'ಸರ್ಕಾರಿ ಕಚೇರಿ ದೇಗುಲವಿದ್ದಂತೆ'
ಹುಣಸೂರು: ಸರ್ಕಾರಿ ಕಚೇರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ದೇವಾಲಯಗಳು ಎಂಬುದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅರಿತುಕೊಂಡಲ್ಲಿ ಮಾತ್ರ ಸೇವೆ ಎನ್ನುವ ಪದಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಆಸ್ಪತ್ರೆಕಾವಲ್ ಗ್ರಾಪಂಗೆ 13.5 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಉದ್ಯೋಗಖಾತ್ರಿ ಯೋಜನೆಯಡಿ 10 ಲಕ್ಷ ಹಾಗೂ 13ನೇ ಹಣಕಾಸು ಯೋಜನೆಯಡಿ 3.5 ಲಕ್ಷ ಕ್ರೋಡೀಕರಣದೊಂದಿಗೆ ಕಟ್ಟಡ ನಿರ್ಮಿಸಲಾಗಿದೆ. ಪ್ರಜಾಪ್ರಭುತ್ವದ ಸದೃಢತೆ ಹಾಗೂ ಅಭಿವೃದ್ಧಿಪರ ಕಾರ್ಯವಾಗಬೇಕೆಂದರೆ ಇಂತಹ ಕಚೇರಿಗಳಲ್ಲಿ ಕುಳಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗ ಬಡಜನರ ಕಷ್ಟ- ಸುಖಕ್ಕೆ ಸೂಕ್ತವಾಗಿ ಸ್ಪಂದಿಸಿದಾಗ ಮಾತ್ರ ಸಾಧ್ಯ. ಕೇವಲ ಹೊಸ ಕಟ್ಟಡಗಳು ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ತಾಪಂ ಇಒ ಮಹದೇವಸ್ವಾಮಿ ಮಾತನಾಡಿದರು. ಜಿಪಂ ಸದಸ್ಯ ರಮೇಶ್, ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕ, ಗ್ರಾಪಂ ಅಧ್ಯಕ್ಷ ಆರ್. ರಾಮಯ್ಯ, ಉಪಾಧ್ಯಕ್ಷ ಪಿ.ಬಿ. ಸೋಮಣ್ಣ, ತಾಪಂ ಸದಸ್ಯರಾದ ಪರಮೇಶ್ವರಿ, ಜಯಂತಿ ವೀರಭದ್ರಪ್ಪ, ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ, ಜಿಪಂ ಎಇಇ ಪೂಣಚ್ಚ, ಪಿಡಿಒ ಸಣ್ಣೇಗೌಡ, ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.