ರೋಟರಿ ಪದಾಧಿಕಾರಿಗಳ ಪದಗ್ರಹಣ
ಕೆ.ಆರ್. ನಗರ: ರೋಟರಿ ಸಂಸ್ಥೆಯ 2013- 14ನೇ ಸಾಲಿನ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಪದಗ್ರಹಣ ಸಮಾರಂಭ ಇಲ್ಲಿನ ಐಎಂಎ ಭವನದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸಿ.ಆರ್. ಮಲ್ಲಿಕಾರ್ಜುನ್ ಮತ್ತು ಕಾರ್ಯದರ್ಶಿಯಾಗಿ ರವಿಶಂಕರ್ ಅಧಿಕಾರ ಸ್ವೀಕರಿಸಿದರು. ನಂತರ ನೂತನ ಅಧ್ಯಕ್ಷರು ಮಾತನಾಡಿ, ಸಮಾಜದ ಒಳಿತಿಗಾಗಿ ಸಂಸ್ಥೆ ವತಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಪ್ರತಿ ವರ್ಷದಂತೆ ಪೊಲಿಯೋ, ಕಣ್ಣು ಮತ್ತು ಆರೋಗ್ಯದ ಉಚಿತ ತಪಾಸಣಾ ಶಿಬಿರ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ವಿಮಾ ಯೋಜನೆ, ಬಿಸಿಯೂಟ ಮಾಡಲು ವಿದ್ಯಾರ್ಥಿಗಳಿಗೆ ತಟ್ಟೆ- ಲೋಟ ವಿತರಿಸುವುದರ ಜೊತೆಗೆ ರೈತರಿಗಾಗಿ ಮತ್ತು ಅಂಗವಿಕಲರಿಗಾಗಿ ವಿಶೇಷ ಕಾರ್ಯಕ್ರಮ ಸಂಸ್ಥೆಯ ವತಿಯಿಂದ ನಡೆಸುವುದಾಗಿ ತಿಳಿಸಿದರು. ಡಾ. ಭರತೇಶ್, ಡಾ.ಎಲ್. ಅಮರನಾಥ್, ಬಿ.ಕೆ. ಸುರೇಶ್, ಬಿ.ಎ. ಸತೀಶ್, ಶಶಿಭೂಷಣ್, ವಿನಯ್ ಇದ್ದರು.
ಹೆಗ್ಗಂದೂರಲ್ಲಿ ಅಕ್ರಮ ಶೌಚಾಲಯ ತೆರವು
ಹುಣಸೂರು: ತಾಲೂಕಿನ ಹೆಗ್ಗಂದೂರು ಗ್ರಾಮದಲ್ಲಿ ಸರ್ಕಾರಿ ರಸ್ತೆಯನ್ನೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿದ್ದ ಶೌಚಾಲಯವನ್ನು ಪೊಲೀಸ್ ಬಂದೋಬಸ್ತಿನಲ್ಲಿ ತೆರವುಗೊಳಿಸುವಲ್ಲಿ ಗ್ರಾಪಂ ಯಶಸ್ವಿಯಾಗಿದೆ.
ಹನಗೋಡು ಗ್ರಾಪಂ ವ್ಯಾಪ್ತಿಯ ಹೆಗ್ಗಂದೂರಿನ ನಿವಾಸಿ, ಪೂಜಾರಯ್ಯ ಕಳೆದ 10 ವರ್ಷಗಳಿಂದ 18 ಆಡಿ ಉದ್ದದ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಈ ಸ್ಥಳದಲ್ಲಿ ಶೌಚಾಲಯ ಹಾಗೂ ತಿಪ್ಪೆಗುಂಡಿ ನಿರ್ಮಿಸಿ ಈ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಹನಗೋಡು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಣಿ, ಅಧ್ಯಕ್ಷೆ ಮಂಜುಳ ಮಹೇಶ್ ಹಾಗೂ ಸದಸ್ಯ ವೀರಭದ್ರಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶೌಚಾಲಯ ಹಾಗೂ ತಿಪ್ಪೆಗುಂಡಿಯನ್ನು ತೆರವುಗೊಳಿಸಿದರು.