ಉಪ ಚುನಾವಣೆ: ನಾಮಪತ್ರ ಸಲ್ಲಿಕೆಯಾಗಿಲ್ಲ
ಬೈಲುಕುಪ್ಪೆ: ಇಲ್ಲಿನ ಗ್ರಾಪಂನಲ್ಲಿ ತೆರವಾಗಿದ್ದ ಒಂದು ಮೀಸಲು ಮಹಿಳಾ ಸ್ಥಾನಕ್ಕೆ ಆ. 4 ರಂದು ನಡೆಯಬೇಕಿದ್ದ ಚುನಾವಣೆಗೆ ಯಾರು ನಾಮಪತ್ರ ಸಲ್ಲಿಸಿಲ್ಲ. ಜು. 17 ರಿಂದ 24 ರವರೆಗೆ ಪಂಚಾಯಿತಿಯಲ್ಲಿ ಅರ್ಜಿ ಪಡೆಯುವುದು, ಜು. 25ರಂದು ಬಂದ ಅರ್ಜಿ ಪರಿಶೀಲಿಸುವುದು. ಜು. 27 ರಂದು ಅಂತಿಮ ದಿನ ಗುರುತಿಸಿ, ಆ. 4 ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಘೋಷಿಸಿದ್ದರು. ಪಿರಿಯಾಪಟ್ಟಣದ ರೇಷ್ಮೆ ಇಲಾಖೆಯ ನಿರ್ದೇಶಕ ಎಂ.ಎಸ್. ಹೂಂಬಿ ಅವರನ್ನು ಗ್ರಾಪಂ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಜು. 17 ರಿಂದ 24 ರವರೆಗೆ ಭಾನುವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗ್ರಾಪಂಗೆ ಹಾಜರಾಗಿ ನಾಮಪತ್ರ ಸ್ವೀಕರಿಸಲು ಕಾಯುತ್ತಿದ್ದರು. ಆದರೆ, ಬುಧವಾರ 3 ರವರೆಗೆ ಅರ್ಜಿಗಳು ಬಾರದ ಕಾರಣ ಚುನಾವಣಾಧಿಕಾರಿಯವರು ಅರ್ಜಿಗಳು ಬಂದಿಲ್ಲವೆಂದು ಪಂಚಾಯಿತಿ ಬೋರ್ಡ್ ಮೇಲೆ ಅಂಟಿಸಿದ್ದಾರೆ.
ಧರ್ಮಸೇನಗೆ ಟಿಕೆಟ್ ನೀಡಲು ಮನವಿ
ಟಿ. ನರಸೀಪುರ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಧರ್ಮಸೇನ ಅವರಿಗೆ ಅವಕಾಶ ನೀಡಬೇಕೆಂದು ಕಿರಗಸೂರು ಗ್ರಾಪಂ ಸದಸ್ಯ ಬಿಲಿಗೆರೆಹುಂಡಿ ಬಸವರಾಜು ಆಗ್ರಹಿಸಿದ್ದಾರೆ.