ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಟಿ. ನರಸೀಪುರ ಪಪಂ ಮಳಿಗೆ ಹಂಚಿಕೆ ರದ್ದು

Srinivasa Murthy VN
Updated On : 26 Jul 2013, 12:07 pm

ಟಿ. ನರಸೀಪುರ: ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಅಕ್ರಮ, ಅವ್ಯವಹಾರ ನಡೆದಿರುವ ಬಗ್ಗೆ ಮಳಿಗೆ ವಂಚಿತರಿಂದ ವ್ಯಾಪಕವಾಗಿ ದೂರು ಕೇಳಿಬಂದ ಹಿನ್ನೆಲೆ, ಎಲ್ಲ ಮಳಿಗೆಗಳ ಹಂಚಿಕೆ ರದ್ದುಗೊಳಿಸಿ, ಕೀಲಿಯನ್ನು ವಾಪಸ್ ಪಡೆದುಕೊಳ್ಳುವಂತೆ ಉಪವಿಭಾಗಾಧಿಕಾರಿ ಬಸವರಾಜು ಸೂಚಿಸಿದರು.
ಪಪಂ ಸಭಾಂಗಣದಲ್ಲಿ ಗುರುವಾರ ಸಂಜೆ ಲಿಂಕ್ ಹಾಗೂ ಮಾರುಕಟ್ಟೆ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳ ಹಂಚಿಕೆ ಮಾಡಿರುವ ಬಗ್ಗೆ ಪರಿಶೀಲಿಸಿ, ಮಳಿಗೆ ವಂಚಿತರ ಅಹವಾಲು ಆಲಿಸಿ ಮಾತನಾಡಿ, ಮಳಿಗೆಗಳ ಹಂಚಿಕೆ ರದ್ದುಗೊಳಿಸಿ, ಮರು ಪರಿಶೀಲನೆ ನಡೆಸಬೇಕು ಹಾಗೂ ಮರು ಹಂಚಿಕೆ ಮಾಡುವ ಪ್ರಸ್ತಾಪವನ್ನು ಜಿಲ್ಲಾಧಿಕಾರಿಗಳ ಮುಂದಿಡಲಾಗುವುದು. ಅಲ್ಲಿಯವರೆಗೂ ಯಾವುದೆ ಮಳಿಗೆಗಳನ್ನು ಯಾರಿಗೂ ನೀಡಬಾರದು. ಕೊಟ್ಟಿರುವ ಕೀಯನ್ನು ವಾಪಸ್ ಪಡೆದುಕೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಮುಖ್ಯಾಧಿಕಾರಿ ಬಸವರಾಜು ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಜಿ. ಲಿಂಗಣ್ಣಯ್ಯ ಅವರು ಆಗಮಿಸುತ್ತಿದ್ದಂತೆ ಮಳಿಗೆಗಳ ಹಂಚಿಕೆಯಲ್ಲಿ ನಡೆದಿರುವ ಗೋಲ್‌ಮಾಲ್ ವಿರುದ್ಧ ದೂರುಗಳ ಕೇಳಿ ಬರಲು ಆರಂಭಿಸಿದವು. ಯುವ ಮುಖಂಡ ಎಸ್‌ಎಸ್‌ಕೆ ನವೀನ್ ಮಾತನಾಡಿ, ಮಳಿಗೆಗಳ ಹಂಚಿಕೆ ನ್ಯಾಯಯುತವಾಗಿ ನಡೆದಿಲ್ಲ. ಮಳಿಗೆಗಳಿಗಾಗಿ ಸಂಘ ಕಟ್ಟಿಕೊಂಡವರಿಗೆ ಅಕ್ಕಪಕ್ಕದಲ್ಲಿಯೆ ಮಳಿಗೆ ನೀಡಲಾಗಿದೆ. ಲಾಟರಿಯಲ್ಲಿ ಆಯ್ಕೆ ಮಾಡಿದರೆ ಈ ರೀತಿ ಮಳಿಗೆ ಸಿಗುವುದಿಲ್ಲ. ಅಕ್ರಮದ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಲಾಗಿತ್ತು. ಕೀ ಹಿಂಪಡೆಯುವುದಾಗಿ ಲಿಖಿತ ಹೇಳಿಕೆ ಕೊಟ್ಟು ಸಂಜೆ ಮಳಿಗೆಗಳನ್ನು ವಿತರಿಸಿದರು ಎಂದು ಆರೋಪಿಸಿದರು.
ದೂರು ಆಲಿಸಿದ ಉಪವಿಭಾಗಾಧಿಕಾರಿ, ನಮ್ಮ ಸೂಚನೆ ಮೀರಿ ಮುಖ್ಯಾಧಿಕಾರಿಗಳು ನಡೆದುಕೊಂಡರೆ ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ಹಾಗೂ ಮುಖ್ಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿದರಲ್ಲದೆ, ವಾಣಿಜ್ಯ ಮಳಿಗೆಗಳ ಹಂಚಿಕೆಯನ್ನು ಸಮರ್ಪಕವಾಗಿ ವಿತರಣೆ ಮಾಡದೆ ಅಕ್ರಮ ನಡೆದಿರುವ ಬಗ್ಗೆ ದೂರು ಕೇಳಿ ಬಂದದ್ದರಿಂದಲೇ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರಿಂದ ನಾವು ಮತ್ತು ಯೋಜನಾಧಿಕಾರಿಗಳು ಪರಿಶೀಲನೆ ನಡೆಸಲು ಬಂದಿದ್ದೇವೆ ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಜಿ. ಲಿಂಗಣ್ಣಯ್ಯ ಮಾತನಾಡಿ, 116 ಮಳಿಗೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು 16 ರಿಂದ 20 ಮಂದಿ ದೂರನ್ನು ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯ ನಂತರ ಮತ್ತೊಂದು ದಿನ ಸಭೆಯೊಂದನ್ನು ಕರೆಯಲಾಗುವುದು. ಸಭೆಗೆ ಎಲ್ಲರೂ ಭಾಗವಹಿಸಿ ಮಾಹಿತಿ ನೀಡಬೇಕು. ಮಳಿಗೆಗಳ ಹಂಚಿಕೆಯಲ್ಲಿನ ಅನ್ಯಾಯ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಮಂಜೂರಾತಿ ಪತ್ರ ವಿತರಿಸದೆ, ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.  ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಕುಬೇರಪ್ಪ, ಪಪಂ ಸದಸ್ಯ ಸಿ. ಉಮೇಶ್, ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ, ಮುಖಂಡ ಬಿ. ಮಹದೇವ, ರಮೇಶ್, ವೇಣುಗೋಪಾಲ, ಅಮ್ಜದ್‌ಖಾನ್, ನೀಲಮ್ಮ, ಬಸವರಾಜು, ರಘು, ಶ್ರೀಕಂಠ, ಮಹದೇವ, ಮಂಜು, ಕಟ್ಟಹುಂಡಿ ರಘು, ದಸಂಸ ಸಂಚಾಲಕ ರಾಜು, ಸಂಘಟನಾ ಸಂಚಾಲಕ ಮಹದೇವಯ್ಯ, ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement