬಾಗಿಲ ಬಳಿ ನಿಂತು ಪ್ರಯಣಿಸುತ್ತಿದ್ದರು. ವಾಹನವೊಂದನ್ನು ಹಿಂದಿಕ್ಕುವ ರಭಸದಲ್ಲಿ ಆದೇ ಮಾರ್ಗವಾಗಿ ಹುಣಸೂರಿಗೆ ಬರುತ್ತಿದ್ದ ಮಣ್ಣು ತುಂಬಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮೋರಿಗೆ ಗುದ್ದಿ ರಭಸಕ್ಕೆ ಬಸ್ನ ಮುಂಭಾಗ ಜಖಂಗೊಂಡು, ಬಾಗಿಲಿನಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಕೆಳಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟರೆ, 9 ಮಂದಿಗೆ ತೀವ್ರ ಪೆಟ್ಟು ಬಿದ್ದು, ಹುಣಸೂರು ಮತ್ತು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.