'ಅನ್ನಭಾಗ್ಯ' ಆರಂಭಿಕ ಹಿನ್ನಡೆ
ಕ.ಪ್ರ.ವಾರ್ತೆ ಟಿ.ನರಸೀಪುರ ಜು. 25
ಬಡವರಿಗೆ ಒಂದು ಕೆಜಿಗೆ ಒಂದು ರು.ನಂತೆ ಮೂವತ್ತು ಕೆ.ಜಿ ಅಕ್ಕಿ ನೀಡಬೇಕೆಂಬ ರಾಜ್ಯ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಗೆ ಪಟ್ಟಣದಲ್ಲಿ ಆರಂಭದಲ್ಲಿಯೆ ಹಿನ್ನಡೆಯಾಗಿದೆ.
ರಾಜ್ಯ ಸರ್ಕಾರದ ಇಂಥದ್ದೊಂದು ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಡವರಿಗೆ ಒಂದು ರು. ನಂತೆ ಅಕ್ಕಿ ವಿತರಿಸಲು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರು ಮೀನಮೇಷ ಎಣಿಸುತ್ತಿರುವುದರಿಂದ ಬಹುತೇಕ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡುತ್ತಿಲ್ಲ.
ಇಲ್ಲಿನ ಒಟ್ಟು ಹತ್ತು ನ್ಯಾಯ ಬೆಲೆ ಅಂಗಡಿಗಳಿದ್ದು, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಎರಡು ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾತ್ರ ವಿತರಿಸಲಾಗುತ್ತಿದೆ. ಇನ್ನುಳಿದ ಅಂಗಡಿಗಳಲ್ಲಿ ಅಕ್ಕಿ ವಿತರಣೆಗೆ ಅಕ್ಕಿಯ ದಾಸ್ತಾನನ್ನೆ ಮಾಲೀಕರು ಪಡೆದುಕೊಂಡಿಲ್ಲ. ಇದರಿಂದಾಗಿ ಇಲ್ಲಿನ ಸಾವಿರಾರು ಬಡವರಿಗೆ ಅನ್ನಭಾಗ್ಯ ಪಡಿತರ ಅಕ್ಕಿ ಸಿಗದಂತಾಗಿದೆ. ಜುಲೈ ತಿಂಗಳ ಅವಧಿ ಮುಗಿಯುತ್ತಿದ್ದರೂ ಉಗ್ರಾಣದಲ್ಲಿರುವ ಪಡಿತರ ವಿತರಣೆಯಾಗಿಲ್ಲ. ಇಂದಲ್ಲ ನಾಳೆ ಒಂದು ರು. ಅಕ್ಕಿಯನ್ನು ಕೊಡುತ್ತಾರೆ ಎಂದು ಕಾರ್ಡುದಾರರು ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದಾರೆ.
ನ್ಯಾಯಬೆಲೆ ಅಂಗಡಿ ಮಾಲೀಕರು ಅನ್ನಭಾಗ್ಯ ಯೋಜನೆ ಅಕ್ಕಿ ವಿತರಿಸಲು ಹಿಂದೇಟು ಹಾಕುತ್ತಿದ್ದರೂ, ತಹಸೀಲ್ದಾರರಾಗಲಿ ಅಥವಾ ಆಹಾರ ಇಲಾಖೆಯ ಅಧಿಕಾರಿಗಳಾಗಲಿ ಯಾವುದೆ ಕ್ರಮ ಕೈಗೊಂಡಿಲ್ಲದ್ದರಿಂದ ಸಿಎಂ ಹಾಗೂ ಲೋಕೋಪಯೋಗಿ ಸಚಿವರು ಪ್ರತಿನಿಧಿಸುವ ಪಟ್ಟಣ ಪ್ರದೇಶದಲ್ಲಿ ಅನ್ನಭಾಗ್ಯ ಯೋಜನೆ ಹಿನ್ನಡೆಯಾಗಿದೆ. ಬಡವರ ಪರವಾದ ಯೋಜನೆ ಘೋಷಿಸಿರುವುದಾಗಿ ಬೀಗುತ್ತಿರುವ ಮುಖ್ಯಮಂತ್ರಿಗಳು ತಮ್ಮ ಸ್ವ ಕ್ಷೇತ್ರದಲ್ಲಿ ಬಡವರಿಗೆ ಪಡಿತರ ಅಕ್ಕಿ ವಿತರಣೆಯಾಗದಿರುವ ಬಗ್ಗೆ ಗಮನ ಹರಿಸಬೇಕಿದೆ.
ಅಕ್ಕಿ ವಿತರಣೆ: ಇಲ್ಲಿನ ಪಿಎಲ್ಡಿ ಬ್ಯಾಂಕ್ ರಸ್ತೆಯಲ್ಲಿರುವ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಗುರುವಾರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪಡಿತರ ಕಾರ್ಡುದಾರರಿಗೆ ವಿತರಿಸಿತು.
ಬೈಲುಕುಪ್ಪೆಯಲ್ಲಿ ಸಂತೆಮಾಳ ಅವ್ಯವಸ್ಥೆ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜು. 25
ಇಲ್ಲಿಗೆ ಸಮೀಪದ 1ನೆ ಕ್ಯಾಂಪಿನಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಮಾಳ ಅವ್ಯವಸ್ಥೆಯಿಂದ ಕೂಡಿದೆ. ಟಿಬೆಟಿಯನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವ್ಯಾಪಾರಿಗಳಿಂದ ಸುಂಕ ಪಡೆದರೂ ಸುಸಜ್ಜಿತ ಸಂತೆಮಾಳ ನಿರ್ಮಿಸಿಕೊಡುವುಲ್ಲಿ ನಿರ್ಲಕ್ಷ್ಯ ತೋರಿದೆ. ಬೈಲುಕುಪ್ಪೆ ಸುತ್ತಮುತ್ತಲಿನ ಗ್ರಾಮದ ರೈತರು ತಾವು ಬೆಳೆದ ತರಕಾರಿ, ಸೊಪ್ಪು ಇತರ ತರಕಾರಿಗಳನ್ನು ಮಾರಾಟಕ್ಕೆ ತರುತ್ತಾರೆ. ವ್ಯಾಪಾರಿಗಳಿಗೆ ಹಾಗೂ ರೈತರಿಗೆ ಕುಡಿಯಲು ನೀರಿಲ್ಲ. ಶೌಚಾಲವಂತೂ ಇಲ್ಲವೆ ಇಲ್ಲ. ಬಿಸಿಲು ಮಳೆಯಲ್ಲೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಆದರೂ ವ್ಯಾಪಾರಿಗಳಿಗೆ ಮಳಿಗೆ ನಿರ್ಮಿಸಿಕೊಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳು ವಿಫಲರಾಗಿದ್ದಾರೆ. 1ನೇ ಕ್ಯಾಂಪಿನ ಮಾರ್ಗವಾಗಿ ಲಾಮಾ ಕ್ಯಾಂಪ್ ಗೋಲ್ಡನ್ ಟೆಂಪಲ್ ನೋಡುಗರು, ಕಾರು ಹಾಗೂ ವಾಹನದಲ್ಲಿ ಚಲಿಸಬೇಕು. ಈ ರಸ್ತೆಯ ಪಕ್ಕದಲ್ಲೆ ತರಕಾರಿ ಮಾರಾಟಗಾರರು ವ್ಯಾಪಾರ ಮಾಡುತ್ತಾರೆ. ಟೆಬೆಟ್ ಧರ್ಮಗುರು ದಲೈಲಾಮ ಬಂದು ಹೋಗುವವರೆಗೆ ಈ ಗುಡಾರ ತೆರೆವುಗೊಳಿಸಿದ್ದರು. ಆದರೆ ಮತ್ತೆ ವ್ಯಾಪಾರಸ್ಥರು ಗುಡಾರ ಹಾಕಿಕೊಂಡು ಪ್ರತಿದಿನ ವ್ಯಾಪಾರ ಮಾಡುತ್ತಿದ್ದಾರೆ. ಅಂತೆಯೆ ಆಟೋ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಟಿಬೆಟಿಯನ್ನರು ಹಾಗೂ ಬೈಲುಕುಪ್ಪೆ ಗ್ರಾಮಸ್ಥರು ಆರೋಪಿಸಿದ್ದಾರೆ.