ಅನ್ನಕ್ಕೆ ದೊರಕದ ಬಿಡುಗಡೆ ಭಾಗ್ಯ
- ಮಾ. ವೆಂಕಟೇಶ್
ಮೈಸೂರು: ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಹದಿನೈದು ದಿನಗಳಾಗಿದ್ದರೂ ಅದರ ಫಲಾನುಭವಿಗಳು ಮಾತ್ರ ಆ ಪ್ರಯೋಜನ ಪಡೆಯುವಲ್ಲಿ ಬವಣೆ ಪಡುತ್ತಿದ್ದಾರೆ.
ಬಡವರಿಗೆ ಕೆಜಿಗೆ 1 ದರದಲ್ಲಿ ಕೆಜಿ ಅಕ್ಕಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ನೂತನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮರುಕ್ಷಣ ಪ್ರಕಟಿಸಿದ ಈ ಯೋಜನೆಗೆ 'ಅನ್ನಭಾಗ್ಯ' ಎಂದು ಹೆಸರಿಡಲಾಯಿತು. ಜೂ. 1 ರಿಂದ ತಲಾ ಕುಟುಂಬಕ್ಕೆ ಕೆಜಿಗೆ 1 ದರದಲ್ಲಿ 30 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಹೇಳಲಾಗಿತ್ತಾದರೂ, ಅದು ಜು. 1 ಕ್ಕೆ ಮುಂದೂಡಲ್ಪಟ್ಟು, ಜು.10 ರಿಂದ ಜಾರಿಯಾಯಿತು.
ಅಂತೆಯೇ ಅರ್ಹ ಪ್ರತಿ ಕುಟುಂಬಕ್ಕೆ ತಲಾ 30 ಕೆಜಿ ಅಕ್ಕಿ ನೀಡುವುದರ ಬಗ್ಗೆ ಚರ್ಚೆ ಉಂಟಾಗಿ ನಂತರ ಅದು ಯೂನಿಟ್‌ಗೆ ಬದಲಾಯಿತು. ಏಕ ಸದಸ್ಯ ಕುಟುಂಬಕ್ಕೆ 10, ದ್ವಿಸದಸ್ಯ ಕುಟುಂಬಕ್ಕೆ 20 ಹಾಗೂ ಅದಕ್ಕಿಂತ ಹೆಚ್ಚಿದ್ದರೆ 30 ಕೆಜಿ ಅಕ್ಕಿ ನೀಡುವುದಾಗಿ ಪ್ರಕಟಿಸಲಾಯಿತು.
ನಾಮಫಲಕ: ಅಂತೂ ಇಂತೂ ವಾದ ವಿವಾದಗಳ ನಡುವೆ ಅನ್ನಭಾಗ್ಯ ಯೋಜನೆ ಜಾರಿಗೆ ಬಂದರೂ, ಅದರ ಲಾಭ ಮಾತ್ರ ಈವೆರೆಗೆ ಅನೇಕ ಜನರಿಗೆ ತಲುಪಿಲ್ಲ. ಮೈಸೂರು ನಗರದ ಕೆಲವು ನ್ಯಾಯಬೆಲೆ ಅಂಗಡಿಯ ಮುಂದೆ ರೇಷನ್ ಬಂದಿಲ್ಲ ಎಂಬ ಫಲಕ ಹಾಕಲಾಗಿದೆ.
ಇನ್ನೂ ಕೆಲವು ಅಂಗಡಿಗಳ ಮುಂಭಾಗ ಗುರುವಾರ, ಶುಕ್ರವಾರ, ಸೋಮವಾರ ರೇಷನ್ ಬರಲಿದೆ ಎಂದು ಪ್ರದರ್ಶಿಸಲಾಗಿದೆ.
ಈ ಮಧ್ಯೆ 10 ವರ್ಷಗಳ ಹಿಂದಿನ ಪಡಿತರ ಚೀಟಿದಾರರು ಬಯೋ ಮೆಟ್ರಿಕ್ ಕೈ ಬೆರಳಚ್ಚು ಹಾಗೂ ಛಾಯಾಚಿತ್ರ ತೆಗೆಸುವಲ್ಲಿ ಮುಂದಾಗಿದ್ದರೆ, ಹೊಸ ಪಡಿತರ ಚೀಟಿಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆದಿದೆ. ಇದರ ನಡುವೆ ಬಯೋವುಟ್ರಿಕ್ ತೂಕದ ಮಾಪನ ಅಳವಡಿಸಲು 3 ತಿಂಗಳ ಕಾಲಾವಕಾಶ ಕೊಡಬೇಕೆಂದು ನ್ಯಾಯಬೆಲೆ ಅಂಗಡಿದಾರರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಗಮನಿಸಬಹುದು.
ವಿಳಂಬ ಧೋರಣೆ: ಈ ಹಿಂದೆ ಅರ್ಹ ಪಡಿತರದಾರರಿಗೆ ತಿಂಗಳಿಗೆ ಕಡಿಮೆ ಎಂದರೆ 15 ಕೆಜಿಯಾದರೂ ಅಕ್ಕಿ ದೊರಕುತ್ತಿತ್ತು. ಆದರೆ, ಈ ತಿಂಗಳು ಅದು ಸಹ ಲಭ್ಯವಾಗಿಲ್ಲ. ನ್ಯಾಯಬೆಲೆ ಅಂಗಡಿಯವರು ಬಾಗಿಲು ಹಾಕುವ ಮೂಲಕ ಆಹಾರ ಪದಾರ್ಥ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ತಾರೀಖು 25 ಆಗಿದ್ದು, ಈ ಮಾಸದ ಆಹಾರ ಪಡೆಯಲು ರಜಾ ದಿನ ಹೊರತುಪಡಿಸಿದರೆ ಕೇವಲ 5 ದಿನ ಮಾತ್ರ ಬಾಕಿ ಉಳಿದಿದೆ. ಅಷ್ಟರಲ್ಲಿ 500 ರಿಂದ 800 ಮಂದಿ ಕಾರ್ಡುದಾರರಿಗೆ ಆಹಾರ ವಿತರಿಸಲು ಸಾಧ್ಯವೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ನ್ಯಾಯಬೆಲೆ ಅಂಗಡಿಗೆ ದಿನವೂ ಬಂದು ಅಲೆಯುವಂತಾಗಿದೆ. 3ಕ್ಕೆ ಕೆಜಿ ಅಕ್ಕಿ ಕೊಡುವಾಗಲೆ ಸರಿಯಾಗಿ ವಿತರಿಸುತ್ತಿದ್ದರು. ಈಗ 1 ಆದ ಮೇಲೆ ಡಿಪೋನವರು ಸರಿಯಾಗಿ ಬಾಗಿಲು ತೆಗೆಯುತ್ತಿಲ್ಲ. ಅಕ್ಕಿ ನೀಡಲು ಮುಂದಾಗಿಲ್ಲ. ರೇಷನ್ ಪಡೆಯೋಕೆ ತಿರುಗಾಡಿ ನಾಲ್ಕೈದು ದಿನದ ಕೂಲಿ ಹಾಳಾಗಿದೆ. ಆ 30 ಕೆಜಿ ಅಕ್ಕಿಭಾಗ್ಯ ಯಾವಾಗ ಸಿಗುತ್ತೋ ಆ ದೇವರಿಗೆ ಗೊತ್ತು.
-ಗೌರಮ್ಮ, ಹೆಬ್ಬಾಳು
ಪ್ರತಿತಿಂಗಳು 4 ರಿಂದ 15 ನೇ ತಾರೀಖಿನವರೆಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಪದಾರ್ಥ ವಿತರಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಈ ತಿಂಗಳು ಮಾತ್ರ 31 ರೊಳಗೆ ಪಡೆಯಬಹುದು. ಬಯೋವುಟ್ರಿಕ್ ಅಳತೆ ಮಾಪನದ ಸಂಬಂಧ ಸಮಸ್ಯೆಗಳಿರುವುದರಿಂದ ಕೆಲವು ಕಡೆ ವಿಳಂಬವಾಗಿದೆ. ಈಗಾಗಲೇ ಪಡಿತರ ಬಿಡುಗಡೆಯಾಗಿದ್ದು, ನ್ಯಾಯಬೆಲೆ ಅಂಗಡಿಯವರು ವಿತರಿಸಬೇಕಿದೆ. ನ್ಯಾಯಬೆಲೆ ಅಂಗಡಿಯವರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗಿದೆ.
-ದೇವಯ್ಯ, ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು ನಗರ