ಆದರ್ಶ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ: ಎಚ್.ಸಿ. ಮಂಜುನಾಥ್
ಕ.ಪ್ರ.ವಾರ್ತೆ ಹುಣಸೂರು ಜು. 24
ಆದರ್ಶ ಶಾಲೆಗೆ ಈಗಾಗಲೇ ಮಂಜೂರಾತಿಯಾಗಿರುವ ಭೂಮಿಯ ಪಕ್ಕದಲ್ಲಿ ಇನ್ನು ಎರಡು ಎಕರೆ ಭೂಮಿ ಪಡೆದು ಎರಡು ಅಂತಸ್ತಿನ ಸುಸಜ್ಜಿತ ಶಾಲೆ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ಇಲ್ಲಿನ ಸಮೀಪದ ಚಿಕ್ಕಹುಣಸೂರಿನ ಬಳಿಯ ಬಾಚಹಳ್ಳಿ ರಸ್ತೆಯ ಬದಿಯ ಮೂರು ಎಕರೆ ವಿಸ್ತೀರ್ಣದಲ್ಲಿ 3.40 ಕೋಟಿ ವೆಚ್ಚದಲ್ಲಿ ಕೇಂದ್ರೀಯ ಆದರ್ಶ ವಸತಿ ಶಾಲೆಗಾಗಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿ ಎರಡು ಅಂತಸ್ತಿನ ಸುಸಜ್ಜಿತ ಶಾಲೆ ನಿರ್ಮಿಸಲಾಗುವುದು. ಆದರೆ, ವಸತಿಶಾಲೆಗಾಗಿ ಒತ್ತಾಯ ಹೆಚ್ಚುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಗಳೊಂದಿಗೆ ಚರ್ಚಿಸಿ, ಈ ಭೂಮಿಯ ಪಕ್ಕದಲ್ಲಿ ಇನ್ನು ಎರಡು ಎಕರೆ ಭೂಮಿ ಪಡೆದು ವಿದ್ಯಾರ್ಥಿಗಳಿಗೆ ವಸತಿ ಕಟ್ಟಡ ನಿರ್ಮಿಸಲಾಗುವುದು. ಈವರೆಗೆ ಒಂದರಿಂದ ಐದನೆ ತರಗತಿಯವರೆಗೆ ಮಾತ್ರ ಶಿಕ್ಷಣ ನೀಡಲಾಗುತ್ತಿತ್ತು. ಈ ಬಾರಿಯಿಂದ 6 ರಿಂದ 9ನೇ ತರಗತಿಯವರೆಗೆ ಶಿಕ್ಷಣ ಮುಂದುವರಿಸಲಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ತರಗತಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಬಿಇಒ ರಾಜಶೇಖರ್, ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ, ಪುರಸಭಾ ಸದಸ್ಯರಾದ ಸುನೀತಾ ಜಯರಾಮೇಗೌಡ, ಯೋಗೀಶ್, ಮುಖ್ಯ ಶಿಕ್ಷಕ ಮೋಹನ್ರಾಜ್, ಎಸ್ಡಿಎಂಸಿ ಅಧ್ಯಕ್ಷ ಗೋವಿಂದೇಗೌಡ, ಸದಸ್ಯ ಬೋಗಪ್ಪ, ರಾಯನಹಳ್ಳಿಸ್ವಾಮಿ ಹಾಗೂ ಪೋಷಕರು ಭಾಗವಹಿಸಿದ್ದರು.